ಅಲ್ಲಮ ಪ್ರಭು ವಚನ | 1600+ Allama Prabhu Vachanagalu in Kannada

    Allama Prabhi Vachana in Kannada

    Allama Prabhu was a 12th-century mystic-saint and Vachana poet of the Kannada language. He is one of the celebrated poets and the patron saint of the Lingayata movement that reshaped medieval Karnataka society and popular Kannada literature. This page has collection of Allama Prabhu Vachanagalu in Kannada language script.

    He is included among the “Trinity of Lingayathism”.

    ಅಲ್ಲಮ ಪ್ರಭು, ೧೨ನೆಯ ಶತಮಾನದ ವಚನಕಾರರಲ್ಲಿ ಪ್ರಸಿದ್ಧನಾದವರು. ಅತ್ಯಂತ ನೇರ ನಿಷ್ಠುರವಾದಿ. ಅನೇಕ ಶಿವಶರಣ, ಶಿವಶರಣೆಯರಿಗೆ ಭಕ್ತಿ-ವೈರಾಗ್ಯವನ್ನು ಬೋಧಿಸಿದರು. ತನ್ನ ವಚನಗಳ ಮೂಲಕ ಅಂತರಂಗ, ಬಹಿರಂಗಗಳನ್ನು ಶೋಧಿಸಲೆತ್ನಿಸಿದರು.

    Download PDF version of Allama Prabhu Vachanagalu in Kannada (with 1600+ verses)

    ಅಲ್ಲಮ ಪ್ರಭು ವಚನ – Allama Prabhu Vachana in Kannada Script

    Allama Prabhu Vachanagalu in Kannada

    ಅಂಗ ಅಂಗನೆಯ ರೂಪಲ್ಲದೆ,
    ಮನ ವಸ್ತುಭಾವದಲ್ಲಿ ಬೆಚ್ಚಂತಿಪ್ಪುದು.
    ಬಂದ ಕಥನದಲ್ಲಿ ಬಂದು ಹಿಂಗಿದೆಯಲ್ಲಾ ಅಕ್ಕಾ !
    ಗುಹೇಶ್ವರಲಿಂಗದಲ್ಲಿ ಉಭಯನಾಮವಳಿದೆ ಎನ್ನಕಾ/1

    ಅಂಗ ಅನಂಗವೆಂಬೆರಡೂ ಅಳಿದು ನಿಜದಲ್ಲಿ ನಿಂದ ಲಿಂಗೈಕ್ಯನ
    ಅಂಗದಲುಳ್ಳ ಕ್ರೀಗಳೆಲ್ಲವೂ ಲಿಂಗಕ್ರೀಗಳು ನೋಡಾ.
    ಮನೋಲಯವಾಗಿಪ್ಪ ಲಿಂಗೈಕ್ಯನ ಅನುಭಾವವೆಲ್ಲವೂ
    ಜ್ಞಾನನಷ್ಟ ಶಬ್ದ ನೋಡಾ. ಳ
    ತನ್ನಲ್ಲಿ ತಾನು ತದ್ಗತವಾಗಿಪ್ಪ ಶಿವಯೋಗಿಗೆ
    ಬಿನ್ನವಿಲ್ಲ ನೋಡಾ- ಗುಹೇಶ್ವರ ಸಾಕ್ಷಿಯಾಗಿ/2

    ಅಂಗ ಉಳ್ಳನ್ನಬರ ಲಿಂಗಪೂಜೆಯ ಬೇಕು.
    ಲಿಂಗವೆಂಬ ಮೂರ್ತಿ ಉಳ್ಳನ್ನಬರ ಸಂದಿಲ್ಲದೆ ಅರ್ಪಿಸಬೇಕು.
    ಅಂಗವಳಿದ ಮತ್ತೆ ಲಿಂಗವೆಂಬ ಭಾವ ಹಿಂಗದಿರಬೇಕು.
    ಅದು ಗುಹೇಶ್ವರಲಿಂಗದ ಇರವು ಚಂದಯ್ಯಾ./3

    ಅಂಗ ಮೂವತ್ತಾರರ ಮೇಲೆ ಲಿಂಗ.
    ನಿಸ್ಸಂಗವೆಂಬ ಕರದಲ್ಲಿ ಹಿಡಿದು ಅಂಗವಿಸಿ,
    ಅಹುದು ಆಗದು ಎಂಬ ನಿಸ್ಸಂಗದ ಅರ್ಪಣವ ಮಾಡಿ
    ಸುಸಂಗ ಪ್ರಸಾದವ ಕೊಳಬಲ್ಲವಂಗೆ
    ಗುಹೇಶ್ವರಾ, ಮುಂದೆ ಬಯಲು ಬಯಲು ಬಟ್ಟ ಬಯಲು !/4

    ಅಂಗ ಲಿಂಗದಲ್ಲಿ ತರಹರವಾಗಿ, ಸಮತೆ ಶಾಂತಿಯಲ್ಲಿ ತರಹರವಾಗಿ,
    ಮನ ಜ್ಞಾನದಲ್ಲಿ ತರಹರವಾಗಿ, ಭಾವ ನಿರ್ಭಾವದಲ್ಲಿ ತರಹರವಾಗಿ ಇರಬಲ್ಲಡೆ,
    ಆತನೆ ಅಚ್ಚಶರಣನು ಕಾಣಾ ಗುಹೇಶ್ವರಾ./5

    ಅಂಗಕ್ಕೆ ಆಚಾರವಾಗಿ ಕಳೆಗಳುಳ್ಳನ್ನಕ್ಕ
    ಸಕಲ ಪದಾರ್ಥವ ಲಿಂಗಕ್ಕೆ ಕೊಟ್ಟಲ್ಲದೆ ಕೊಳಲಾಗದು.
    ಲಿಂಗವ ಬಿಟ್ಟು ಕಳೆ ಹಿಂಗಿದ ಬಳಿಕ ಅಂಗವೇನು ಬಲ್ಲುದೊ ?
    ಕಪ್ಪಡಿಯ ಸಂಗಮನಾಥನಲ್ಲಿ ಐಕ್ಯವಾದಂದಿಂಗೆ ನಿಜವ ಮರೆ.
    ಗುಹೇಶ್ವರಲಿಂಗ ಸಾಕ್ಷಿಯಾಗಿ,
    ಸಂಗನಬಸವಣ್ಣಾ ಅರ್ಪಿತವಿಲ್ಲದೆ ಕೊಳದಿರು ಅನರ್ಪಿತವ./6

    ಅಂಗಕ್ಕೆಂದಡೆ ಹಿರಿಯ ಹರಿವಾಣವ ತುಂಬಿ ಬೋನವ ತಾ ಎಂಬರು.
    ಲಿಂಗಕ್ಕೆಂದಡೆ ಚಿಕ್ಕ ಗಿಣ್ಣಿಲು ತುಂಬಿ ಬೋನವ ತಾ ಎಂಬರು.
    ಅಂಗವ ಹಿರಿದು ಮಾಡಿ ಲಿಂಗವ ಕಿರಿದು ಮಾಡಿ
    ಮನೆಯಲ್ಲಿ ಮಡಕೆ ತುಂಬಿ ಬೋನವ ಮಾಡಿ,
    ಚಿಕ್ಕ ಕುಡಿಕೆ ಗಿಣ್ಣಿಲು ಲಿಂಗಕ್ಕೆ ಬೋನವ ಹಿಡಿವ
    ಈ ಮಡಕೆಮಾರಿಗಳನೇನೆಂಬೆ ಗುಹೇಶ್ವರಾ./7

    ಅಂಗಜಂಗುಳಿಗಳೆಲ್ಲಾ ಅಶನಕ್ಕೆ ನೆರೆದರು.
    ಲಿಂಗದ ಹವಣನಿವರೆತ್ತ ಬಲ್ಲರು ?
    ಕಾಯಜೀವಿಗಳು ಕಳವಳಧಾರಿಗಳು,
    ದೇವರ ಸುದ್ದಿಯನಿವರೆತ್ತ ಬಲ್ಲರು ?
    ಮದ್ಯಪಾನವನುಂಡು ಮದವೆದ್ದ ಜೋಗಿಯಂತೆ ನುಡಿವರು.
    ಗುಹೇಶ್ವರನ ನಿಲವನಿವರೆತ್ತ ಬಲ್ಲರು./8

    ಅಂಗಜೀವಿಗಳೆಲ್ಲಾ ಅಶನಕ್ಕೆ ನೆರೆದು, ಲಿಂಗವಾರ್ತೆಯ ನುಡಿವರಯ್ಯಾ.
    ಕಾಯಜೀವಿಗಳೆಲ್ಲಾ ಕಳವಳಿಸಿ ನುಡಿವರಯ್ಯಾ.
    ಮನಬಂದ ಪರಿಯಲ್ಲಿ ನುಡಿವಿರಿ,
    ಗುಹೇಶ್ವರಲಿಂಗ ನಿಮಗೆಲ್ಲಿಯದೊ ?/9

    ಅಂಗದ ಕಳೆ ಲಿಂಗದಲ್ಲಿ ಅರತ ಬಳಿಕ,
    ಅಂಗವೆಂಬ ಶಂಕೆಯಿಲ್ಲ ನೋಡಾ ಶರಣಂಗೆ.
    ಪ್ರಾಣದ ಕಳೆ ಅರಿವಿನಲ್ಲಿ ಅರತ ಬಳಿಕ,
    ಶಬ್ದಸಂದಣಿಗೆ ಹಂಗಿಲ್ಲ ನೋಡಾ.
    ಶರಣ ನಡೆದಡೆ ನಿರ್ಗಮನಿ ನುಡಿದಡೆ ನಿಶ್ಶಬ್ದಿ !
    ಗುಹೇಶ್ವರನ ಶರಣಂಗೆ ಕುರುಹಿಲ್ಲ ಕೇಳಾ ಎಲೆ ಅವ್ವಾ./10

    ಅಂಗದ ಕಳೆಯಲೊಂದು ಲಿಂಗವ ಕಂಡೆ.
    ಲಿಂಗದ ಕಳೆಯಲೊಂದು ಅಂಗವ ಕಂಡೆ.
    ಅಂಗ ಲಿಂಗ[ದ]ಸಂದಣಿಯನರಸಿ ಕಂಡೆ, ನೋಡಿರೆ.
    ಇಲ್ಲಿಯೆ ಇದಾನೆ ಶಿವನು ! ಬಲ್ಲಡೆ ಇರಿಸಿಕೊಳ್ಳಿರೆ;
    ಕಾಯವಳಿಯದ ಮುನ್ನ ನೋಡಬಲ್ಲಡೆ.
    ಗುಹೇಶ್ವರಲಿಂಗಕ್ಕೆ ಬೇರೆಠಾವುಂಟೆ ಹೇಳಿರೆ ?/11

    ಅಂಗದ ಕೈಯಲ್ಲಿ ಲಿಂಗ, ಮನದ ಕೈಯಲ್ಲಿ ಸಂಸಾರ,
    ಎಂತಯ್ಯಾ ನಿನ್ನ ಪ್ರಾಣಲಿಂಗವೆಂಬೆ ?
    ಹೊರಗೆ ಕುರುಹಾಗಿ ತೋರುತ್ತಿದೆ.
    ತನುವಿಗೆ ತನು ಸಯವಾಗದು ಮನಕ್ಕೆ ಮನ ಸಯವಾಗದು
    ಎಂತಯ್ಯಾ ನಿನ್ನ ಪ್ರಾಣಲಿಂಗವೆಂಬೆ ಗುಹೇಶ್ವರಾ./12

    ಅಂಗದ ಕೊನೆಯ ಮೇಲಣ ಕೋಡಗ ಕೊಂಬಿಗೆ ಹಾರಿತ್ತು,
    ಅಯ್ಯಾ ಇದು ಸೋಜಿಗ !-
    ಕಯ್ಯ ನೀಡಲು ಮೈಯೆಲ್ಲವನು ನುಂಗಿತ್ತು
    ಒಯ್ಯನೆ ಕರೆದಡೆ ಮುಂದೆ ನಿಂತಿತ್ತು
    ಮುಯ್ಯಾಂತಡೆ ಬಯಲಾಯಿತ್ತು-ಗುಹೇಶ್ವರಾ !/13

    ಅಂಗದ ಧರೆಯ ಮೇಲೆ ಮೂರು ಬಾವಿಯುಂಟು:
    ಮೊದಲ ಬಾವಿಯ ಮುಟ್ಟಿದಾತ ಅಂಗಸಂಗಿಯಾದನು.
    ನಡುವಡ ಬಾವಿಯ ಮುಟ್ಟಿದಾತ ಉತ್ಪತ್ಯ-ಸ್ಥಿತಿ-ಲಯಕ್ಕೊಳಗಾದನು.
    ಮೇಲಣ ಬಾವಿಯ ಮುಟ್ಟಿದಾತ ಜೀವನ್ಮುಕ್ತನಾದನು.-
    ಇವ ತಟ್ಟದೆ ಮುಟ್ಟದೆ ಹೋದರು ನೋಡಾ, ಪರಬ್ರಹ್ಮವ ದಾಂಟಿ,
    ಗುಹೇಶ್ವರಲಿಂಗದಲ್ಲಿ ಹಂಗು ಹರಿದ ಶರಣರು/14

    ಅಂಗದ ಮೇಲಣ ಲಿಂಗವ ಹಿಂಗಿ ಸ್ಥಾವರಲಿಂಗಕ್ಕೆರಗುವ
    ಭಂಗಿತರ ಮುಖವ ನೋಡಲಾಗದು.
    ಅದೆಂತೆಂದಡೆ;
    ತನ್ನ ಗಂಡನ ಬಿಟ್ಟು ಅನ್ಯ ಗಂಡರಿಗೆರಗುವ
    ಹಾದರಗಿತ್ತಿಯಂತೆ ಅವಂದಿರ ಭಕ್ತಿ.
    ಅಂತಪ್ಪ ಪಂಚಮಹಾಪಾತಕರ
    ಮುಖದತ್ತ ತೋರದಿರಾ ಗುಹೇಶ್ವರಾ/15

    ಅಂಗದ ಮೇಲಣ ಲಿಂಗವ ಹಿಂಗಿದಾತನ ಭವಿಯೆಂಬರು,
    ಅಂಗದ ಮೇಲಣ ಲಿಂಗವು ಇಪ್ಪಾತನ ಭಕ್ತನೆಂಬರು,
    ಅಂಗದೊಳಗೆ ಬೆರಸಿಪ್ಪ ಲಿಂಗದ ಹೊಲಬನರಿಯದೆ.
    ಲಿಂಗವಿಲ್ಲದೆ ಒಂದು ಕ್ಷಣ ಒಂದಂಗ ಸುಳಿದುದುಂಟೆ ಜಗದೊಳಗೆ ?
    ಅಂಗದೊಳಗಣ ಲಿಂಗವನು ಹಿಂಗಿದವರಿಗೆ
    ಭವಮಾಲೆಯುಂಟು,
    ಹಿಂಗದವರಿಗೆ ಭವಮಾಲೆಯಿಲ್ಲ ಗುಹೇಶ್ವರಾ./16

    ಅಂಗದ ಮೇಲೆ ಲಿಂಗ, ಲಿಂಗದ ಮೇಲೆ ಅಂಗವಿದೇನೊ ?
    ಮನದ ಮೇಲೆ ಅರಿವು, ಅರಿವಿನ ಮೇಲೆ ಕುರುಹು ಇದೇನೊ ?
    ನೀನೆಂಬಲ್ಲಿ ನಾನು, ನಾನೆಂಬಲ್ಲಿ ನೀನು.
    ನೀ'ನಾ’ ಎಂಬುದೆ?-ತೆರಹಿಲ್ಲ ಗುಹೇಶ್ವರಾ./17

    ಅಂಗದ ಮೇಲೆ ಲಿಂಗವರತು, ಲಿಂಗದ ಮೇಲೆ ಅಂಗವರತು
    ಭಾವತುಂಬಿ ಪರಿಣಾಮವರತು,
    ನಾಮವಿಲ್ಲದ ದೇವರಿಗೆ ನೇಮವೆಲ್ಲಿಯದೊ ಗುಹೇಶ್ವರಾ./18

    ಅಂಗದ ಮೇಲೆ ಲಿಂಗಸಂಬಂಧವಾದ ಬಳಿಕ,
    ಪ್ರಾಣದ ಮೇಲೆ ಜ್ಞಾನ ನಿಧರ್ಾರವಾಯಿತ್ತು ನೋಡಾ.
    ಒಳಹೊರಗೆಂಬ ಉಭಯವು ಏಕಾರ್ಥವಾಯಿತ್ತು,
    ಗುಹೇಶ್ವರಾ ನಿಮ್ಮ ನೆನೆದೆನಾಗಿ./19

    ಅಂಗದ ಲಿಂಗವೆ ಮನದ ಲಿಂಗ, ಮನದ ಲಿಂಗವೆ ಭಾವದ ಲಿಂಗ,
    ಭಾವದ ಲಿಂಗವೆ ಜಂಗಮದಾಸೋಹ,
    ದಾಸೋಹವೆಂಬುದು ಸಂದಿಲ್ಲದ ನಿಜ ನೋಡಾ.
    ಅದರಂದವನೆ ತಿಳಿದು ನಿಂದ ನಿಲುಕಡೆಯ ಭೇದವ
    ಕೇಳಬೇಕೆಂದು ಬಂದಲ್ಲಿಯೆ ತಿಳುಹಬೇಕಯ್ಯಾ.
    ಇಂತೀ ಪ್ರಕಾರದಲ್ಲಿ ಸಂದ ಸೌಖ್ಯದ ಭೇದವನು,
    ಸಂದಿಲ್ಲದ ಲಿಂಗದ ನಿಜವನು,
    ಇಂದು ನಮ್ಮ ಗುಹೇಶ್ವರಲಿಂಗದಲ್ಲಿ
    ಚಂದಯ್ಯಂಗೆ ತಿಳುಹಿ ಕೊಡಾ ಚೆನ್ನಬಸವಣ್ಣಾ./20

    ಅಂಗದಲಪ್ಪಿದೆನೆಂದಡೆ ಸಿಲುಕದು,
    ಪ್ರಾಣದಲಪ್ಪಿದೆನೆಂದಡೆ ಸಿಲುಕದು,
    ಭಾವದಲಪ್ಪಿದೆನೆಂದಡೆ ಸಿಲುಕದು,
    ಸೂಕ್ಷ್ಮತನುವಿನ ಮನದ ಕೊನೆಯ ಮೇಲೆ
    ಅಪ್ಪಿದೆನೆಂದಡೆ ಸಿಲುಕದು.
    ಭಾವಾತೀತವಾದ ನಿರಾಕಾರದ ಘನವು
    ಸುಜ್ಞಾನದ ಮುಖಕ್ಕೆ ಅಸಾಧ್ಯ ನೋಡಾ !
    ಗುಹೇಶ್ವರನ ಶರಣರನಿನ್ನಾವ ಪರಿಯಲ್ಲಿ
    ತಡೆದು ನಿಲ್ಲಿಸುವೆ ಹೇಳಾ- ಸಿದ್ಧರಾಮಯ್ಯಾ ?/21

    ಅಂಗದಲಳವಟ್ಟ ಲಿಂಗೈಕ್ಯನ ಸಂಗವನಾರಿಗೂ ಕಾಣಬಾರದು ನೋಡಾ.
    ಪ್ರಾಣದ ಕೊನೆಯ ಮೊನೆಯ ಮೇಲೆ, ಭಾವಸೂತಕದ ಹೊದಕೆಯ ಕಳೆದು,
    ನಿರ್ಭಾವ ನಿಸ್ಸೂತಕಿಯಾಗಿಪ್ಪ ನಿಜಲಿಂಗ ಸಮಾದಿಯ ಘನವನು
    ಆರಿಗೆಯೂ ಕಾಣಬಾರದು ನೋಡಾ.
    ಗುಹೇಶ್ವರಲಿಂಗದಲ್ಲಿ ಸಂಗನಬಸವಣ್ಣನ ನಿಲವ ಕಂಡು
    ನಾನು ಬದುಕಿದೆನು ಕಾಣಾ ಚೆನ್ನಬಸವಣ್ಣಾ. /22

    ಅಂಗದಲ್ಲಿ ಅಳವಟ್ಟಿಪ್ಪ ಆಚಾರವೆ ಲಿಂಗವೆಂದರಿದನು,
    ಮನದಲ್ಲಿ ಬೆಳಗುತ್ತಿಪ್ಪ ಅರಿವೆ ಜಂಗಮವೆಂದರಿದನು,
    ಈ ಎರಡರ ಸಂಗವೆ ತಾನೆಂದರಿದನು
    ಮಾಡುವ ದಾಸೋಹವೆ ಲಿಂಗಜಂಗಮವೆಂದರಿದನು
    ನಮ್ಮ ಗುಹೇಶ್ವರಲಿಂಗದಲ್ಲಿ,
    ಸಂಗನಬಸವಣ್ಣನ ನಿಲವನರಿಯಬೇಕು ಕೇಳಾ ಚಂದಯ್ಯಾ./23

    ಅಂಗದಲ್ಲಿ ಆಚಾರವ ಸ್ವಾಯತವ ಮಾಡಿಕೊಂಡನಯ್ಯಾ ಬಸವಣ್ಣನು.
    ಆಚಾರದಲ್ಲಿ ಪ್ರಾಣವ ಸ್ವಾಯತವ ಮಾಡಿಕೊಂಡನಯ್ಯಾ ಬಸವಣ್ಣನು.
    ಪ್ರಾಣದಲ್ಲಿ ಲಿಂಗವ ಸ್ವಾಯತವ ಮಾಡಿಕೊಂಡನಯ್ಯಾ ಬಸವಣ್ಣನು.
    ಲಿಂಗದಲ್ಲಿ ಜಂಗಮವ ಸ್ವಾಯತವ ಮಾಡಿಕೊಂಡನಯ್ಯಾ ಬಸವಣ್ಣನು.
    ಜಂಗಮದಲ್ಲಿ ಪ್ರಸಾದವ ಸ್ವಾಯತವ ಮಾಡಿಕೊಂಡನಯ್ಯಾ ಬಸವಣ್ಣನು.
    ಪ್ರಸಾದದಲ್ಲಿ ನಿತ್ಯವ ಸ್ವಾಯತವ ಮಾಡಿಕೊಂಡನಯ್ಯಾ ಬಸವಣ್ಣನು.
    ನಿತ್ಯದಲ್ಲಿ ದಾಸೋಹವ ಸ್ವಾಯತವ ಮಾಡಿಕೊಂಡನಯ್ಯಾ ಬಸವಣ್ಣನು.
    ದಾಸೋಹದಲ್ಲಿ ತನ್ನ ಮರೆದು,
    ನಿಶ್ಚಿಂತನಿವಾಸಿಯಾಗಿ ಐದಾನೆ ಗುಹೇಶ್ವರಲಿಂಗದಲ್ಲಿ.
    ಸಂಗನಬಸವಣ್ಣನ ಶ್ರೀಪಾದಕ್ಕೆ ಶರಣೆಂದು
    ಧನ್ಯರಾಗಬೇಕು ನಡೆಯಾ- ಸಿದ್ಧರಾಮಯ್ಯಾ/24

    ಅಂಗದಲ್ಲಿ ಮಾಡುವ ಸುಖ, ಲಿಂಗಕ್ಕದು ಭೂಷಣವಾಯಿತ್ತು.
    ಕಾಡುಗಿಚ್ಚಿನ ಕೈಯಲ್ಲಿ ಕರಡ ಕೊಯಿಸುವಂತೆ-
    ಹಿಂದೆ ಮೆದೆಯಿಲ್ಲ ಮುಂದೆ ಹುಲ್ಲಿಲ್ಲ.
    ಅಂಗ ಲಿಂಗವೆಂಬನ್ನಕ್ಕರ ಫಲದಾಯಕ.
    ಲಿಂಗೈಕ್ಯವದು ಬೇರೆ ಗುಹೇಶ್ವರಾ. /25

    ಅಂಗದೊಳಗಣ ಲಿಂಗ, ಲಿಂಗದೊಳಗಣ ಅಂಗ;
    ಅಂಗ-ಲಿಂಗ ಸಂಗ ಹಿಂಗದಂತೆ ಮಾಡಿರೆ.
    ದೇವ ದೇವ ಎಂಬಿರಿ ಬಲ್ಲವರು,
    ಲಿಂಗವ, ಬಲ್ಲವರು ಹಿಡಿದುಕೊಳ್ಳಿರೆ !
    ತಾ ಸತ್ತು ಲಿಂಗವ ಕೂಡಿಹೆನೆಂದಡೆ
    ಗುಹೇಶ್ವರಂಗೆ ಬೇರೊಂದುಠಾವುಂಟೆ ಹೇಳಿರೆ ?/26

    ಅಂಗದೊಳಗಣ ಸವಿ, ಸಂಗದೊಳಗಣ ರುಚಿ,
    ಅಂಗನೆಯ ನಖದೊಳಗೆ ಬಂದು ಮೂರ್ತಿಯಾಯಿತ್ತು !
    ಚಂದ್ರಕಾಂತದ ಗಿರಿಗೆ ಬಿಂದುತೃಪ್ತಿಯ ಸಂಚ !
    ಅದರಂದದೊಳಗಣ ಭ್ರಮೆಯ ಪಿಂಡದಾಹುತಿ ನುಂಗಿತ್ತು.
    ಚಂದ್ರಮನ ಷೋಡಶಕಳೆಯ ಇಂದ್ರನ ವಾಹನ ನುಂಗಿ,
    ಗುಹೇಶ್ವರನೆಂಬ ನಿಲವ ನಖದ ಮುಖ ನುಂಗಿತ್ತು/27

    ಅಂಗದೊಳಗೆ ಮಹಾಲಿಂಗವಿರಲು,
    ಕೈಯ ಲಿಂಗ ಬಿದ್ದಿತ್ತೆಂದು ನೆಲದೊಳಗಂಗವ ಹೂಳಿ
    ಭಂಗಪಡುವರಲ್ಲಾ,
    ಗುಹೇಶ್ವರಲಿಂಗವನರಿಯದ ಜಡರು./28

    ಅಂಗದೊಳಗೆ ಲಿಂಗ ಲಿಂಗದೊಳಗೆ ಅಂಗ !
    ಅಂಗವಿಲ್ಲದೆ ಬೇರೆ ಸಂಗವಿಲ್ಲ ಕಾಣಿರೆ.
    ಅದೆಂತೆಂದಡೆ;
    “ಲಿಂಗಸ್ಥಲಂ ಶಿವಃ ಸಾಕ್ಷಾತ್ ಜೀವಾತ್ಮಾಂಗಸ್ಥಲಂ ಭವೇತ್
    ಲಿಂಗಾಂಗಸ್ಥಲಯೋರೈಕ್ಯಂ ಶಿವಜೀವೈಕ್ಯಮೇವಹಿ ” ಎಂದುದಾಗಿ.
    ಲಿಂಗವಿದ್ದೆಡೆಯ ನೀವು ತಿಳಿದು ನೋಡಿ ಕೂಡಿಕೊಳ್ಳಿ.
    ಕಾಯವಳಿಯದ ಮುನ್ನವೆ ಕೂಡಿಕೊಳ್ಳಬಲ್ಲಡೆ,
    ಗುಹೇಶ್ವರನು ಬೇರಿಲ್ಲ ಕಾಣಿರೆ./29

    ಅಂಗನೆಯ ಮೊಲೆ ಲಿಂಗವೆ ? ಬಳ್ಳ ಲಿಂಗವೆ ?
    ಕಿತ್ತು ಬಹ ಸಾಣೆ ಲಿಂಗವೆ ? ಆಡಿನ ಹಿಕ್ಕಿ ಲಿಂಗವೆ ?
    ಮೆಚ್ಚುವರೆ ಪ್ರಮಥರು ? ಮೆಚ್ಚುವರೆ ಪುರಾತನರು, ನಿಮ್ಮ ಭಕ್ತರು ?
    ಭಾವಭ್ರಮೆಯಳಿದು, ಗುಹೇಶ್ವರಾ
    ನಿಮ್ಮಲ್ಲಿ ಅನಾದಿಸಂಸಿದ್ಧವಾದ ಜಂಗಮವನರಿದಾತ
    ಬಸವಣ್ಣನೊಬ್ಬನೆ./30

    ಅಂಗವಿಕಾರ ಆಚಾರದೊಳಡಗಿ, ಆಚಾರಕ್ರೀಗಳು ಗುರುವಿನೊಳಡಗಿ,
    ಗುರುವೆನ್ನ ಅಂಗದೊಳಗಡಗಿ; ಅಂಗ ಲಿಂಗನಿಷ್ಠೆಯೊಳಡಗಿ,
    ಲಿಂಗನಿಷ್ಠೆ ಅಂಗದಾಚರಣೆಯ ಆಚಾರವಾವರಸಿ,
    ಆಚಾರದ ನಿಲವ ಗುರುಮೂರ್ತಿಯಾವರಸಿ,
    ಗುರುಮೂರ್ತಿಯ ಸರ್ವಾಂಗವಾವರಸಿ,
    ಸರ್ವಾಂಗವ ಲಿಂಗನಿಷ್ಠೆಯಾವರಿಸಿ, ಲಿಂಗನಿಷ್ಠೆಯ ಸಾವಧಾನವಾವರಿಸಿ,
    ಸಾವಧಾನವ ಸುವಿಚಾರವಾವರಿಸಿ, ಸುವಿಚಾರವ ಮಹಾಜ್ಞಾನವಾವರಿಸಿ,
    ಮಹಾಜ್ಞಾನದೊಳಗೆ ಪರಮಾನಂದನಿಜನಿಂದು
    ನಿಜದೊಳಗೆ ಪರಮಾಮೃತ ತುಂಬಿ-
    ಮೊದಲ ಕಟ್ಟೆಯನೊಡೆದು, ನಡುವಣ ಕಟ್ಟೆಯನಾಂತು ನಿಂದು,
    ನಡುವಣ ಕಟ್ಟೆಯೂ ಮೊದಲ ಕಟ್ಟೆಯೂ ಕೂಡಿ ಬಂದು,
    ಕಡೆಯಣ ಕಟ್ಟೆಯನಾಂತುದು.
    ಈ ಮೂರುಕಟ್ಟೆಯೊಡೆದ ಮಹಾಜಲವನು ಪರಮಪದವಾಂತುದು.
    ಆ ಪದದಲ್ಲಿ ನಾನು ಎರಗಿ, ಪಾದೋದಕವ ಕೊಂಡು
    ಎನ್ನ ನಾನರಿಯದಾದೆ ಕಾಣಾ ಗುಹೇಶ್ವರಾ./31

    ಅಂಗವಿಕಾರಿ ಲಿಂಗವಿಕಾರಿಯನರಿಯ.
    ಲಿಂಗವಿಕಾರಿ ಅಂಗವಿಕಾರಿಯನರಿಯ.
    ಅಂಗವೇ ದಿಂಡುನಾಳ ಲಿಂಗವೇ….. ನವ ಸುರಾಳ
    ಕಳಚಿದಡೆ ತೋರಲಿಲ್ಲ, ತೋರಿದಡೆ ಬೆಚ್ಚಲಿಲ್ಲ.
    ಸುರುಳಿನೊಳಗೆ ಸುತ್ತಿ ಹೊರಗಿರಿಸಿದೆನು ಕಾಣಾ-ಗುಹೇಶ್ವರಾ. /32

    ಅಂಗವಿಡಿದಂಗಿಯನೇನೆಂಬೆ ?
    ಆರನೊಳಕೊಂಡ ಅನುಪಮನು ನೋಡಾ !
    ಮೂರರ ಹೊಲಿಗೆಯ ಬಿಚ್ಚಿ, ಎಂಟಾತ್ಮ ಹರಿಗಳ
    ತನ್ನಿಚ್ಛೆಯೊಳ್ ನಿಲಿಸಿದ ನಿಜಸುಖಿಯು ನೋಡಾ.
    ತತ್ತ್ವ ಮೂವತ್ತಾರ ಮೀರಿ,
    ಅತ್ತತ್ತವೆ ತೋರ್ಪ ಆಗಮ್ಯನು ನೋಡಾ !
    ನಮ್ಮ ಗುಹೇಶ್ವರನ ಶರಣ ಅಲ್ಲಯ್ಯನ ಇರವನೊಳಕೊಂಡ
    ಪರಮಪ್ರಸಾದಿ ಮರುಳಶಂಕರದೇವರ ನಿಲವ
    ಬಸವಣ್ಣನಿಂದ ಕಂಡೆ ನೋಡಾ ಸಿದ್ಧರಾಮಯ್ಯಾ./33

    ಅಂಗವಿಡಿದು, ಅಂಗ ಅನಂಗವೆಂಬೆರಡನೂ ಹೊದ್ದದ
    ಮಹಿಮನ ನೋಡಾ !
    ಅಂಗವೆ ಆಚಾರವಾಗಿರಬಲ್ಲ, ಆಚಾರವೆ ಅಂಗವಾಗಿರಬಲ್ಲನಾಗಿ
    ಅಂಗವಿಲ್ಲದಪ್ರತಿಮ ನೋಡಾ !
    ಆಚಾರವೆ ಸ್ವಾಯತ, ಆಚಾರವೆ ಪ್ರಾಣ !
    ಗುಹೇಶ್ವರಲಿಂಗದಲ್ಲಿ ನಿನ್ನ ಆಚಾರಬಿಕ್ಷವನಿಕ್ಕಾ ಚನ್ನಬಸವಣ್ಣಾ./34

    ಅಂಗವಿಲ್ಲದ ಅನುಭಾವಕ್ಕೆ ನೇಮವಿಲ್ಲದ ನೆನಹು
    ತಾಗು ತಡೆಯಿಲ್ಲದ ಸುಮ್ಮಾನದ ಸುಖ.
    ಗುಹೇಶ್ವರ ನಿರಾಳ ಕಂಡಾ !/35

    ಅಂಗವಿಲ್ಲಾಗಿ ಅನ್ಯಸಂಗವಿಲ್ಲ, ಅನ್ಯಸಂಗವಿಲ್ಲಾಗಿ ಮತ್ತೊಂದ ವಿವರಿಸಲಿಲ್ಲ.
    ಮತ್ತೊಂದ ವಿವರಿಸಲಿಲ್ಲಾಗಿ ನಿಸ್ಸಂಗವಾಯಿತ್ತಯ್ಯಾ.
    ಗುಹೇಶ್ವರಾ ನಿಮ್ಮ ನಾಮವಿಂತುಟಯ್ಯಾ/36

    ಅಂಗವೆಂಬ ಸಂಸಾರದೊಳಗೆ ಸವೆದವರೆಲ್ಲರೂ ಶಿವನನರಿವರೆ ?
    ಮನವೆಂಬ ಸಂಕಲ್ಪದ ಕುಣಿಕೆಗೊಳಗಾದವರೆಲ್ಲರೂ
    ಮಾಯದ ಹೊಡೆಗಿಚ್ಚ ಗೆಲ್ಲಬಲ್ಲರೆ ?
    ಗುಹೇಶ್ವರಲಿಂಗದಲ್ಲಿ ಸರ್ವಸಂದೇಹವ ಕಳೆದಿಪ್ಪ
    ಚನ್ನಬಸವಣ್ಣಂಗೆ ನಮೋ ನಮೋ ಎಂಬೆನು./37

    ಅಂಗಸಂಸಾರ ಲಿಂಗದಲ್ಲಿತ್ತು ಅರತು
    ಕಾಯವೆಂಬ ಸಂಬಂಧ ಸಂಶಯವಳಿದು
    ನಿಸ್ಸಂದೇಹಿಯಾಗಿಪ್ಪನು ನೋಡಾ ಬಸವಣ್ಣನು.
    ಪ್ರಾಣ ಭಾವವೆಂಬ ಶಂಕೆ ತಲೆದೋರದೆ
    ನಿಶ್ಶಂಕನಿಜೈಕ್ಯನಾಗಿಪ್ಪನು ನೋಡಾ ಬಸವಣ್ಣನು.
    ಆ ಬಸವಣ್ಣನ ಅಂತರಂಗದಲ್ಲಿ ನಿಶ್ಚಿಂತನಿವಾಸಿಯಾಗಿದ್ದೆನು.
    ಆ ಬಸವಣ್ಣನ ಅಂತರಂಗದಲ್ಲಿ ನಿರಾಲಂಬಜ್ಞಾನಿಯಾಗಿದ್ದೆನು.
    ಆ ಬಸವಣ್ಣನೊಳಗೆ ನಾನು ಅಳಿದುಳಿದೆನು.
    ಬಸವಣ್ಣನೆನ್ನ ಅಂತರಂಗದೊಳಗೆ ನಿಜನಿವಾಸಿಯಾಗಿದ್ದನು.
    ಇದು ಕಾರಣ:ಒಂದಕ್ಕೊಂದ ಬಿಚ್ಚಿ ಬೇರು(ರೆ?) ಮಾಡಬಾರದು ನೋಡಾ.
    ಗುಹೇಶ್ವರಲಿಂಗದಲ್ಲಿ `ಸಂಗನಬಸವ-ಪ್ರಭು’ವೆಂಬ ಎರಡು ಭಾವಭ್ರಾಂತಿಯಳಿದು,
    ನಿಭ್ರಾಂತಿ ಎಡೆಗೊಂಡಿತ್ತು ನೋಡಾ ಚನ್ನಬಸವಣ್ಣಾ/38

    ಅಂಗಸೋಂಕೆಂಬುದು ಅಧಮವು.
    ಉರಸೆಜ್ಜೆಯೆಂಬುದು ಎದೆಯ ಗೂಂಟ.
    ಕಕ್ಷೆಯೆಂಬುದು ಕವುಚಿನ ತವರುಮನೆ.
    ಅಮಳೋಕ್ಯವೆಂಬುದು ಬಾಯ ಬಗದಳ.
    ಮುಖಸೆಜ್ಜೆಯೆಂಬುದು ಪಾಂಡುರೋಗ.
    ಕರಸ್ಥಳವೆಂಬುದು ಮರವಡದ ಕುಳಿ.
    ಉತ್ತಮಾಂಗವೆಂಬುದು ಸಿಂಬಿಯ ಕಪ್ಪಡ.
    ಎಲ್ಲರಿಗೆಯೂ ಸೋಂಕಾಯಿತ್ತು !
    ಈ ಹಸಿಯ ಗೂಂಟದಲ್ಲಿ ಕಟ್ಟಿ, ಒಣಗಿದ ಗೂಂಟದಲ್ಲಿ ಬಿಡುವ
    ಬಾಲಭಾಷೆಯ ಭಂಡರ ನುಡಿಯ ಕೇಳಲಾಗದು ಗುಹೇಶ್ವರಾ./39

    ಅಂಗಳ[ದ] ಬಾಗಿಲ ನೆಲೆಯಲ್ಲಿ ನಿಂದಿದ್ದ ಲಿಂಗವನರಿದುದಿಲ್ಲವೆ ?
    ಸುಸಂಗಿ ನಿರಂಗಿ ನಿಷ್ಕಲಬ್ರಹ್ಮ ಮರುಳಶಂಕರಲಿಂಗ !
    ಪ್ರಸಾದದ ಕುಳಿಯಲ್ಲಿ ನಿಜನಿವಾಸದ ಅಂಗವ ನೋಡು,
    ಗುಹೇಶ್ವರಲಿಂಗದಲ್ಲಿ ಬಸವಣ್ಣಾ./40

    ಅಂಗೈಯ ಲಿಂಗದಲ್ಲಿ ಕಂಗಳ ನೋಟ ಸ್ವಯವಾದ ಇರವ ನೋಡಾ !
    ತನ್ನ ಸ್ವಾನುಭಾವದ ಉದಯದಿಂದ ತನ್ನ ತಾನರಿದ ನಿಜಶಕ್ತಿಯ ನೋಡಾ !
    ಬಿನ್ನವಿಲ್ಲದರಿವು, ಮನ್ನಣೆಯ ಮಮಕಾರವ ಮೀರಿದ ಭಾವ !
    ತನ್ನಿಂದ ತಾನಾದಳು !
    ನಮ್ಮ ಗುಹೇಶ್ವರಲಿಂಗದಲ್ಲಿ ಸ್ವಯಲಿಂಗವಾದ
    ಮಹಾದೇವಿಯಕ್ಕಗಳ ನಿಲವಿಂಗೆ
    ನಮೋ ನಮೋ ಎನುತಿರ್ದೆನು ಕಾಣಾ ಚನ್ನಬಸವಣ್ಣ./41

    ಅಂಗೈಯೊಳಗಣ ನಾರಿವಾಳದ ಸಸಿ,
    ಅಂಬರದೆರಳೆಯ ನುಂಗಿತ್ತಲ್ಲಯ್ಯಾ.
    ಕಂಭದೊಳಗಣ ಮಾಣಿಕ್ಯದ ಬಿಂದು
    ನವಕೋಟಿ ಬ್ರಹ್ಮರ ನುಂಗಿತ್ತಲ್ಲಯ್ಯಾ.
    ಅಂಡಜವೆಂಬ ತತ್ತಿ ಹಲವು ಪಕ್ಷಿಯ ನುಂಗಿ
    ನಿರ್ವಯಲಾಗಿತ್ತು ಗುಹೇಶ್ವರಾ ! /42

    ಅಂಗೈಯೊಳಗಣ ಸಿಂಹಾಸನವಿದೇನೊ?
    ಅಂಗೈಯ ಮೇಲೆ ಸಿಂಹಾಸನವೆಂದೇನೊ?
    ಧೂಪ ದೀಪ ನಿವಾಳಿಯೆಂದೇನೊ?
    ಶರಣಂಗೆ ಕಳಸದ ಮೇಲೆ ನೆಲೆಗಟ್ಟೆಯೆಂಬುದೇನೊ?
    ಗುಹೇಶ್ವರನೆಂಬ ನಿರಾಳ !/43

    ಅಂಗೈಯೊಳಗೊಂದು ಅರಳ್ದ ತಲೆಯ ಹಿಡಿದುಕೊಂಡು
    ಕಂಗಳ ಮುತ್ತ ಪವಣಿಸುವಾಕೆ ನೀನಾರು ಹೇಳಾ ?
    ಸಂದ ಸಂಪಿಗೆಯರಳ ತುಂಬಿ ಬಂದುಂಬ ಭೇದವನರಿಯದೆ
    ಹಂಬಲಿಸುವ ಪರಿತಾಪವೇನು ಹೇಳಾ ?
    ಒಂದೆಂಬೆನೆ ಎರಡಾಗಿದೆ ಎರಡೆಂಬೆನೆ ಒಂದಾಗಿದೆ
    ಅರಿವಿನೊಳಗಣ ಮರಹಿದೇನು ಹೇಳಾ ?
    ದುಃಖವಿಲ್ಲದ ಅಕ್ಕೆ, ಅಕ್ಕೆಯಿಲ್ಲದ ಅನುತಾಪ
    ನಮ್ಮ ಗುಹೇಶ್ವರಲಿಂಗದಲ್ಲಿ ತೋರುತ್ತಿದೆ.
    ನೀನಾರೆಂದು ಹೇಳಾ ಎಲೆ ಅವ್ವಾ ?/44

    ಅಂಜಬೇಡ ಅಳುಕಬೇಡ;
    ಹೋದವರಾರು ಇದ್ದವರಾರು ? ಎಲೆ ಮರುಳೆ !
    ಒಂದು ಮುಖದಲ್ಲಿಪ್ಪ ದೇವನೊಬ್ಬನೆ.
    ಹಲವು ಮುಖದಲ್ಲಿಪ್ಪ ದೇವನೊಬ್ಬನೆ.
    ನಾಮ ಹಲವಲ್ಲದೆ ಕಾರ್ಯ ಒಂದೇ ನೋಡಾ !
    ಮನದೊಳಗಣ ಘನವು ತನುವನಗಲುವುದೆ ?
    ಗುಹೇಶ್ವರಲಿಂಗದಲ್ಲಿ ವಿಯೋಗಕ್ಕೆ ತೆರಹಿಲ್ಲ ಕೇಳಾ, ಸಂಗನಬಸವಣ್ಣ./45

    ಅಂಡಜ ಒಡೆಯದರಿಂದ ಮುನ್ನ,
    ದ್ವೀಪಾದ್ವೀಪವಿಲ್ಲದ ಮುನ್ನ,
    ಅನಲಪವನರಿಲ್ಲದ ಮುನ್ನ,
    ರವಿಚಂದ್ರರಿಲ್ಲದ ಮುನ್ನ,
    ಗುಹೇಶ್ವರಲಿಂಗವಲ್ಲಿಂದ ಮುನ್ನ./46

    ಅಂಡಜವಳಯವಿಲ್ಲದ ಮುನ್ನ,
    ದ್ವೀಪಂಗಳೇಳೂ ಇಲ್ಲದ ಮುನ್ನ,
    ರವಿಚಂದ್ರರಿಲ್ಲದ ಮುನ್ನ,
    ತ್ರಿದೇವತೆಗಳಿಲ್ಲದ ಮುನ್ನ,
    ಗುಹೇಶ್ವರನು ಉಲುಹಡಗಿರ್ದನಂದು ಅನಂತಕಾಲ !/47

    ಅಂಡಜವೆಂಬ ತತ್ತಿಯೊಡೆದು ಪಿಂಡ ಪಲ್ಲಟವಾಗಿ
    ಗಂಡಗಂಡರನರಸಿ ತೊಳಲುತ್ತೈದಾರೆ.
    ಖಂಡಮಂಡಲದೊಳಗೆ ಕಂಡೆನೊಂದು ಚೋದ್ಯವ:
    ಕಂದನ ಕೈಯ ದರ್ಪಣವ ಪ್ರತಿಬಿಂಬ ನುಂಗಿತ್ತು.
    ದಿವರಾತ್ರಿಯುದಯದ ಬೆಳಗನು ಕತ್ತಲೆ ನುಂಗಿತ್ತು.
    ಗುಹೇಶ್ವರನಲ್ಲಿಯೆ ನಿರ್ವಯಲಾಗಿತ್ತು./48

    ಅಂಡವ ಮೇಲು ಮಾಡಿ ಪಿಂಡಿಯಾಗಿ,
    ಆ ಅಂಡದೊಳಗೆ ನಾಲ್ಕು ಕೈಕರಣ ಅನೇಕ ಉದ್ದವಾದವು !
    ಆ ಕೈಕರಣದೊಳಗೊಬ್ಬ ಶರಣ, ದಾಸೋಹಮೆನಲು,
    ಆ ಕ್ಷಣ ಒಂದು ಸೋಜಿಗ ಮೂಡಿತ್ತ ಕಂಡೆ ಗುಹೇಶ್ವರಾ/49

    ಅಂತರಂಗ ಸನ್ನಹಿತ, ಬಹಿರಂಗ ನಿಶ್ಚಿಂತವೊ ಅಯ್ಯಾ.
    ತನು ತನ್ನ ಸುಖ, ಮನ ಪರಮ ಸುಖವೊ,
    ಅದು ಕಾರಣ ಕಾಯ ವಾಯವೊ, ಗುಹೇಶ್ವರ ನಿರಾಳವೊ ಅಯ್ಯಾ./50

    ಅಂತರಂಗದಲ್ಲಿ ಅಡಗಿತ್ತೆಂದಡೆ ಭಾವಕ್ಕೆ ಪೂಜ್ಯವಲ್ಲ.
    ಬಹಿರಂಗದಲ್ಲಿ ಅಡಗಿತ್ತೆಂದಡೆ ಕ್ರಿಯಾಬದ್ಧವಲ್ಲ.
    ಅರಿವಿನೊಳಗೆ ಅಡಗಿತ್ತೆಂದಡೆ ಮತಿಗೆ ಹವಣಲ್ಲ.
    ಭಾವ ನಿರ್ಭಾವ ನಿಶ್ಶೂನ್ಯವನು ಕಾಂಬ ಪರಿ ಎಂತು ಹೇಳಾ ?
    ಕಂಡು ತನ್ನೊಳಗಿಂಬಿಟ್ಟುಕೊಂಬ ಪರಿ ಎಂತು ಹೇಳಾ ?
    ಗುಹೇಶ್ವರನೆಂಬ ಲಿಂಗವನರಿದು ಕೂಡಿ
    ಸುಖಿಯಹ ಪರಿ ಎಂತು ಹೇಳಾ ಸಂಗನಬಸವಣ್ಣ ?/51

    ಅಂತರಂಗದಲ್ಲಿ ಭವಿಯನೊಳಕೊಂಡು, ಬಹಿರಂಗದಲ್ಲಿ ಭಕ್ತಿಯನೊಳಕೊಂಡು,
    ಆತ್ಮಸಂಗದಲ್ಲಿ ಪ್ರಸಾದವನೊಳಕೊಂಡು, ಇಪ್ಪ ಭಕ್ತರ ಕಾಣೆನಯ್ಯಾ ನಾನು,
    ಇಂತಪ್ಪ ಲಿಂಗೈಕ್ಯರ ಕಾಣೆನಯ್ಯಾ.
    ಅಂತರಂಗದಲ್ಲಿ ಸುಳಿದಾಡುವ ತನುಗುಣಾದಿಗಳ, ಮನಗುಣಾದಿಗಳ,
    ಪ್ರಾಣಗುಣಾದಿಗಳ ಕಳೆದಲ್ಲಿ ಶರಣರಹರೆ ?
    ತನು ಮನ ಧನವ ಕೊಟ್ಟಲ್ಲಿ ಭಕ್ತರಹರೆ ?
    ಉಂಬವರ ಕಂಡು ಕೈನೀಡಿದಡೆ ಪ್ರಸಾದಿಗಳಹರೆ ?
    ಅಂತರಂಗ ಬಹಿರಂಗ ಆತ್ಮಸಂಗ-ಈ ತ್ರಿವಿಧದ ಭೇದವ
    ಗುಹೇಶ್ವರಾ ನಿಮ್ಮ ಶರಣ ಬಲ್ಲ. /52

    ಅಂತರಂಗದೊಳಗಿಲ್ಲ ಬಹಿರಂಗದೊಳಗಿಲ್ಲ
    ಮತ್ತಾವ ದೆಶೆ ದಿಕ್ಕಿನೊಳಗೆಯೂ ಇಲ್ಲ.
    ಏನಾಯಿತ್ತೆಂದರಿಯೆ ಎಂತಾಯಿತ್ತೆಂದರಿಯೆ
    ಅದೆಂತೆಂದರೆ:
    “ಅಂತಃ ಶೂನ್ಯಂ ಬಹಿಃಶೂನ್ಯಂ ಶೂನ್ಯಂ ಶೂನ್ಯಂ ದಿಶೌ ದಿಶೌ!
    ಸರ್ವಶೂನ್ಯಂ ನಿರಾಲಂಬಂ ನಿದ್ರ್ವಂದ್ವಂ ಪರಮಂ ಪದಂ
    ಎಂಬುದಾಗಿ-ಅಲ್ಲಿ ಇಲ್ಲಿ ಎಲ್ಲಿಯೂ ಇಲ್ಲ.
    ಗುಹೇಶ್ವರ ಬಯಲು./53

    ಅಂದಂದಿಗೆ ಬಂದ ಧನವನಂದಂದಿಂಗೆ ವೆಚ್ಚವ ಮಾಡಿ
    ಹಿಂದು ಮುಂದ ಸಮವ ಮಾಡಿ,
    ಮಧ್ಯ ನಿರಾಳ ಊಧ್ರ್ವ ತಾನಾಗಿದ್ದು ಇಲ್ಲದಂತಿಪ್ಪಡೆ
    ಇದೇ ತೆರನು ಕಂಡಯ್ಯಾ.
    ಆರ ವಶವಲ್ಲದ ಪುರುಷನೊಬ್ಬನ ಸಾದಿಸಿಕೊಳಬಲ್ಲಡೆ
    ಆ ಹಿರಿಯರಿಬ್ಬರೂ ತನ್ನ ವಶರಪ್ಪರು.
    ಆ ಹಿರಿಯರಿಬ್ಬರೂ ತನ್ನವರಾದಡೆ ಸರ್ವವೂ ಸಾಧ್ಯವಪ್ಪುದು.
    ಸರ್ವವೂ ಸಾಧ್ಯವಾದಡೆ ತಾನಿಲ್ಲ.
    ಬಯಲಹುದಕ್ಕೆ ಇದೇ ಚಿಹ್ನ ನೋಡಾ-
    ಹೀಗೆಂದು ನಂಬುವುದು
    ನಂಬದಿದ್ದಡೆ ಚೆನ್ನಬಸವಣ್ಣನ ಹೊಣೆಯ ಕೊಡುವೆ ಕಾಣಾ ಗುಹೇಶ್ವರಾ./54

    ಅಂದಂದಿನ ಮಾತನು ಅಂದಂದಿಗೆ ಅರಿಯಬಾರದು.
    ಹಿಂದೆ ಹೋದ ಯುಗಪ್ರಳಯಂಗಳ ಬಲ್ಲವರಾರಯ್ಯಾ ?
    ಮುಂದೆ ಬಪ್ಪ ಯುಗಪ್ರಳಯಂಗಳ ಬಲ್ಲವರಾರಯ್ಯಾ ?
    ಬಸವಣ್ಣನು ಆದಿಯಲ್ಲಿ ಲಿಂಗಶರಣನೆಂಬುದ
    ಭೇದಿಸಿ ನೋಡಿ ಅರಿವರಿನ್ನಾರಯ್ಯಾ ?
    ಲಿಂಗ ಜಂಗಮ ಪ್ರಸಾದದ ಮಹಾತ್ಮೆಗೆ
    ಬಸವಣ್ಣನೆ ಆದಿಯಾದನೆಂಬುದನರಿದ ಸ್ವಯಂಭು ಜ್ಞಾನಿ,
    ಗುಹೇಶ್ವರಲಿಂಗದಲ್ಲಿ ಚನ್ನಬಸವಣ್ಣನೊಬ್ಬನೆ./55

    ಅಂದಾದಿಬಿಂದುವಿಲ್ಲದಂದು ಅಂದಾ ಜೀವನೆಲ್ಲಿಪ್ಪುದೊ ?
    ಪಿಂಡ ರೂಪಿಸುವಲ್ಲಿ ಆ ಜೀವ ಬಂದು ಪರಿಯೆಂತುಟೊ ?
    ಇದನರಿದಡೆ ಗುರುವೆಂಬೆ, ಲಿಂಗವೆಂಬೆ, ಜಂಗಮವೆಂಬೆ,
    ಅಲ್ಲದಿದ್ದಡೆ ನರನೆಂಬೆ ಕಾಣಾ ಗುಹೇಶ್ವರಾ/56

    ಅಂದಿನ ದಿನವನಂತಿರಿಸಿ, ಇಂದಿನ ದಿನವನಿಂತಿರಿಸಿ,
    ತಾ ಬೇರೆ ಮತ್ತೊಂದು ಪರಿಯಾದ ಅಪ್ಪಣ್ಣನು.
    ಅಂದಿನವನಂತಾಗದೆ ಇಂದಿನವನಂತಾಗದೆ, ಅಂತಿಂತುವ ಕೆಡಿಸಿ
    ಮತ್ತೊಂದಾದನು(ನ?)ವ.
    ಶ್ರುತಿಗೆಟ್ಟು ಮತಿಗೆಟ್ಟು ಹದಗೆಟ್ಟು ಹವಣುಗೆಟ್ಟು,
    ಬಿಮ್ಮುಗೆಟ್ಟು ಬೆಮಳ ವಿಮಳನಾದ ಅಪ್ಪಣ್ಣನು.
    ಗಣಿತ ಗುಣಿತವನಳಿದುಳಿದು,
    ಅಗಣಿತನಚಳಿತನಾದ ಅಪ್ಪಣ್ಣನು.
    ಅಮಳೋಕ್ಯವಾದ ಘನವ, ಅಮಳೋಕ್ಯವಾದ ಮಹವ,
    ಅಮಳೋಕ್ಯವಾದ ನಿಜದ ನಿಲವ ;
    ಕುಲಗೆಟ್ಟ, ಛಲಗೆಟ್ಟ, ಲಜ್ಜೆಗೆಟ್ಟ, ಭವಗೆಟ್ಟ
    ಗುಹೇಶ್ವರನ ಶರಣ ಸಂಗಮೇಶ್ವರದ ಅಪ್ಪಣ್ಣನು./57

    ಅಂದು ನೀ ಬಂದ ಬೆಂಬಳಿಯಲ್ಲಿ ನಾ ಬಂದೆ.
    ಅಂದಂದಿನ ಸಂದೇಹ ಹರಿಯಿತ್ತು.
    ನೀ ಭಕ್ತನಾಗಿ ನಾ ಜಂಗಮವಾಗಿ,
    ಗುಹೇಶ್ವರಲಿಂಗವೆಂಬುದಕ್ಕೆ ಅಂಗವಾಯಿತ್ತು./58

    ಅಂದೊಮ್ಮೆ ಧರೆಯ ಮೇಲೆ ಉದಕವಿಲ್ಲದಂದು
    ಕೆಳಯಿಂಕೆ ಪಾದವ ನೀಡಿದೆಯಲ್ಲಾ ಬಸವಣ್ಣ
    ಧರೆಯ ತಾಗಿದ ಪಾದವ ದಿಗಿಲನೆ ಎತ್ತಲು
    ಭುಗಿಲೆನೆ ಉದಕವೆದ್ದು ನಿಮ್ಮ ಉರಸ್ಥಲಕೆ ಬಾರದೆ ?
    ಕನಲಿ ಎದ್ದು ಅಂಕೆಗೆ (ಆಚೆಗೆ ?) ನಿಂದು ನೋಡಲು
    ಸಪ್ತ ಸಾಗರಂಗಳೆಲ್ಲವು ನಿಮ್ಮ ಕಿರುಪಾದದಲ್ಲಿ ಅಡಗವೆ ಬಸವಣ್ಣಾ ?
    ಅದನೆಂತು ಕೊಡಬಹುದು, ಅದನೆಂತು ಕೊಳಬಹುದು ?
    ನಮ್ಮ ಗುಹೇಶ್ವರಲಿಂಗಕ್ಕೆ
    ನಿಮ್ಮ ಪಾದೋದಕವೆ ಮಜ್ಜನ ಕಾಣಾ ಸಂಗನಬಸವಣ್ಣ./59

    ಅಂಬರದೊಳಗೊಂದು ಅಡವಿ ಹುಟ್ಟಿತ್ತು.
    ಆ ಅಡವಿಯೊಳಗೊಬ್ಬ ವ್ಯಾಧನೈದಾನೆ.
    ಆ ವ್ಯಾಧನ ಕೈಯಲ್ಲಿ ಸಿಕ್ಕಿತ್ತು ಒಂದು ಮೃಗವು.
    ಆ ಮೃಗವ ಕೊಂದಲ್ಲದೆ ವ್ಯಾಧ ಸಾಯನು !
    ಅರಿವು ಬರಿದುಂಟೆ ಗುಹೇಶ್ವರಾ ?/60

    ಅಂಬರವಿಲ್ಲದ ಮೇರು, ಅಂಬುದಿಯಿಲ್ಲದ ಗುಂಪ
    ತಂದವರಿಲ್ಲದೆ ಬಂದಿತ್ತು, ನಿಜವನೊಳಕೊಂಡಿತ್ತು
    ಸಾಧನವಿಲ್ಲದ ಓಗರವ ಭಾಜನವಿಲ್ಲದೆ ಗಡಣಿಸಿ
    ಭೋಜನವಿಲ್ಲದೆ ತೃಪ್ತಿಯಾಯಿತ್ತು ನೋಡಾ.
    ಕ್ರಿಯಾವಿರಹಿತಯೋಗ ಫಲದಾಯಕ ಹೀನಭಕ್ತಿ,
    ಆಯತ ಸ್ವಾಯತವರಿಯದೆ ಹೋಯಿತ್ತು ಗುಹೇಶ್ವರಾ./61

    ಅಂಬುದಿಯೊಳಗಾದ ನದಿಗಳು ಮರಳುವುವೆ ?
    ಉರಿಯೊಳಗಾದ ಕರ್ಪುರ ರೂಪಿಂಗೆ ಬಪ್ಪುದೆ ?
    ಮರುತನೊಳಗಾದ ಪರಿಮಳ ಲೇಪನಕ್ಕೆ ಬಪ್ಪುದೆ ?
    ಲಿಂಗವನರಿದು ಲಿಂಗೈಕ್ಯವಾದ ಶರಣ
    ಮರಳಿ ಹುಟ್ಟುವನೆ ಗುಹೇಶ್ವರಾ ?/62

    ಅಂಬುಧಿ ಉರಿಯಿತ್ತು ಅವನಿಯ ಮೇಲನರಿಯಲು.
    ಕೋಡೆರಡರೊಳೊಂದ ತಿಳಿದು, ವಾಯುವ ಬೈಯುತ್ತ, ತುಂಬಿ
    ಅಮೃತವ ಕಂಡು ಪ್ರಾಣನಾಥಂಗೆ ಅರ್ಪಿತವ ಮಾಡಿ,
    ಆ ಪ್ರಸಾದದಿಂದ ಸುಖಿಯಾದೆನಯ್ಯಾ-ಗುಹೇಶ್ವರಾ./63

    ಅಕಟಕಟಾ ದೇಹಾರ ಅಭ್ಯಾಸವಾಯಿತ್ತಲ್ಲಾ !
    ಅಕಟಕಟಾ ಓಗರ ಉಪಹಾರವಾಯಿತ್ತಲ್ಲಾ !
    ಅಕಟಕಟಾ ಅನುಭಾವ ಹೊಲಬುಗೆಟ್ಟು ಹೋಯಿತ್ತಲ್ಲಾ !
    ಅಕಟಕಟಾ ಷೋಡಶೋಪಚಾರವನರಿಯದೆ
    ಕೆಟ್ಟರಲ್ಲಾ ಗುಹೇಶ್ವರಾ./64

    ಅಕಲ್ಪಿತ ನಿತ್ಯ ನಿರಂಜನ ನಿಃಸೀಮ ನಿರವಯ
    ಅಖಂಡ ಪರಿಪೂರ್ಣ ಪರಂಜ್ಯೋತಿಯಾದ
    ಮಹಾ ಘನವಸ್ತುವಿನಲ್ಲಿ ಪರಮಾತ್ಮನುತ್ಪತ್ತಿ.
    ಆ ಪರಮಾತ್ಮನಿಂದ ಅಂತರಾತ್ಮನುತ್ಪತ್ತಿ.
    ಆ ಅಂತರಾತ್ಮನಿಂದ ಜೀವಾತ್ಮನುತ್ಪತ್ತಿ.
    ಈ ತ್ರಯಾತ್ಮರೊಳಗೆ ಜೀವ-ಅಂತರಾತ್ಮಾದಿಗಳೆ ಪಾಶಬದ್ಧರು
    ಪರಮಾತ್ಮನೆ ಪಾಶಮುಕ್ತನು.
    ಈ ಸಂಚವನರಿದ ದ್ವಂದ್ವರಹಿತ ತಾನೆ
    ನಮ್ಮ ಗುಹೇಶ್ವರಲಿಂಗದಲ್ಲಿ ಯಂತ್ರವಾಹಕನೆನಿಸುವನು./65

    ಅಕಲ್ಪಿತ ನಿತ್ಯ ನಿರಂಜನ ನಿರವಯ ನಿರಾಕಾರ ಪರಂಜ್ಯೋತಿ ಲಿಂಗದಲ್ಲಿ
    ಅಂತರಾತ್ಮಲಿಂಗ ಉತ್ಪತ್ತಿಯಾಯಿತ್ತು.
    ಆ ಅಂತರಾತ್ಮಲಿಂಗದಲ್ಲಿ ಜೀವಾತ್ಮಲಿಂಗ ಉತ್ಪತ್ತಿಯಾಯಿತ್ತು.
    ಆ ಅಂತರಾತ್ಮನೆ ಗುರು ಜೀವಾತ್ಮನೆ ಶಿಷ್ಯ, ಪರಮಾತ್ಮನೆ ಲಿಂಗ-
    ಇದು ಪ್ರಸಿದ್ಧವಾಕ್ಯ ನೋಡಯ್ಯಾ.
    ಲಿಂಗದೊಳಗಣ ಬೀಜ ಜಂಗಮ,
    ಆ ಜಂಗಮದ ಪ್ರಕಾಶವೆ ಗುರು,
    ಆ ಜಂಗಮದ ನಿರಾಕಾರವೆ ಲಿಂಗ,
    ಪರಮಾತ್ಮನೆ ಪ್ರಾಣಸ್ವರೂಪವೆಂಬ ಜಂಗಮ.
    ಈ ಗುರುಲಿಂಗಜಂಗಮವೆಂಬ ತ್ರಿವಿಧವು, ಏಕವೆಂದರಿಯದ ಕಾರಣ,
    ಬ್ರಹ್ಮ ಮುಂದುಗಾಣ, ಹರಿ ಹೊಲಬುಗೆಟ್ಟ, ರುದ್ರ ಧ್ಯಾನಾರೂಢನಾದ.
    ಇವರಂಡಜದೊಳಗಣ ಬಾಲಕರೆತ್ತ ಬಲ್ಲರು ಗುಹೇಶ್ವರಾ,
    ನಿಮ್ಮ ಮಹತ್ವವ ?/66

    ಅಕಲ್ಪಿತನೆಂಬ ಭಕ್ತ ಮಾಡಿದ ಸೈದಾನವ ನೋಡಾ !
    ಅನಂತಕೋಟಿ ಅಜಾಂಡಂಗಳೆ ಸೈದಾನವಾಗಿ,
    ಸವಿಕಲ್ಪಿತ ಸುಖಂಗಳೆಂಬವೆ ಶಾಕವಾಗಿ,
    ಸರ್ವಸ್ವಾದವೆಂಬುದೆ ಅಬಿಗಾರವಾಗಿ,
    ಇವೆಲ್ಲವನು ಸಹಜವೆಂಬ ಭಾಜನದಲ್ಲಿ ಎಡೆ ಮಾಡುತ್ತಿರಲು
    ಉಣಬಂದ ಹಿರಿಯರು ಉಣುತ್ತಿದ್ದರು ನೋಡಾ !
    ನಿರ್ವಿಕಲ್ಪವೆಂಬ ಮಹಂತ ಬರಲು ಸೈದಾನವಡಗಿತ್ತು ಭಾಜನ ಉಳಿಯಿತ್ತು.
    ಆ ಭಾಜನವ ಉತ್ತರನಿರಾಳದಲ್ಲಿ ಅಳವಡಿಸಿಕೊಳಲು
    ನಿಶ್ಚಳ ಘನಪ್ರಸಾದವಾಯಿತ್ತು ಗುಹೇಶ್ವರಾ./67

    ಅಕಾರದಾದಿಯನರಿ, ಕ್ಷಕಾರದಂತ್ಯವ ತಿಳಿ.
    ಅಕಾರ ಉಕಾರ ಮಕಾರದೊಳಗಣ ಓಂಕಾಪ್ರಭೆಯ ತಿಳಿ.
    ವೇದಾದಿ ಪಂಚಕದಾದಿಯನರಿ.
    ಐಶ್ವರ್ಯ ಮೊದಲಾದೈದು ನಾಮವನುಳ್ಳ
    ವಿಭೂತಿ ಭಸಿತ ಭಸ್ಮ ಕ್ಷಾರ ರಕ್ಷೆ ಎಂಬೈದು
    ನಿನ್ನಬಿಮುಖದಿಂದ ಜನನವೆ ಹೇಳು ಗುಹೇಶ್ವರಾ ?/68

    ಅಕ್ಕಟಾ ಜೀವನ ತ್ರಿವಿಧವೆ,
    ಮೂರಕ್ಕೆ ಮುಟ್ಟದೆ ಹೋದೆಯಲ್ಲಾ!
    ಬಿಂದುವಿನ ಕೊಡನ ಹೊತ್ತುಕೊಂಡು,
    ಅಂದಚಂದಗೆಟ್ಟು ಆಡುವರಯ್ಯಾ!
    ಗುಹೇಶ್ವರ ನಿರಾಳವೆ, ಐದರಿಂದ ಕೆಟ್ಟಿತ್ತು ಮೂರು ಲೋಕ/69

    ಅಕ್ಷರದಲಭ್ಯಾಸವ ಮಾಡಿ ಬರೆವ ತೊಡೆವ ಪರಿಯಿನ್ನೆಂತೊ?
    ಸ್ವರೂಪವೆಂಬುದಾವುದು ನಿರೂಪವೆಂಬುದಾವುದು ಅರಿಯರಾಗಿ,
    ಆದಿನಿರಾಳ ಮಧ್ಯನಿರಾಳ ಊಧ್ರ್ವನಿರಾಳ ಗುಹೇಶ್ವರ./70

    ಅಕ್ಷರವ ನೋಡಿ ಅಭ್ಯಾಸವ ಕಲಿತು,
    ನಾನಾವರ್ಣವನಿಟ್ಟು (ಕಳೆವಿರಿ?)ಭೋ,
    ಸ್ವರೂಪಾದಿಕನಲ್ಲ ನಿರೂಪಾದಿಕನಲ್ಲ,
    ಮಹಾಘನವು ಕಾಣಿ ಭೋ.
    ಆದಿನಿರಾಳ ಮಧ್ಯನಿರಾಳ ಊಧ್ರ್ವನಿರಾಳ ಗುಹೇಶ್ವರಯ್ಯನು ತಾನೆ./71

    ಅಕ್ಷರವ ಬಲ್ಲೆನೆಂ(ವೆಂ?)ದು ಅಹಂಕಾರವೆಡೆಗೊಂಡು, ಲೆಕ್ಕಗೊಳ್ಳರಯ್ಯಾ.
    ಗುರು ಹಿರಿಯರು ತೋರಿದ ಉಪದೇಶದಿಂದ;
    ವಾಗದ್ವೈತವನೆ ಕಲಿತು ವಾದಿಪರಲ್ಲದೆ
    ಆಗು-ಹೋಗೆಂಬುದನರಿಯರು.
    ಭಕ್ತಿಯನರಿಯರು ಯುಕ್ತಿಯನರಿಯರು, [ಮುಕ್ತಿಯನರಿಯರು]
    ಮತ್ತೂ ವಾದಕೆಳಸುವರು.
    ಹೋದರು ಗುಹೇಶ್ವರಾ ಸಲೆ ಕೊಂಡಮಾರಿಗೆ./72

    ಅಗ್ಗಣಿತಹೈಸಕ್ಕೆ ಅನಂತಯುಗಂಗಳು ಹೋಗುತ್ತಿವೆಯಯ್ಯಾ.
    ಪುಷ್ಪತಹೈಸಕ್ಕೆ ಅನಂತಯುಗಂಗಳು ಹೋಗುತ್ತಿವೆಯಯ್ಯಾ.
    ಲಿಂಗಾರ್ಚನೆ ಘನಲಿಂಗಕ್ಕೆಡೆಯಿಲ್ಲ !
    ಗುಹೇಶ್ವರಾ ಸಿದ್ಧರಾಮಯ್ಯದೇವರಿಗೆ ಆರೋಗಣೆಯಿಲ್ಲ,
    ಶರಣರಿಗೆ ಪ್ರಸಾದವಿಲ್ಲ./73

    ಅಗ್ಘವಣಿಯ ತಂದು ಮಜ್ಜನವ ಮರೆದವನ,
    ಪುಷ್ಪವ ತಂದು ಪೂಜೆಯ ಮರೆದವನ,
    ಓಗರವ ತಂದು ಅರ್ಪಿತವ ಮರೆದವನ,
    ಲಿಂಗವ ಕಂಡು ತನ್ನ ಮರೆದವನ,
    ಮಹಾಘನವ ಒಳಕೊಂಡಿತ್ತು ಗುಹೇಶ್ವರ./74

    ಅಗ್ನಿ ಮುಟ್ಟಲು ತೃಣ, ಭಸ್ಮವಾದುದನೆಲ್ಲರೂ ಬಲ್ಲರು.
    ತೃಣದೊಳಗೆ ಅಗ್ನಿಯುಂಟೆಂಬುದ ತಿಳಿದು ನೋಡಿರೆ.
    ಅಗ್ನಿ ಜಲವ ನುಂಗಿತ್ತು, ಜಲ ಅಗ್ನಿಯ ನುಂಗಿತ್ತು.
    ಪೃಥ್ವಿ ಎಲ್ಲವ ನುಂಗಿತ್ತು, ಆಕಾಶವನೆಯ್ದೆ ನುಂಗಿತ್ತು.
    ಅರಿದೆನೆಂಬ ಜಡರುಗಳು ನೀವು ತಿಳಿದು ನೋಡಿರೆ-
    ತಿಳಿಯಬಲ್ಲಡೆ ಗುಹೇಶ್ವರನ ನಿಲವು ತಾನೆ ! /75

    ಅಗ್ನಿ ಮುಟ್ಟಿದುದುವೊ, ಆಕಾಶದಲದೆವೊ
    ಉದಕ ಮುಟ್ಟಿದುದುವೊ, ನಿರಾಳದಲದೆವೊ
    ಬ್ರಹ್ಮರಂಧ್ರದಲದೆವೊ-ಭ್ರಮಿಸದೆ ನೋಡಾ !
    ಆವಂಗೆಯೂ ಅಸದಳ, ಆವಂಗೆಯೂ ಅರಿಯಬಾರದು!
    ಇದೇನು ಮಾಯೆ ಹೇಳಾ ಗುಹೇಶ್ವರಾ ?/76

    ಅಗ್ನಿಗೆ ತಂಪುಂಟೆ? ವಿಷಕ್ಕೆ ರುಚಿಯುಂಟೆ ಹೇಳಾ ?
    ಕಂಗಳಿಗೆ ಮರೆಯುಂಟೆ ಹೇಳಾ ಲಿಂಗವೆ ?
    ದಾಳಿಕಾರಂಗೆ ಧರ್ಮವುಂಟೆ ? [ಕನ್ನಗಳ್ಳಂಗೆ] ಕರುಳುಂಟೆ ?
    ಗುಹೇಶ್ವರಾ, ನಿಮ್ಮ ಶರಣರು,
    ಮೂರು ಲೋಕವರಿಯೆ ನಿಶ್ಚಟರಯ್ಯಾ./77

    ಅಗ್ನಿಯ ಒಡಲೊಳಗೊಬ್ಬ ಆಕಾಶವರ್ಣದ ಸೂಳೆ;
    ಆ ಸೂಳೆಗೆ ಮೂವರು ಮಕ್ಕಳು ನೋಡಾ !
    ಆ ಮಕ್ಕಳ ಕೈ ಬಾಯಲ್ಲಿ ಮೂರುಲೋಕ ಮರುಳಾಗಿ
    ಅಚ್ಚುಗಬಡುತ್ತಿರ್ದಡೇನು ಚೋದ್ಯವೊ ?
    ಕರಿಯ ಬಣ್ಣದ ಮುಸುಕನುಗಿದು ಬೆರೆಸಬಲ್ಲ ಶರಣಂಗಲ್ಲದೆ
    ಪರಮತತ್ವ(ಪರತತ್ವ ?)ವೆಂಬುದು ಸಾಧ್ಯವಾಗದು ಗುಹೇಶ್ವರಾ./78

    ಅಗ್ನಿಯ ಸುಡುವಲ್ಲಿ ಉದಕವ ತೊಳೆವಲ್ಲಿ
    ವಾಯುವ ಮೆಟ್ಟಿ ಆಕಾಶವ ಹಿಡಿವಲ್ಲಿ
    ಯೋಗದ ಹೊಲಬ ನೀನೆತ್ತ ಬಲ್ಲೆ?
    ಕದಳಿಯ ಬನವ ನಿನ್ನಲ್ಲಿ ನೀನು ತಿಳಿದು ನೋಡು,
    ಮದ ಮತ್ಸರ ಬೇಡ. ಹೊದಕುಳಿಗೊಳಬೇಡ.
    ಗುಹೇಶ್ವರನೆಂಬ ಲಿಂಗವು ಕಲ್ಪಿತವಲ್ಲ ನಿಲ್ಲೊ./79

    ಅಗ್ನಿಸ್ತಂಭದ ರಕ್ಷೆಯಿದ್ದು ಮನೆ ಬೆಂದಿತ್ತಯ್ಯಾ.
    ಬಲಮುರಿಯ ಶಂಖವಿದ್ದು ಪದ ಹೋಯಿತ್ತಯ್ಯಾ.
    ಏಕಮುಖ ರುದ್ರಾಕ್ಷಿಯಿದ್ದು ವಿಘ್ನವಾಯಿತ್ತಯ್ಯಾ.
    ಇವೆಲ್ಲವ ಸಾದಿಸಿದಡೆ,
    ಏನೂ ಇಲ್ಲದಂತಾಯಿತ್ತು ಕಾಣಾ ಗುಹೇಶ್ವರಾ./80

    ಅಘಟಿತ ಘಟಿತನೆ ವಿಪರೀತ ಚರಿತ್ರನೆ,
    ಸಾವರ ಕೈಯಲ್ಲಿ ಪೂಜೆಗೊಂಬರೆ ಲಿಂಗಯ್ಯಾ ?
    ಸಾವರ ನೋವರ ಕೈಯಲ್ಲಿ ಪೂಜೆಗೊಂಬುದು
    ಲಜ್ಜೆ ಕಾಣಾ – ಗುಹೇಶ್ವರಾ./81

    ಅಚಲಸಿಂಹಾಸನವನಿಕ್ಕಿ;
    ನಿಶ್ಚಲ ಮಂಟಪದ ಸಂಚದೋವರಿಯೊಳಗೆ;
    ರುಚಿಗಳೆಲ್ಲವ ನಿಲಿಸಿ-
    ಪಂಚರತ್ನದ ಶಿಖರ, ಮಿಂಚುಕೋಟಿಯ ಕಳಸ,
    ವಚನ ವಿಚಿತ್ರದ ಪುಷ್ಪದ ರಚನೆ[ಯ] ನವರಂಗದಲ್ಲಿ,
    ಖೇಚರಾದಿಯ ಗಮನ.
    ವಿಚಾರಿಪರ ನುಂಗಿ.-ಗುಹೇಶ್ವರ ನಿಂದ ನಿಲುವು
    ಸಚರಾಚರವ ನುಂಗಿತ್ತು/82

    ಅಚ್ಚಪ್ರಸಾದಿ ಅಚ್ಚಪ್ರಸಾದಿ ಎಂಬಿರಿ ಕೇಳಿರಯ್ಯಾ;
    ನಿಚ್ಚಕ್ಕೆ ನಿಚ್ಚ ಹುಸಿವ ಹುಸಿಗಳ ಕಂಡೆವಯ್ಯಾ [ನಿಮ್ಮಲ್ಲಿ].
    ವಾಯು ಬೀಸದ ಮುನ್ನ, ಆಕಾಶ ಬಲಿಯದ ಮುನ್ನ,
    ಲಿಂಗಕ್ಕೆ ಅರ್ಪಿತಮುಖವ ಮರೆದಿರಯ್ಯಾ.
    ಭೋಜನವ ಮಾಡಿ ಭಾಜನವನಿಕ್ಕಿಟ್ಟು ಹೋಹ ಹಿರಿಯರಿಗೆ
    ಭಂಗ ನೋಡಾ ಗುಹೇಶ್ವರಾ./83

    ಅಚ್ಚಪ್ರಸಾದಿ ನಿಚ್ಚಪ್ರಸಾದಿಯೆಂಬ ಮುಚ್ಚಟ ಮುದಿಹೊಲೆಯರಿರಾ
    ನೀವು ಕೇಳಿರೊ.
    ಮುಟ್ಟುವ ಯೋನಿ ಮೆಟ್ಟುವ ಪಾದರಕ್ಷೆ ಈ ಎರಡೆಂಬ ಉಭಯಭ್ರಷ್ಟರಿಗೆ
    ಎಲ್ಲಿಯದೊ ಪ್ರಸಾದ ಗುಹೇಶ್ವರಾ ?/84

    ಅಜ್ಞಾನ ಸುಜ್ಞಾನಗಳೆರಡೂ ಶಿವನೆಂದಡೆ
    ಶಿವಜ್ಞಾನಿಗಳು ಮೆಚ್ಚುವರೆ ?
    ಶಿವ ಶಕ್ತಿಗಳೆರಡೂ ನೀನೇ ಎಂದಡೆ
    ಮಹಾನುಭಾವಿಗಳು ಪರಿಣಾಮಿಸುವರೆ ?
    ತನ್ನ ತಾನಾರೆಂಬುದನರಿಯದೆ, ಅನ್ಯವೆಲ್ಲವೂ ಬೊಮ್ಮವೆಂಬ,
    ಈ ಕರ್ಮದ ನುಡಿಯ ಮೆಚ್ಚುವನೆ ನಮ್ಮ ಗುಹೇಶ್ವರಲಿಂಗವು ?/85

    ಅಜ್ಞಾನವೆಂಬ ತೊಟ್ಟಿಲೊಳಗೆ, ಜ್ಞಾನವೆಂಬ ಶಿಶುವ ಮಲಗಿಸಿ,
    ಸಕಲ ವೇದಶಾಸ್ತ್ರವೆಂಬ ನೇಣ ಕಟ್ಟಿ,
    ಹಿಡಿದು ತೂಗಿ ಜೋಗುಳವಾಡುತ್ತಿದ್ದಾಳೆ ಭ್ರಾಂತಿಯೆಂಬ ತಾಯಿ !
    ತೊಟ್ಟಿಲು ಮುರಿದು ನೇಣು ಹರಿದು, ಜೋಗುಳ ನಿಂದಲ್ಲದೆ,
    ಗುಹೇಶ್ವರನೆಂಬ ಲಿಂಗವ ಕಾಣಬಾರದು/86

    ಅಜ್ಞಾನಿಯಾದವಂಗೆ ಅರಿವು ತಾನೆಲ್ಲಿಯದೊ ?
    ಸುಜ್ಞಾನಿಯಾದವಂಗೆ ಮರಹು ತಾನೆಲ್ಲಿಯದೊ ?
    ನಾನರಿದೆನೆಂಬಾತ ಇದಿರ ಕೇಳಲುಂಟೆ ?
    ಭ್ರಾಂತಿನ ಭ್ರಮೆಯೊಳಗೆ ಬಳಲುತ್ತಿರಲು
    ಮಾತಿನ ಮಾತಿನೊಳಗೆ ಅರಿವೆಂಬುದುಂಟೆ ?
    ಸೂತಕ ಹಿಂಗದೆ ಸಂದೇಹವಳಿಯದೆ,
    ಮುಂದಣ ಸೂಕ್ಷ್ಮವ ಕಾಬ ಪರಿಯೆಂತೊ?
    ಜ್ಯೋತಿಯ ಬಸಿರೊಳಗೆ ಜನಿಸಿದ
    ಕಾಂತಿಯೂಥ(ಯುತ?) ಬೆಳಗು ಗುಹೇಶ್ವರಾ ನಿಮ್ಮ ಶರಣ ! /87

    ಅಟ್ಟದ ಮೇಲೆ ಹರಿದಾಡುವ ಇಲಿ
    ಕಾದಿರ್ದ ಬೆಕ್ಕ ತಪ್ಪಿಸಿ,
    ಬೆಕ್ಕಿನ ಕಣ್ಣೊಳಡಗಿತ್ತು !
    ಕಣ್ಣೂ ಇಲಿಯೂ ಕೂಡೆ
    ಗುಹೇಶ್ವರಲಿಂಗವ ಕಂಡುದಿಲ್ಲ./88

    ಅಟ್ಟಿ ಮುಟ್ಟಲಿಲ್ಲ, ಮುಟ್ಟಿ ಮರಳಲಿಲ್ಲ,
    ಏನೆಂಬೆ ಲಿಂಗವೆ, ಎಂತೆಂಬೆ ಲಿಂಗಯ್ಯಾ ?
    ನಿಜವನರಿದ ಬಳಿಕ ಮರಳಿ ಹುಟ್ಟಲಿಲ್ಲ, ಕಾಣಾ ಗುಹೇಶ್ವರಾ./89

    ಅಟ್ಟಿತ್ತೊಂದು, ಓಡಿತ್ತೊಂದು, ಮುಟ್ಟಿ ಹಿಡಿಯಿತ್ತೊಂದು.
    ಅಟ್ಟಾಟಿಕೆಯಲಿ ಅರಿದಾವುದು !
    ಹಸು ಮಾಣಿಕ್ಯವ ನುಂಗಿ ಬ್ರಹ್ಮೇತಿಗೊಳಗಾಯಿತ್ತು.
    ಮೂರ್ತಿಯಾದುದೆ ಅಮೂರ್ತಿಯಾದತ್ತು,
    ಅಮೂರ್ತಿಯಾದುದೆ ಮೂರ್ತಿಯಾದತ್ತು.
    ಇದನೆಂತು ತೆಗೆಯಬಹುದು ? ಇದನೆಂತು ಕೊಳಬಹುದು !
    ಅಗಮ್ಯ, ಅಗೋಚರ.
    ಕಾಯವು ಲಿಂಗದೊಳಡಗಿ, ಪ್ರಾಣವು ಲಿಂಗದೊಳಗಿದ್ದು,
    ನೀನೆನ್ನ ಕರಸ್ಥಲದೊಳಗೆ ಮೂರ್ತಿಗೊಂಡು,
    ಕಾರುಣ್ಯವ ಮಾಡು ಗುಹೇಶ್ವರಾ./90

    ಅಟ್ಟಿಮುಟ್ಟಿತ್ತು ಮನ,
    ದೃಷ್ಟಿ ಲಿಂಗದ ಮೇಲೆ,
    ತನ್ನ ತಾನರಿದಾತ ತಾನೆ ಮರೆದ
    ಗುಹೇಶ್ವರ ಅಲ್ಲಯ್ಯ ನಿಶ್ಶಬ್ದ ಲಿಂಗದಲ್ಲಿ./91

    ಅಟ್ಟುದನಡಲುಂಟೆ ? ಸುಟ್ಟುದ ಸುಡಲುಂಟೆ ?
    ಜ್ಞಾನಾಗ್ನಿಯಲ್ಲಿ ದಗ್ಧವಾದ ಪರಮಶಿವಯೋಗಿಗೆ
    ಹುಟ್ಟು ಹೊಂದೆಂಬ ಉಭಯ ಜಡತೆಯುಂಟೆ ?
    ಅದೆಂತೆಂದಡೆ:
    “ದಗ್ಧಸ್ಯ ದಹನಂ ನಾಸ್ತಿ ಪಾಕಸ್ಯ ಪಚನಂ ನ ಹಿ
    ಜ್ಞಾನಾಗ್ನಿರ್ದಗ್ಧದೇಹಸ್ಯ ನ ಚ ದಾಹೋ ನ ಚ ಕ್ರಿಯಾ ”
    ಎಂದುದಾಗಿ-
    ನಮ್ಮ ಗುಹೇಶ್ವರಲಿಂಗವನೊಡಗೂಡಿ, ಎರಡಳಿದು ನಿಂದ,
    ಮಹಾಮಹಿಮಂಗೆ ಪರಿಭವವಿಲ್ಲ ಕಾಣಿರೊ./92

    ಅಡವಿಯಲೊಂದು ಮನೆಯ ಮಾಡಿ,
    ಆಶ್ರಯವಿಲ್ಲದಂತಾಯಿತ್ತು.
    ನಡುನೀರಿನ ಜ್ಯೋತಿಯ, ವಾಯುವಿನ ಕೈಯಲ್ಲಿ ಕೊಟ್ಟಂತಾಯಿತ್ತು.
    ಗುಹೇಶ್ವರಾ ನಿಮ್ಮ ಶರಣರು ಎರವಿನ ಲಿಂಗ ಮೂರು ಲೋಕಕ್ಕೆ !/93

    ಅಡವಿಯೊಳಗೆ ಕಳ್ಳರು ಕಡವಸಿದ್ಧ (ಕಡವಸದ?) ಸ್ವಾಮಿಯನು
    ಹುಡುಕಿ ಹುಡುಕಿ ಅರಸುತ್ತೈದಾರೆ.-ಸೊಡರು ನಂದಿ ಕಾಣದೆ !
    ಅನ್ನ ಪಾನದ ಹಿರಿಯರೆಲ್ಲರು ತಮ್ಮತಾವರಿಯದೆ,
    ಅಧರಪಾನವನುಂಡು ತೇಗಿ, ಸುರಾಪಾನವ ಬೇಡುತ್ತೈದಾರೆ.
    ಅರಿದ ಹಾರುವನೊಬ್ಬನು ಅರಿದ ತಲೆಯ ಹಿಡಿದುಕೊಂಡು,
    ಆಧ್ಯಾತ್ಮವಿಕಾರದ ನೆತ್ತರ ಕುಡಿದನು ನೋಡಾ-ಗುಹೇಶ್ವರಾ./94

    ಅಡಿಗಡಿಗೆ ತೊಳೆದು ಕುಡಿವಡೆ ಹೊಟ್ಟೆಯ ಜಲಗರಕುತ್ತ ಬೆಳೆಯಿತ್ತೆ ?
    ಅಚ್ಚ ಪ್ರಸಾದಿಯಾದಡೆ ಹಿಂದೆ ಪರಿಯಾಣ ಉಳಿವುದೆ ?
    ಇವರೆಲ್ಲರು ನಿಮ್ಮ ಪೂಜಿಸಿ ವ್ರತಗೇಡಿಗಳಾದರು.
    ನಾ ನಿಮ್ಮ ಪೂಜಿಸಿ ಬದುಕಿದೆನು ಗುಹೇಶ್ವರಾ !/95

    ಅಣುವಿಂಗೆ ಅಣು ಮಹತ್ತಿಂಗೆ ಮಹತ್ತು ಆದಲ್ಲಿ
    ಮರದೊಳಗಣ ಪತ್ರ-ಫಲಂಗಳು
    ಕಾಲವಶದಲ್ಲಿ ತೋರುವಂತೆ
    ಹರನೊಳಗಣ ಲೀಲಾಪ್ರಕೃತಿಸ್ವಭಾವ
    ಹರಲೀಲಾವಶದಲ್ಲಿ ತೋರುವುದು
    ಶಿವನೆ ಚೈತನ್ಯಾತ್ಮನು ಚಿತ್ಸ್ವರೂಪನೆಂದರಿಯಬಲ್ಲರೆ
    ಬಿನ್ನವೆಲ್ಲಿಯದೊ ಗುಹೇಶ್ವರಾ./96

    ಅಣೋರಣೀಯಾನ್ ಮಹತೋ ಮಹೀಯಾನ್” ಎಂಬ ಶ್ರುತಿ ಹುಸಿ.
    ಲಿಂಗವಿದ್ದಠಾವಿಂಗೆೆ(ಠಾವಿನಲ್ಲಿ?) ಪ್ರಳಯವುಂಟೆ?
    ಭಕ್ತರ ಭಾವದಲ್ಲಿರ್ಪನಲ್ಲದೆ, ಮತ್ತೆಲ್ಲಿಯೂ ಇಲ್ಲ ಗುಹೇಶ್ವರನು./97

    ಅತಿರಥ ಸಮರಥರೆನಿಪ ಹಿರಿಯರು,
    ಮತಿಗೆಟ್ಟು ಮರುಳಾದರಲ್ಲಾ !
    ದೇವಸತ್ತ ಬ್ರಹ್ಮ ಹೊತ್ತ, ವಿಷ್ಣು ಕಿಚ್ಚ ಹಿಡಿದ.
    ಗಂಗೆಗೌರಿಯರಿಬ್ಬರು ಬರು ಮುಂಡೆಯರಾದರು.
    ಇದ ಕಂಡು ಬೆರಗಾದೆ ಗುಹೇಶ್ವರಾ. /98

    ಅತ್ತಲಿಂದ ಒಂದು ಪಶುವು ಬಂದು,
    ಇತ್ತಲಿಂದ ಒಂದು ಪಶುವು ಬಂದು,
    ಒಂದರ ಮೋರೆಯನೊಂದು ಮೂಸಿ ನೋಡಿದಂತೆ,
    ಗುರುವು ಗುರುವಿನೊಳಗೆ ಸಂಬಂಧವಿಲ್ಲ ಶಿಷ್ಯರು ಶಿಷ್ಯರೊಳಗೆ ಸಂಬಂಧವಿಲ್ಲ,
    ಭಕ್ತರಲಿ ಭಕ್ತರಲಿ ಸಂಬಂಧವಿಲ್ಲ.
    ಈ ಕಲಿಯುಗದೊಳಗುಪದೇಶವ ಮಾಡುವ ಹಂದಿಗಳಿರಾ ನೀವು ಕೇಳಿರೊ,
    ಗಂಡಗೆ ಗುರುವಾದಡೆ ಹೆಂಡತಿಗೆ ಮಾವನೆ ?
    ಹೆಂಡತಿಗೆ ಗುರುವಾದಡೆ ಗಂಡಂಗೆ ಮಾವನೆ ?
    ಗಂಡ ಹೆಂಡತಿಗೆ ಗುರುವಾದಡೆ ಇವರಿಬ್ಬರೇನು ಒಡಹುಟ್ಟಿದರೆ ?
    ಈ ಭೇದವನರಿಯದೆ ದೀಕ್ಷೆ ಕಾರಣವ ಮಾಡುವಾತ ಗುರುವಲ್ಲ.
    ಈ ಕಳೆಯ ಕುಲವನರಿಯದಾತ ಶಿಷ್ಯನಲ್ಲ.
    ಈ ಭೇದವನರಿದು ಕಾರಣವ ಮಾಡುವ ಗುರುಶಿಷ್ಯ ಸಂಬಂಧವೆಲ್ಲ
    ಉರಿ ಕರ್ಪುರ ಸಂಯೋಗದಂತಹುದು ಕಾಣಾ ಗುಹೇಶ್ವರಾ./99

    ಅತ್ತಲಿತ್ತಲು ಕಾಣಲಿಲ್ಲ, ಬಯಲ ಧಾಳಿ ಮುಟ್ಟಿತ್ತಲ್ಲಾ !
    ಸರಳಮಂಡಲ ಮಂಜಿನ ಕಾಳಗತ್ತಲೆ ಕವಿಯಿತ್ತು.
    ರವಿಯ ರಥದಚ್ಚು ಮುರಿಯಿತ್ತು !
    ಶಶಿ ಅಂಶದ ನಿಲವನು ರಾಯ (ರಾಹು ?) ಗೆದ್ದುದ ಕಂಡು
    ಹಿರಿಯರು ಹೊಲಬುಗೆಟ್ಟರು ಗುಹೇಶ್ವರಾ./100

    ಅದೃಷ್ಟಕರಣದ ಮೇಲಣ ಪೂರ್ವಾಶ್ರಯವ ಕಳೆದು
    ಗುರುವಿನ ಹಸ್ತ ಮುಟ್ಟಿತ್ತೆಂಬ ಸಂದಣಿಯಲ್ಲಿ ಹೋಗದು.
    ಪಂಚೇಂದ್ರಿಯ ಲಿಖಿತವ ತೊಡೆದು, ಲಿಂಗಲಿಖಿತವ ಬರೆವುದು
    ಶಿಷ್ಯನ ಕೈಯಲ್ಲಲ್ಲದೆ ಗುರುವಿನ ಕೈಯಲಾಗದು.
    ಭವಿ ಮಾಡುವ ಬೋನವ,
    ಭಕ್ತ ಕಾಣದ ಹಾಗೆ ಅರ್ಪಿಸುವ ಭೇದವರಿದು,
    ಪ್ರಸಾದದ ಪೂರ್ವಾಶ್ರಯವ ಕಳೆದು,
    ರೂಪಿಸಬಲ್ಲೆವೆಂದಡೆ ಹರಿಯದು.
    ಗುರುವಿಲ್ಲದ ಶಿಷ್ಯ ಶಿಷ್ಯನಿಲ್ಲದ ಗುರು-
    ಇಂತೀ ಒಂದಕ್ಕೊಂದು ಇಲ್ಲದೆ
    ಗುಹೇಶ್ವರಲಿಂಗದಲ್ಲಿ ಸಹಜದುದಯವಾದ
    ನಮ್ಮ ಚನ್ನಬಸವಣ್ಣಂಗೆ ನಮೋ ನಮೋ ಎಂಬೆನು./101

    ಅದ್ಭುತವೆಂಬ ಪಿಶಾಚಿ ಮೂರುಲೋಕವನವಗ್ರಹಿಸಿತ್ತಯ್ಯಾ!
    ಆ ಅದ್ಭುತದೊಳಗೊಂದು ಗ್ರಹ, ನಿರಂತರ ನಲಿದಾಡುತ್ತಿದ್ದಿತ್ತಯ್ಯಾ!
    ವಜ್ರಯೋಗಿ ಖಗರಂಧ್ರಪುರದಲ್ಲಿ,
    ಗುಹೇಶ್ವರಲಿಂಗವು ತಾನೇ ನೋಡಾ./102

    ಅದ್ವೈತನ ಕರಸ್ಥಲದೊಳಗೆ, ಅನಂತನೆಂಬ ಗಿಳಿ ಮೂರ್ತಗೊಂಡು
    ಅತೀತ ಅನಾಗತ ವರ್ತಮಾನವೆಂಬ ಕೊರೆಕೂಳನುಂಡು
    ಓದಿತ್ತು ಅಗಣಿತ ಪುರಾಣ(ವ), ಅನಾಮಯ ಶಾಸ್ತ್ರವನು,
    ಅನುಪಮ ವೇದವೆಂದು.-
    ನಿಃಸ್ಥಲವ ಸ್ಥಲವಿಡಲು,
    ನಿರ್ಮಳಾತ್ಮಂಗೆ ಇಹವಿಲ್ಲ ಪರವಿಲ್ಲ !
    ಆದಿ ಮಧ್ಯಾಂತ ನಿರಾಳ ಗುಹೇಶ್ವರನ ಅನುಭವಿಗೆ
    ಸರ್ವಾಂಗ ಲಿಂಗವು !/103

    ಅದ್ವೈತವ ನುಡಿದು ಅಹಂಕಾರಿಯಾದೆನಯ್ಯಾ.
    ಬ್ರಹ್ಮವ ನುಡಿದು ಭ್ರಮಿತನಾದೆನಯ್ಯಾ.
    ಶೂನ್ಯವ ನುಡಿದು ನಾನು ಸುಖದುಃಖಕ್ಕೆ ಗುರಿಯಾದೆನಯ್ಯಾ.
    ಗುಹೇಶ್ವರಾ ನಿಮ್ಮ ಶರಣ ಸಂಗನಬಸವಣ್ಣನ ಸಾನ್ನಿಧ್ಯದಿಂದ
    ನಾನು ಸದ್ಭಕ್ತನಾದೆನಯ್ಯಾ./104

    ಅದ್ವೈತವೆಂಬ ಶಿಶುವೆನ್ನ ಕರಸ್ಥಲವ ಸೋಂಕಲೊಡನೆ
    ಎನ್ನ ತನ್ನಂತೆ ಮಾಡಿತ್ತಾಗಿ,
    ಎನ್ನ ನಾನೆಂಬ ವಿಚಾರವು ಅರತು ಹೋಯಿತ್ತು ಕೇಳಾ.
    ಮತ್ತೆ ಅನ್ಯವಿಚಾರವನೆಂತೂ ಅರಿಯೆನು.
    ಎನ್ನ ಪೂರ್ವಾಪರವ ನಿಮ್ಮಿಂದಲರಿಯಲೆಂದು ಬಂದು
    ನಿಮ್ಮ ಮರೆಹೊಕ್ಕೆನಾಗಿ,
    ಸಂಗನಬಸವಣ್ಣನ ಮಹಿಮೆಯ ನಾನೆತ್ತ ಬಲ್ಲೆನು ?
    ಗುಹೇಶ್ವರನ ಸಾಕ್ಷಿಯಾಗಿ
    ಸಂಗನಬಸವಣ್ಣ ನಿನ್ನ ಅಂತರಂಗದೊಳಗೆ ಬೆಳಗುತ್ತೈದಾನೆ.
    ಎನಗೊಮ್ಮೆ ಬಸವಣ್ಣನ ಘನವ ತಿಳುಹಿ ಕೊಡಾ ಚೆನ್ನಬಸವಣಾ/105

    ಅಧರ ತಾಗಿದ ರುಚಿಯ, ಉದರ ತಾಗಿದ ಸುಖವ,
    ಲಿಂಗಾರ್ಪಿತವ ಮಾಡಿದಡೆ ಕಿಲ್ಬಿಷ ನೋಡಿರೆ.
    ಓಗರ ಪ್ರಸಾದವಲ್ಲ; ಪ್ರಸಾದ ಅರ್ಪಿತವಲ್ಲ.
    ಇದನರಿದ ಶರಣಂಗೆ ಆಚಾರವಿಲ್ಲ, ಆಚಾರವಿಲ್ಲದ ಶರಣಂಗೆ ಲಿಂಗವಿಲ್ಲ.
    ಲಿಂಗವಿಲ್ಲದ ಶರಣನ ನಿಲವು;
    ಶಿವಸಂಪತ್ತಿನಲಾದ ಉದಯ, ವಿಪರೀತ ಸುಳುಹು !
    ಪ್ರಕಟಸಂಸಾರದ ಬಳಕೆಯ ಹೊಡಕಟ್ಟಿ ಹಾಯ್ದು
    ನಿಬ್ಬೆರಗು ಎಸೆವುದು ಅರಿವಿನ (ಎರವಿನ?) ಘಟದಲ್ಲಿ !
    ಅರ್ಪಿಸಿದ ಪ್ರಸಾದವನು ಭೇದದಿಂದ ರುಚಿಸುವನಲ್ಲ ಕೇಳಿರಯ್ಯಾ.
    ದಿಟವ ಬಿಟ್ಟು ಸಟೆಯಲ್ಲಿ ನಡೆಯ ನೋಡಾ.
    ಇಲ್ಲದ ಲಿಂಗವನುಂಟುಮಾಡಿ ಪೂಜಿಸುವ,
    ಬರಿಯ ಬಣ್ಣಕರೆಲ್ಲ ನೀವು ಕೇಳಿರೆ.
    ನೀವು ಪೂಜಕರಪ್ಪಿರಲ್ಲದೆ,
    ಗುಹೇಶ್ವರಲಿಂಗವಿಲ್ಲೆಂಬ ಶಬುದ ಸತ್ತು ಹುಟ್ಟುವರಿಗೆಲ್ಲಿಯದೊ ?/106

    ಅನಂತಕೋಟಿ ಪ್ರಕಾಶವೆಂದು ಗಣಿಸಬಾರದ ಬ್ರಹ್ಮದಾ ಬೆಳಗು,
    ನೋಡಬಾರದ ಘನವು ತೆರಹಿಲ್ಲದ ಬೆಳಗು, ಮಹಾಬೆಳಗು !
    ತನ್ನಿಂದ ತಾನಾದ ಸ್ವಯ ಸುಖದ ನಿಜ, ನಿತ್ಯ ನಿಜ;
    ರೂಪು ನಿರಂಜನ, ನಿಗಮಕ್ಕತೀತ !
    ಹರಿಯಜರಿಗೆಟುಕದ ಜ್ಯೋತಿರ್ಮಯ ತಾನೆ
    ಲೀಲೆಗೆ ಮೂಲವಾದ.
    ಗುಹೇಶ್ವರಲಿಂಗ ಘನಕ್ಕೆ, ಘನವಾದುದು !/107

    ಅನಲನಾರಣ್ಯದೊಳಗೆ ಎದ್ದಲ್ಲಿ;
    ದೂ(ಧು?)ರದೆಡೆಯಲಾರನೂ ಕಾಣೆವು,
    ಸಂಗ್ರಾಮದಿರರೆಲ್ಲರೂ ನೆಲೆಗೆಟ್ಟರಾಗಿ !
    ಮಾಯಾಮಂಜಿನ ಕೋಟೆಗೆ, ರಂಜನೆಯ ಕೊತ್ತಳ, ಅಂಜನೆಯ ಕಟ್ಟಳೆ.
    ಗುಹೇಶ್ವರನು ಶರಣ ಐಕ್ಯಸ್ಥಲವ ಮೆಟ್ಟಲೊಡನೆ,
    ಸರ್ವವೂ ಸಾಧ್ಯವಾಯಿತ್ತು./108

    ಅನಾದಿ ಶರಣನ ಹೃತ್ಕಮಲ ಮಧ್ಯದ
    ತೇಜೋಮಯವನೇನೆಂದುಪಮಿಸಯ್ಯಾ ?
    ಜಲವೆ ಪಾದಶಿಲೆ, ಪೃಥ್ವಿಯೆ ಪಿಂಡಿಗೆ
    ಆಕಾಶವೆ ಲಿಂಗ, ಸಪ್ತಸಮುದ್ರಗಳೆ ಪಂಚಾಮೃತ,
    ಮೇಘವೆ, ಅಗ್ಘವಣಿಯ ಬಿಂದಿಗೆ, ಮಳೆಗಾಲವೆ ಮಜ್ಜನ,
    ಚಂದ್ರಮನೆ ನೊಸಲ ಗಂಧ, ನಕ್ಷತ್ರವೆ ಅಕ್ಷತೆ,
    ತರುಮರಾದಿಗಳೆ ಪತ್ರೆಪುಷ್ಪ, ಮೊಳಗೆ ಪಂಚಮಹಾವಾದ್ಯ !
    ಮಾಗಿಯೆಂಬ ಪರಿಯಾಣವ ಬೆಳಗಿ, ಬೇಸಗೆಯೆಂಬ ಓಗರವ ಗಡಣಿಸಿ
    ಸರ್ವಪರಿಮಳವೆಂಬ ತುಪ್ಪವನೆರೆದು, ಪರವೆಂಬ ಮೇಲೋಗರವನಿಕ್ಕಿ
    ಬೆಳಗು ಕತ್ತಲೆಯೆಂಬ ಕನ್ನಡವ ಕಟ್ಟಿ,
    ಲಿಂಗವ ಆರೋಗಣೆಯ ಮಾಡಿಸಿ
    ಸುಜ್ಞಾನದಲ್ಲಿ ಕೈಗೆರೆದು
    ಭಾವವೆಂಬ ವೀಳೆಯವ ಕೊಟ್ಟು,
    ಅನು ನೀನೆಂಬ ಅನುಲೇಪಗಂಧವ ಪೂಸಿ
    ವಾಯುವೆಂಬ ವಸ್ತ್ರವನುಡಿಸಿ,
    ಗುಹೇಶ್ವರನೆಂಬ ಲಿಂಗ ಪರಿಪೂರ್ಣವಾಗಿದ್ದ ಬಳಿಕ,
    ಮಜ್ಜನಕ್ಕೆರೆವಠಾವಾವುದೈ ಸಂಗನಬಸವಣ್ಣಾ ?/109

    ಅನಾದಿಗಣನಾಥನ ಶಿಷ್ಯನು ಆದಿಗಣನಾಥನು.
    ಆದಿಗಣನಾಥನ ಶಿಷ್ಯನು ಅಧ್ಯಾತ್ಮಗಣನಾಥನು.
    ಅಧ್ಯಾತ್ಮಗಣನಾಥನ ಶಿಷ್ಯನು ಆತ್ಮಗಣನಾಥನು.
    ಆತ್ಮಗಣನಾಥನ ಶಿಷ್ಯನು ವ್ಯೋಮಸಿದ್ಧಗಣನಾಥನು
    ವೋಮಸಿದ್ಧಗಣನಾಥನ ಶಿಷ್ಯನು ಬಸವನೆಂಬ ಗಣನಾಥನು.
    ಬಸವನೆಂಬ ಗಣನಾಥನ ಶಿಷ್ಯನು ಅನಿಮಿಷನೆಂಬ ಗಣನಾಥನು.
    ಅನಿಮಿಷನೆಂಬ ಗಣನಾಥನ ಶಿಷ್ಯನು ಅಲ್ಲಮಪ್ರಭುವೆಂಬ ಗಣನಾಥನು.
    ಇಂತು ಅನಾದಿವಿಡಿದು ಬಂದ ಅನುಪಮಲಿಂಗವು,
    ಗುಹೇಶ್ವರನೆಂಬ ಹೆಸರನೊಳಕೊಂಡು,
    ಎನ್ನ ಕರಸ್ಥಲಕ್ಕೆ ಸಾಧ್ಯವಾಯಿತ್ತು ಕಾಣಾ ಸಿದ್ಧರಾಮಯ್ಯಾ./110

    ಅನಾದಿಪುರುಷ ಬಸವಣ್ಣಾ,
    ಕಾಲ ಮಾಯೆಗಳೆರಡೂ ನಿಮ್ಮ ಮುಂದಿರ್ದು,
    ನಿಮ್ಮ ಕಾಣೆವೆನುತ್ತಿಹವು.
    ಆದಿಪುರುಷ ಬಸವಣ್ಣಾ;
    ಸುರಾಸುರರು ನಿಮ್ಮ ಮುಂದಿರ್ದು ನಿಮ್ಮ ಕಾಣೆವೆನುತ್ತಿಹರು.
    ನಾದಪುರುಷ ಬಸವಣ್ಣಾ,
    ನಾದ ಮಂತ್ರಗಳು ಪಂಚಮಹಾವಾದ್ಯಂಗಳು
    ನಿಮ್ಮ ಮುಂದಿರ್ದು ನಿಮ್ಮ ಕಾಣೆವೆನುತ್ತಿಹವು.
    ವೇದಪುರುಷ ಬಸವಣ್ಣಾ,
    ವೇದಶಾಸ್ತ್ರಾಗಮ ಪುರಾಣಂಗಳು ನಿಮ್ಮ ಮುಂದಿರ್ದು ನಿಮ್ಮ ಕಾಣೆವೆನುತ್ತಿಹವು.
    ಆಗಮ್ಯಪುರುಷ ಬಸವಣ್ಣಾ,
    ಅಂಗಾಲ ಕಣ್ಣವರು ಮೈಯೆಲ್ಲ ಕಣ್ಣವರು ನಂದಿವಾಹನರು
    ಗಂಗೆವಾಳುಕರೆಲ್ಲರು ನಿಮ್ಮ ಮುಂದಿರ್ದು ನಿಮ್ಮ ಕಾಣೆವೆನುತ್ತಿಹರು.
    ಅಗೋಚರಪುರುಷ ಬಸವಣ್ಣಾ,
    ಈ ಗೋಚರಿಸಿದ ಮನುಮುನಿ ದೇವದಾನವ ಮಾನವರೆಲ್ಲರು
    ನಿಮ್ಮ ಮುಂದಿರ್ದು ನಿಮ್ಮ ಕಾಣೆವೆನುತ್ತಿಹರು.
    ಅಪ್ರಮಾಣಪುರುಷ ಬಸವಣ್ಣ,
    ಈ ಪ್ರಮಾಣರೆಲ್ಲರು ನಿಮ್ಮ ಮುಂದಿರ್ದು ನಿಮ್ಮ ಕಾಣೆವೆನುತ್ತಿಹರು.
    ಸರ್ವಜ್ಞಪುರುಷ ಬಸವಣ್ಣಾ,
    ಈ ಸರ್ವರು ನಿಮ್ಮ ಬಳಸಿರ್ದು ನಿಮ್ಮ ಕಾಣೆವೆನುತ್ತಿಹರು.
    ಇಂತೀ ಸರ್ವಪ್ರಕಾರದವರೆಲ್ಲರೂ
    ನಿಮ್ಮ ಸಾದಿಸಿ ಭೇದಿಸಿ ಪೂಜಿಸಿ ತರ್ಕಿಸಿ ಹೊಗಳಿ ಕಾಣದೆ
    ನಿಮ್ಮಿಂದವೆ ಉತ್ಪತ್ತಿ ಸ್ಥಿತಿಲಯಂಗಳಾಗುತ್ತಿಹರು.
    ಅದು ಕಾರಣ,-ನಮ್ಮ ಗುಹೇಶ್ವರಲಿಂಗದಲ್ಲಿ ಭಕ್ತಿವಡೆದ
    ಅನಂತ ಭಕ್ತರೆಲ್ಲ
    ಬಸವಣ್ಣ ಬಸವಣ್ಣ ಬಸವಣ್ಣ ಎನುತ್ತ ಬದುಕಿದರಯ್ಯಾ./111

    ಅನಾದಿಯ ಭ್ರೂಮಧ್ಯದಲ್ಲಿ, ಐದು ಕುದುರೆಯ ಕಟ್ಟಿದ ಕಂಬ, ಮುರಿಯಿತ್ತು !
    ಎಂಟಾನೆ ಬಿಟ್ಟೋಡಿದವು !
    ಹದಿನಾರು ಪ್ರಜೆ ಬೊಬ್ಬಿಡುತಿರ್ದರು.
    ಶತಪತ್ರಕಮಲಕರ್ಣಿಕೆಯ ಮಧ್ಯದಲ್ಲಿ
    ಗುಹೇಶ್ವರಲಿಂಗ ಶಬ್ದ ಮುಗ್ಧವಾಗಿರ್ದನು./112

    ಅನಾದಿಯ ಮಗನು ಆದಿ, ಆದಿಯ ಮಗನತೀತ,
    ಅತೀತನ ಮಗನು ಆಕಾಶ,. ಆಕಾಶನ ಮಗನು ವಾಯು,
    ವಾಯುವಿನ ಮಗನಗ್ನಿ, ಅಗ್ನಿಯ ಮಗನು ಅಪ್ಪು,
    ಅಪ್ಪುವಿನ ಮಗನು ಪೃಥ್ವಿ.
    ಪೃಥ್ವಿಯಿಂದ ಸಕಲ ಜೀವರೆಲ್ಲರು ಉದ್ಭವಿಸಿದರು ಗುಹೇಶ್ವರಾ/113

    ಅನಾದಿಯಲೊಬ್ಬ ಶರಣ;
    ಆಹ್ವಾನ ವಿಸರ್ಜನವಿಲ್ಲದ ಪರತತ್ವವ ಸ್ಥಾಪಿಸಿ ಪ್ರತಿಷ್ಠೆಯ ಮಾಡುವಲ್ಲಿ
    ಷಡುವರ್ಣಾತ್ಮಕ ಮೃಗಿ ಹುಟ್ಟಿದಳು ನೋಡಾ !
    ಆ ಮೃಗಿಯೊಳು ಪಂಚಾಂಗ ಪಂಚತಂಡದವರೆಲ್ಲ ಹುಟ್ಟಿ ವರ್ತಿಸಿ ಲಯವಾಗಿ,
    ಮತ್ತೆ ಪಲ್ಲವಿಸುತಿರ್ದರು ನೋಡಾ !
    ಆ ಪರತತ್ವದ ಲೀಲೆಯನು ಆ ಶರಣನೆ ಬಲ್ಲ ಗುಹೇಶ್ವರಾ/114

    ಅನು ನೀನೆಂಬುದು ತಾನಿಲ್ಲ, ತಾನರಿದ ಬಳಿಕ ಏನೂ ಇಲ್ಲ ಇಲ್ಲ.
    ಇಲ್ಲದ ಇಲ್ಲವೆ ಎಲ್ಲಿಂದ ಬಪ್ಪುದೊ?
    ಅನುವರಿದು, ತನುವ ಮರೆದ ಭಾವರಹಿತ ಗುಹೇಶ್ವರ./115

    ಅನುಭವ ಅನುಭವವೆಂಬ ಅಣ್ಣಗಳು ನೀವು ಕೇಳಿರೆ,
    ಅನುಭವವೆಂಬುದೊಂದು ಎತ್ತು, ಕೆಟ್ಟಿತ್ತು.
    ಎತ್ತು ಗೇಣುದ್ದ, ಕೊಂಬು ಮೊಳದುದ್ದ.
    ಕೆಟ್ಟೆಂಟು ದಿನ, ಕಂಡು ಹದಿನಾರುದಿನ
    ನಿನ್ನೆ ಮೆಟ್ಟಿದ ನಾಟಿಯ ಮೊನ್ನೆ ಮೇವುದ ಕಂಡೆ
    ಗುಹೇಶ್ವರನೆಂಬ ಎತ್ತು ನಿಮ್ಮೊಳಗೈದಾನೆ; ಅರಸಿಕೊಳ್ಳಿರೊ./116

    ಅನುಭವ ಪ್ರಾಣಲಿಂಗ ಪರಾತ್ಪರವೆಂದರಿದು,
    ಅಣೋರಣೀಯಾನ್ ಮಹತೋ ಮಹೀಯಾನ್'' ಎಂದು ಅಣುರೇಣು ತೃಣಕಾಷ್ಠದೊಳ್ಕೂಡಿ, ತೇನ ವಿನಾ ತೃಣಾಗ್ರಮಪಿ ನ ಚಲತಿ”-
    ಎಂದು ಪರಿಪೂರ್ಣ ಸದಾಶಿವನೆಂದರಿದು-
    ಇಂತು ಕ್ಷಣವೇದಿ ಅಂತರಂಗವ ವೇದಿಸಲ್ಕೆ, ಅಗಣಿತ ಅಕ್ಷೇಶ್ವರ ತಾನೆಂದು
    ಪ್ರಣಮಪ್ರಭೆಯ ಮೇಲಣ ಪರಂಜ್ಯೋತಿ ತಾನೆಂದರಿದ ಕಾರಣ
    ಗುಹೇಶ್ವರಾ ನಿಮ್ಮ ಶರಣನುಪಾಮಾತೀತನು./117

    ಅನುಭಾವದಿಂದ ಹುಟ್ಟಿತ್ತು ಲಿಂಗ,
    ಅನುಭಾವದಿಂದ ಹುಟ್ಟಿತ್ತು ಜಂಗಮ,
    ಅನುಭಾವದಿಂದ ಹುಟ್ಟಿತ್ತು ಪ್ರಸಾದ.
    ಅನುಭಾವ ಅನುವಿನಲ್ಲಿ ಗುಹೇಶ್ವರಲಿಂಗವನುಪಮ ಸುಖಿ./118

    ಅನುವನರಿಯದೆ, ಆದಿಯ ವಿಚಾರಿಸದೆ
    ಅನಾದಿಯಲ್ಲಿ ತಾನೆರೆಂಬುದ ನೋಡದೆ
    ಸ್ತೋತ್ರವ ಮಾಡಿ ಫಲವೇನು ?
    `ನಿಶ್ಶಬ್ದಂ ಬ್ರಹ್ಮ ಉಚ್ಯತೇ’ ಎಂಬ ಘನವು
    ಹೊಗಳತೆಗೆ ಸಿಕ್ಕುವುದೆ ಎಲೆ ಮರುಳುಗಳಿರಾ ?
    ಅನಾದಿಯಲ್ಲಿ ಬಸವಣ್ಣನು ಏಳುನೂರೆಪ್ಪತ್ತು ಅಮರಗಣಂಗಳು ಸಹಿತ
    ಮತ್ರ್ಯಕ್ಕೆ ಬಂದನೊಂದು ಕಾರಣದಲ್ಲಿ.
    ಬಂದ ಮಣಿಹ ಪೂರೈಸಿತ್ತು-ಸಂದ ಪುರಾತರೆಲ್ಲರೂ ಕೇಳಿ,
    ಇಂದು ನೀವೆಲ್ಲರು ನಿಮ್ಮ ನೀವು ತಿಳಿದು ನೋಡಿ
    ನಿಜವನೈದುವುದು.
    ಇನ್ನು ನಮ್ಮ ಗುಹೇಶ್ವರಲಿಂಗಕ್ಕೆ
    ಸುರಾಳದ ಸುಳುಹಿಲ್ಲ./119

    ಅನ್ನಬರ ಹಾಗೆನ್ನದಿರು ಸಂಗನಬಸವಣ್ಣಾ.
    ನಿನಗೆ ಬೇರೆ ಅಡಗುವ ಕುರುಹೆಂಬುದೊಂದೊಡಲುಂಟು
    ಎನಗೆ ಅಂಗೈಯ ನಾಮ, ಕಾಯವೆಂಬ ಕದಳಿ,
    ಗುಹೇಶ್ವರನೆಂಬ ಭ್ರಮೆ ಬಿಡದು./120

    ಅನ್ನವನಿಕ್ಕಿ ನನ್ನಿಯ ನುಡಿದು
    ಅರವಟ್ಟಿಗೆಯನಿಕ್ಕಿ ಕೆರೆಯ ಕಟ್ಟಿಸಿದಡೆ
    ಮರಣದಿಂದ ಮೇಲೆ ಸ್ವರ್ಗ ಉಂಟಲ್ಲದೆ
    ಶಿವನ ನಿಜವು ಸಾಧ್ಯವಾಗದು.
    ಗುಹೇಶ್ವರನನರಿದ ಶರಣಂಗೆ ಆವ ಫಲವೂ ಇಲ್ಲ/121

    ಅನ್ಯ ರಜವ ಸೋಂಕದೆ, ತನ್ನ ರಜವ ಬಾದಿಸದೆ,
    ರವಿಯ ಬೆಳಸ ಬಳಸದೆ ಲಿಂಗದಲ್ಲಿ ಬೆಳೆದ ಬೆಳಸ ತಂದು,
    ಜಂಗಮದಲ್ಲಿ ಸವೆಸುತಿಪ್ಪ[ನು] ಲಿಂಗಭಕ್ತ.
    ಆ ಭಕ್ತನಲ್ಲಿ ಗುಹೇಶ್ವರಲಿಂಗವಿಪ್ಪನು./122

    ಅಪರಿಮಿತ ಕತ್ತಲೆಯೊಳಗೆ ಪರಿಮಿತದ ಬೆಳಗನಿಕ್ಕಿದಡೆ
    ಬೆಳಕೂ ಅದೆ, ಕತ್ತಲೆಯೂ ಅದೆ !
    ಇದೇನು ಚೋದ್ಯವೊ? ಒಂದಕ್ಕೊಂದಂಜದು !
    ಆನೆಯೂ ಸಿಂಹವೂ ಒಂದಾಗಿ ಉಂಬುದ ಕಂಡು
    ಬೆರಗಾದೆನು ಕಾಣಾ – ಗುಹೇಶ್ವರಾ./123

    ಅಪ್ಪುವಿನ ಬಾವಿಗೆ ತುಪ್ಪದ ಘಟ;
    ಸಪ್ಪಗೆ, ಸಿಹಿ ಎಂಬ ಎರಡಿಲ್ಲದ ರುಚಿ,
    ಪರುಷ ಮುಟ್ಟದ ಹೊನ್ನು!
    ಕರೆಸದ ಬೊಜಗನು ಬೆರಸದೆ ಬಸುರಾಯಿತ್ತ ಕಂಡೆನಾಹಾ!
    ಅರುವಿನ ಆಪ್ಯಾಯನ ಮರಹಿನ ಸುಖವೊ!
    ಇದು ಕಾರಣ ಮೂರು ಲೋಕವಳಿಯಿತ್ತು ಗುಹೇಶ್ವರಾ./124

    ಅಭ್ಯಾಸದ ಮಾತಲ್ಲ, ಶ್ರೋತ್ರದ ಸುಖವಲ್ಲ,
    ಶಾಸ್ತ್ರದ ಅನುಭಾವದ ಮಾತಲ್ಲ.
    ಒಳಗಣ ಮಾತಲ್ಲ ಹೊರಗಣ ಮಾತಲ್ಲ.
    ಇದರಂಗ (ತು?) ವನರಿಯರೆ,
    ಅನುಭಾವವ ಮಾಡಿ ಫಲವೇನಯ್ಯಾ ?
    ಗುಹೇಶ್ವರಲಿಂಗವು ಉಪಮಾತೀತ ನೋಡಯ್ಯಾ ಸಿದ್ಧರಾಮಯ್ಯ !/125

    ಅಭ್ಯಾಸವ ಮಾಡುವ ಕೋಲಿಂಗೆ ಶರಣೆಂದಡೆ
    ಮುಂದಣ ಬವರಕ್ಕಾಗಬಲ್ಲುದೆ ಅಯ್ಯಾ ?
    ಇಷ್ಟಲಿಂಗವೆಂದು ಮುಟ್ಟಿ ಪೂಜಿಸುತ್ತಿದ್ದಡೆ
    ಮುಂದಣ ಶಂಕೆಗಿನ್ನೆಂತೊ ?
    ಲಿಂಗವೆಂದಡೆ ನಿಸ್ಸಂಗದಲ್ಲಿದೆ,
    ಜಂಗಮವೆಂದಡೆ ಆಶ್ರಯದಲ್ಲಿದೆ
    ಈ ಲಿಂಗಜಂಗಮವನೊಂದೆಂದಡೆ ಮುಂದಣ ಲಯಕ್ಕಿನ್ನೆಂತೊ ?
    ಎಲೆ ಗುಹೇಶ್ವರಾ,
    ನಿಮ್ಮ ಶರಣ ಚತುರ್ವಿಧಪದವಿಗಳಿಗೆ ಹೊರಗು./126

    ಅಮರದ ಹೊಲಬನರಿಯದೆ ಜಗ ಬರಡಾಯಿತ್ತು.
    ಅಂಗದ ಹೊಲಬನರಿಯದೆ ಯೋಗ ಭಂಗವಾಯಿತ್ತು.
    ಸಂಗದ ಹೊಲಬನರಿಯದೆ ಶರಣರು ಭಂಗಿತರಾದರು.
    ಲಿಂಗದ ಹೊಲಬನರಿಯದೆ ಭಕ್ತ ಶೀಲವಂತನಾದ.
    ಆದಿ ಮಧ್ಯಾವಸಾನದಲ್ಲಿ ಗುಹೇಶ್ವರನೆಂಬ ಲಿಂಗವು,
    ಅರಿವಿನ ಮರೆಯಲ್ಲಿಹುದನಾರೂ ಅರಿಯರಲ್ಲಾ !/127

    ಅಮರದ ಹೊಲಬನರಿಯದೆ ಜಗವೆಲ್ಲ ಬರಡಾಯಿತ್ತು.
    ಅಂಗದ ಹೊಲಬನರಿಯದೆ ಯೋಗಿಗಳೆಲ್ಲ ಭಂಗಿತರಾದರು
    ಸಂಗದ ಹೊಲಬನರಿಯದೆ ಶರಣರು ಭಂಗಿತರಾದರು
    ಲಿಂಗದ ಹೊಲಬನರಿಯದೆ ಭಕ್ತ ಶೀಲವಂತನಾದ.
    ಆದಿ ಮಧ್ಯಾವಸಾನದಲ್ಲಿ ಗುಹೇಶ್ವರನೆಂಬ ಲಿಂಗವು
    ಅರಿವಿನ ಮರೆಯಲ್ಲಿಹುದನಾರೂ ಅರಿಯರಲ್ಲಾ ?/128

    ಅಮರಾವತಿಯ ಪಟ್ಟಣದೊಳಗೆ,
    ದೇವೇಂದ್ರನಾಳುವ ನಂದನವನವಯ್ಯಾ.
    ಅತ್ತ ಸಾರಲೆ ಕಾಮಯ್ಯಾ, ಮೋಹವೆ ನಿನಗೆ?
    ಲೋಕಾದಿಲೋಕವೆಲ್ಲವ ಮರುಳು ಮಾಡಿದೆ.
    ಕಾಮಾ, ಗುಹೇಶ್ವರಲಿಂಗವನರಿಯೊ./129

    ಅಮೃತ ಸೇವನೆಯ ಮಾಡಿ ಆಪ್ಯಾಯನ ಘನವಾಯಿತ್ತು.
    ಪರುಷವೇದಿಯ ಸಾದಿಸ ಹೋದಡೆ ದಾರಿದ್ರ್ಯ ಘನವಾಯಿತ್ತು.
    ಮರುಜೇ (ಜ?)ವಣಿಯ ಹಣ್ಣ ಮೆದ್ದು, ಮರಣವಾಯಿತ್ತ ಕಂಡೆ.
    ಎಲ್ಲವನೂ ಸಾದಿಸ ಹೋದಡೆ ಏನೂ ಇಲ್ಲದಂತಾಯಿತ್ತು.
    ನಾನು ನಿಜವ ಸಾದಿಸಿ ಬದುಕಿದೆನು ಗುಹೇಶ್ವರಾ./130

    ಅಮೃತಕಲೆಯ ಸೂಡಿದವ ಅಂಬಲಿಯನುಂಬನೆ ?
    ಶಿವನಾರು ? ಮಾಂಸನಾರು ?
    ಚೋಳಿಯಕ್ಕನೆಂಜಲ, ಹಸಿದುಂಡನೆನಬಹುದೆ ?
    ಹಸುಳೆಯ ಕೈಯ ಹಾಲನಾರು ಕಿತ್ತುಕೊಂಬರು ?
    ಗುಹೇಶ್ವರಾ, ನೀನು ಭಕ್ತಿಪ್ರಿಯನೆಂಬುದ
    ಮೂರು ಲೋಕವರಿಯದೆ ?/131

    ಅಮೃತಸಾಗರದೊಳಗಿರ್ದು ಆಕಳ ಚಿಂತೆ ಏಕೆ ?
    ಮೇರುಮಧ್ಯದೊಳಗಿರ್ದು ಜರಗ ತೊಳೆವ ಚಿಂತೆ ಏಕೆ ?
    ಗುರುವಿನೊಳಗಿರ್ದು ತತ್ವವಿದ್ಯೆಯ ಚಿಂತೆ ಏಕೆ ?
    ಪ್ರಸಾದದೊಳಗಿರ್ದು ಮುಕ್ತಿಯ ಚಿಂತೆ ಏಕೆ ?
    ಕರಸ್ಥಲದೊಳಗೆ ಲಿಂಗವಿರ್ದ ಬಳಿಕ,
    ಮತ್ತಾವ ಚಿಂತೆ ಏಕೆ ಹೇಳಾ ಗುಹೇಶ್ವರಾ ?/132

    ಅಯ್ಯ ! ಆಗಮಿಕನಲ್ಲಿ ವೇದಪಾಠಕನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ
    ತರ್ಕನಲ್ಲ ವ್ಯಾಕರಣನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ
    ಶಾಸ್ತ್ರಜ್ಞನಲ್ಲ ಪುರಾಣಿಕನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ
    ವಾದಿಯಲ್ಲ ಉಪನೀತಿಯಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ
    ಮಾತಿನವನಲ್ಲ ಮಥನದವನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ
    ನೀತಿಯವನಲ್ಲ ಖ್ಯಾತಿಯವನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ
    ರತಿಯವನಲ್ಲ ವಿರತಿಯವನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ
    ಹೆಣ್ಣು ರೂಪನಲ್ಲ ಗಂಡು ರೂಪನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ
    ನಾಮದವನಲ್ಲ ಸೀಮೆಯವನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ
    ಆಕ್ರಿಯದವನಲ್ಲ ದುಃಕ್ರಿಯದವನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ
    ಶ್ವಾನಜ್ಞಾನಿಯಲ್ಲ ಕುಕ್ಕಟಜ್ಞಾನಿಯಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ
    ಆಶನಿಯಲ್ಲ ವ್ಯಸನಿಯಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ
    ಇಂತು ಉಭಯ ಬಿನ್ನನಾಮವಳಿದ ಸಂಗನ ಬಸವಣ್ಣನ ಕರ ನಯನ ಮುಖದಲ್ಲಿ
    ಬೆಳಗುವ ಚಿಜ್ಯೋತಿ ತಾನೆ ನೋಡ! ನಿರವಯಶೂನ್ಯಲಿಂಗಮೂರ್ತಿ ಚೆನ್ನಬಸವಣ್ಣ./133

    ಅಯ್ಯ ! ಏಕಮುಖನಲ್ಲ ದ್ವಿಮುಖನಲ್ಲ ನೋಡ !
    ನಿರವಯಶೂನ್ಯಲಿಂಗಮೂರ್ತಿ.
    ತ್ರಿಮುಖನಲ್ಲ ಚತುಮರ್ುಖನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ.
    ಪಂಚಮುಖನಲ್ಲ ಷಣ್ಮುಖನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ.
    ಸಪ್ತಮುಖನಲ್ಲ ಅಷ್ಟಮುಖನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ.
    ನವಮುಖನಲ್ಲ ದಶಮುಖನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ.
    ಜೀವಾತ್ಮನಲ್ಲ ಅಂತರಾತ್ಮನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ.
    ಜಾಗ್ರನಲ್ಲ ಸ್ವಪ್ನನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ.
    ವಿಶ್ವನಲ್ಲ ತೈಜಸನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ.
    ನೋಡ ! ನಿರವಯಶೂನ್ಯಲಿಂಗಮೂರ್ತಿ.
    ಖೇಚರನಲ್ಲ ಭೂಚರನಲ್ಲ
    ನಿರವಯಶೂನ್ಯಲಿಂಗಮೂರ್ತಿ.
    ಜಾರನಲ್ಲ ಚೋರನಲ್ಲ ನೋಡ !
    ಹಮ್ಮಿನವನಲ್ಲ ಬಿಮ್ಮಿನವನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ.
    ಭುಕ್ತನಲ್ಲ ಮುಕ್ತನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ-
    ಇಂತು ಉಭಯವಳಿದ ಸಂಗನಬಸವಣ್ಣನ
    ಬೆಳಗಿನೊಳಗೆ ಮಹಾ ಬೆಳಗಾಗಿರ್ಪುದು ನೋಡ ! ಗುಹೇಶ್ವರಲಿಂಗವು
    ಚೆನ್ನಬಸವಣ್ಣ./134

    ಅಯ್ಯ ! ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರ,
    ಕ್ಷುತ್ತು, ಪಿಪಾಸೆ, ಶೋಕ, ಮೋಹ, ಜನನ ಮರಣಂಗಳ, ಅಡಿಮೆಟ್ಟಿ ನಿಂದು,
    ಅಷ್ಟವಿಧಾರ್ಚನೆ-ಷೋಡಶೋಪಚಾರಂಗಳ ಮಾಡಿ ಶಿವನನಂತ ಲೀಲೆಗಳನರ್ಚಿಸಿ
    ಫಲ-ಪದ-ಮೋಕ್ಷಂಗಳ ಪಡೆಯಬೇಕೆಂಬ ಬಯಕೆಯನುಳಿದು,
    ಅಂತರಂಗದ ಜ್ಞಾನ, ಬಹಿರಂಗದ ಸತ್ಕ್ರಿಯಾಚಾರಂಗಳಲ್ಲಿ
    ದೃಢ ಚಿತ್ತದಿಂದ ನಿಂದು, ಹಿಂದೆ ಹೇಳಿದ
    ಸದ್ಭಕ್ತ-ಮಹೇಶ್ವರ-ಪ್ರಸಾದಿ-ಪ್ರಾಣಲಿಂಗಿ-ಶರಣಸ್ಥಲಂಗಳನೊಳಗು
    ಮಾಡಿಕೊಂಡು,
    ಪರಾತ್ಪರ ನಿತ್ಯತೃಪ್ತಾನಂದ ಮೂರ್ತಿಯಾಗಿ,
    ಝಗಝಗಿಸುವ ನಿಜೈಕ್ಯನಂತರಂಗದಲ್ಲಿ ಚಿದ್ರೂಪಲೀಲೆಯಿಂ
    ಸಾಕಾರ-ನಿರಾಕಾರ; ಸಕಲ-ನಿಃಕಲತತ್ತ್ವಂಗಳನೊಳಕೊಂಡು,
    ಹದಿಮೂರು ಸ್ಥಲಂಗಳ ಗರ್ಬಿಕರಿಸಿಕೊಂಡು,
    ಎಂಟುನೂರ ಆರುವತ್ತನಾಲ್ಕು ಮಂತ್ರಮಾಲಿಕೆಗಳ ಪಿಡಿದುಕೊಂಡು,
    ಇಪ್ಪತ್ತುನಾಲ್ಕು ಸಕೀಲಗರ್ಭದಿಂ
    ಜ್ಯೋತಿ ಜ್ಯೋತಿ ಕೂಡಿ ಬಿನ್ನ ದೋರದ ಹಾಂಗೆ ಏಕಸ್ವರೂಪಿನಿಂದ
    ವೇದಸ್ವರೂಪ ಮಹಾಲಿಂಗವಾಗಿ ನೆಲಸಿರ್ಪುದು ನೋಡ !
    ನಿರವಯಶೂನ್ಯಲಿಂಗಮೂರ್ತಿ ಗುಹೇಶ್ವರಲಿಂಗವು
    ಚೆನ್ನಬಸವಣ್ಣ. /135

    ಅಯ್ಯ ! ಕಾರ್ಯನಲ್ಲ ಕಾರಣನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ.
    ಭೇದಕನಲ್ಲ ಸಾಧಕನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ.
    ಪಾತಕನಲ್ಲ ಸೂತಕನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ.
    ದ್ವೈತನಲ್ಲ ಅದ್ವೈತನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ.
    ಕಾಟಕನಲ್ಲ ಕೀಟಕನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ.
    ಎನ್ನವನಲ್ಲ ನಿನ್ನವನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ.
    ಸಂಕಲ್ಪನಲ್ಲ ವಿಕಲ್ಪನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ.
    ಒಮ್ಮೆ ಆಚಾರದವನಲ್ಲ ಒಮ್ಮೆ ಅನಾಚಾರದವನಲ್ಲ ನೋಡ !
    ನಿರವಯಶೂನ್ಯಲಿಂಗಮೂರ್ತಿ.
    ಕುಂಟಣಿಯಲ್ಲ ನೆಂಟಣಿಯಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ.
    ದುಶ್ಶೀಲನಲ್ಲ ದುರ್ಮಾಗರ್ಿಯಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ.
    ಜಾತಿಯವನಲ್ಲ ಅಜಾತಿಯವನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ.
    ಇಂದು ಉಭಯವಳಿದು ಬೆಳಗುವ ಸಂಗನಬಸವಣ್ಣನ
    ಉನ್ಮನಾಗ್ರದಲಿ ಹೊಳೆವಾತ ತಾನೆ ನೋಡ ! ಗುಹೇಶ್ವರಲಿಂಗವು
    ಚೆನ್ನಬಸವಣ್ಣ./136

    ಅಯ್ಯ ! ಗಮನಿಯಲ್ಲ ನಿರ್ಗಮನಿಯಲ್ಲ ನೋಡ !
    ನಿರವಯ ಶೂನ್ಯಲಿಂಗಮೂರ್ತಿ
    ಸುಚಿಂತನಲ್ಲ, ದುಶ್ಚಿಂತನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ
    ಕುಟಿಲನಲ್ಲ ಕುಹಕನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ
    ಬೂಟಕನಲ್ಲ ಚಾಟಕನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ
    ದಿಟದವನಲ್ಲ ಸಟೆಯವನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ
    ಸಂಚಲನಲ್ಲ ವಂಚಲನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ
    ಪ್ರಪಂಚನಲ್ಲ ಪ್ರಮಾಣನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ
    ಗಣಿತನಲ್ಲ ಅಗಣಿತನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ
    ಖಂಡಿತನಲ್ಲ ಅಖಂಡಿತನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ
    ಚರಿತನಲ್ಲ ಅಚರಿತನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ
    ಭರಿತನಲ್ಲ ಸುರಿತನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ
    ಚಾಡಿಯಲ್ಲ ಚಿತಾಲನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ
    ಗಾರುಡನಲ್ಲ (ಗಾಡಿಗನಲ್ಲ?) ಕುರೂಪನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ
    ಮರುಳನಲ್ಲ ದುರುಳನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ
    ಆಶಕನಲ್ಲ ಪಾಶಕನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ
    ಇಂತು ಉಭಯವಳಿದುಳಿದು ಸಂಗನ ಬಸವಣ್ಣನ
    ಅರುವಿನ ಮಧ್ಯದಲಿ ಬೆಳಗುವ ಜ್ಯೋತಿ ತಾನೆ ನೋಡ ! ಗುಹೇಶ್ವರಲಿಂಗವು
    ಚೆನ್ನಬಸವಣ್ಣ./137

    ಅಯ್ಯ ! ಜ್ಞಾನೇಂದ್ರಿಯ, ಕಮರ್ೆಂದ್ರಿಯ, ವಿಷಯಂಗಳು,
    ಕರಣ ಮುಂತಾದವರ ಆಶಾಪಾಶಂಗಳನುಳಿದು
    ನುಡಿಯಂತೆ ನಡೆ, ನಡೆಯಂತೆ ನುಡಿ-ದೃಢಚಿತ್ತದಿಂದ ಘಟ್ಟಿಗೊಂಡು,
    ಹಿಂದೆ ಹೇಳಿದ ಸದ್ಭಕ್ತ-ಮಹೇಶ್ವರ-ಪ್ರಸಾದಿ-ಪ್ರಾಣಲಿಂಗಿ
    ಸ್ಥಲಂಗಳ ನೊಳಗುಮಾಡಿಕೊಂಡು,
    ಪರಮಪರಿಣಾಮಿ ಅಚಲಾನಂದಮೂರ್ತಿಯಾಗಿ,
    ಝಗಝಗಿಸಿ ನೆಲಸಿರ್ಪ ಶಿವಶರಣನಂತರಂಗದಲ್ಲಿ,
    ಚಿನ್ಮಯಪರನಾದ ಸ್ವಯಂಭು ಲೀಲೆಯಿಂ,
    ಮಿಶ್ರಾಮಿಶ್ರಂಗಳೊಡನೆ ಕೂಡಿದ, ಸಕಲ ತತ್ತ್ವಂಗಳನೊಳಕೊಂಡು,
    ಹದಿಮೂರುಸ್ಥಲಂಗಳ ಗರ್ಬಿಕರಿಸಿಕೊಂಡು,
    ಆರುಸಾವಿರದ ಒಂಬೈನೂರ ಹನ್ನೆರಡು ಮಂತ್ರ ಮಾಲೆಗಳ ಪಿಡಿದುಕೊಂಡು,
    ಇಪ್ಪತ್ತುನಾಲ್ಕು ಸಕೀಲಗರ್ಭದಿಂ
    ಕ್ಷೀರಕ್ಷೀರ ಬೆರದು ಬಿನ್ನದೋರದ ಹಾಂಗೆ, ಏಕರೂಪಿನಿಂದೆ
    ಈಳನಸ್ವರೂಪ ಪ್ರಸಾದಲಿಂಗಮೂರ್ತಿಯಾಗಿ [ನೆಲಸಿರ್ಪುದು] ನೋಡ !
    ನಿರವಯಶೂನ್ಯಲಿಂಗಮೂರ್ತಿ ಗುಹೇಶ್ವರಲಿಂಗವು
    ಚೆನ್ನಬಸವಣ್ಣ. /138

    ಅಯ್ಯ ! ದರಿದ್ರನಲ್ಲ ಧನಿಕನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ
    ಕುಚಿತ್ತದವನಲ್ಲ ಸುಚಿತ್ತದವನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ
    ಕುಬುದ್ಧಿಯವನಲ್ಲ ಸುಬುದ್ಧಿಯವನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ
    ಅಹಂಕಾರಿಯಲ್ಲ ನಿರಹಂಕಾರಿಯವನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ
    ಕುಮನದವನಲ್ಲ ಸುಮನದವನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ
    ಅಜ್ಞಾನದವನಲ್ಲ ಸುಜ್ಞಾನದವನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ
    ದುರ್ಭಾವದವನಲ್ಲ ಸದ್ಭಾವದವನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ
    ಸಕಲನಲ್ಲ ನಿಃಕಲನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ
    ಅರ್ಪಿತನಲ್ಲ ಅನರ್ಪಿತನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ
    ಆಹ್ವಾನನಲ್ಲ ವಿಸರ್ಜನನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ
    ಇಂತು ಉಭಯವಳಿದು ಬೆಳಗುವ ಸಂಗನಬಸವಣ್ಣನ
    ಕರನಯನದಲ್ಲಿ ಝಗಝಗಿಸುವ ಗುಹೇಶ್ವರಲಿಂಗವು ತಾನೆ ನೋಡ !
    ಚೆನ್ನಬಸವಣ್ಣ./139

    ಅಯ್ಯ ! ದೀಕ್ಷಾಗುರು, ಶಿಕ್ಷಾಗುರು, ಜ್ಞಾನಗುರುಗಳೆಂಬ ತ್ರಿವಿಧ ಗುರುಗಳು:
    ಕ್ರಿಯಾಲಿಂಗ, ಜ್ಞಾನಲಿಂಗ, ಭಾವಲಿಂಗವೆಂಬ ತ್ರಿವಿಧ ಲಿಂಗಗಳು:
    ಸ್ವಯ, ಚರ, ಪರವೆಂಬ ತ್ರಿವಿಧ ಜಂಗಮವು-
    ಈ ಒಂಬತ್ತು ಆಚಾರಲಿಂಗದಲ್ಲಿ ಸಂಬಂಧವು.
    ಕ್ರಿಯಾಗಮ, ಭಾವಾಗಮ, ಜ್ಞಾನಾಗಮವೆಂಬ ತ್ರಿವಿಧ ಲಿಂಗಗಳು,
    ಸಕಾಯ, ಆಕಾಯ, ಪರಕಾಯವೆಂಬ ತ್ರಿವಿಧ ಗುರುಗಳು:
    ಧರ್ಮಾಚಾರ, ಭಾವಾಚಾರ, ಜ್ಞಾನಾಚಾರವೆಂಬ ತ್ರಿವಿಧ ಜಂಗಮವು-
    ಈ ಒಂಬತ್ತು ಗುರುಲಿಂಗದಲ್ಲಿ ಸಂಬಂಧವು.
    ಕಾಯಾನುಗ್ರಹ, ಇಂದ್ರಿಯಾನುಗ್ರಹ, ಪ್ರಾಣಾನುಗ್ರಹವೆಂಬ ತ್ರಿವಿಧ ಗುರುಗಳು
    ಕಾಯಾರ್ಪಿತ, ಕರಣಾರ್ಪಿತ, ಭಾವಾರ್ಪಿತವೆಂಬ ತ್ರಿವಿಧ ಲಿಂಗಗಳು:
    ಶಿಷ್ಯ, ಶುಶ್ರೂಷ, ಸೇವ್ಯವೆಂಬ ತ್ರಿವಿಧ ಜಂಗಮವು-
    ಈ ಒಂಬತ್ತು ಶಿವಲಿಂಗದಲ್ಲಿ ಸಂಬಂಧವು.
    ಈ ಮೂರು ಸ್ಥಲವು ಅನಾದಿಭಕ್ತನ ಮಾರ್ಗಕ್ರಿಯಾ ಸ್ವರೂಪು.
    ಜೀವಾತ್ಮ, ಅಂತರಾತ್ಮ, ಪರಮಾತ್ಮವೆಂಬ ತ್ರಿವಿಧಲಿಂಗಗಳು:
    ನಿರ್ದೆಹಾಗಮ, ನಿರ್ಭಾವಾಗಮ, ನಷ್ಟಾಗಮವೆಂಬ ತ್ರಿವಿಧ ಗುರುಗಳು;
    ಆದಿಪ್ರಸಾದಿ, ಅಂತ್ಯಪ್ರಸಾದಿ, ಸೇವ್ಯ ಪ್ರಸಾದಿಯೆಂಬ ತ್ರಿವಿಧ ಜಂಗಮವು-
    ಈ ಒಂಬತ್ತು ಜಂಗಮಲಿಂಗದಲ್ಲಿ ಸಂಬಂಧವು-
    ದೀಕ್ಷಾಪಾದೋದಕ, ಶಿಕ್ಷಾಪಾದೋದಕ, ಜ್ಞಾನಪಾದೋದಕವೆಂಬ
    ತ್ರಿವಿಧ ಲಿಂಗಂಗಳು,
    ಕ್ರಿಯಾನಿಷ್ಪ, ಭಾವನಿಷ್ಪ, ಜ್ಞಾನನಿಷ್ಪಯೆಂಬ ತ್ರಿವಿಧ ಗುರುಗಳು;
    ಪಿಂಡಾಕಾಶ, ಬಿಂದ್ವಾಕಾಶ, ಮಹದಾಕಾಶವೆಂಬ ತ್ರಿವಿಧ ಜಂಗಮವು-
    ಈ ಒಂಬತ್ತು ಪ್ರಸಾದಲಿಂಗದಲ್ಲಿ ಸಂಬಂಧವು.
    ಕ್ರಿಯಾಪ್ರಕಾಶ, ಭಾವಪ್ರಕಾಶ, ಜ್ಞಾನಪ್ರಕಾಶವೆಂಬ ತ್ರಿವಿಧ ಲಿಂಗಗಳು
    ಕೊಂಡದ್ದು ಪ್ರಸಾದ, ನಿಂದದ್ದು ಓಗರ,
    ಚರಾಚರನಾಸ್ತಿಯೆಂಬ ತ್ರಿವಿಧ ಗುರುಗಳು;
    ಬಾಂಢಸ್ಥಲ, ಭಾಜನಸ್ಥಲ, ಅಂಗಲೇಪನಸ್ಥಲವೆಂಬ ತ್ರಿವಿಧ ಜಂಗಮವು-
    ಈ ಒಂಬತ್ತು ಮಹಾಲಿಂಗದಲ್ಲಿ ಸಂಬಂಧವು.
    ಈ ಮೂರು ಸ್ಥಲವು ಅನಾದಿ ಜಂಗಮದ ಮೀರಿದ ಕ್ರಿಯಾ ಸ್ವರೂಪವು.
    ಈ ಉಭಯಂ ಕೂಡಲು ಐವತ್ತುನಾಲ್ಕು ಸ್ಥಲಂಗಳಾದವು. ಮುಂದುಳಿದ
    ಮೂರು ಸ್ಥಲಂಗಳಲ್ಲಿ ಭಾವಾಭಾವನಷ್ಟಸ್ಥಲವೆ ಮೂಲ ಗುರುಸ್ವರೂಪವಾಗಿ
    ಹದಿನೆಂಟು ಗುರುಸ್ಥಲಂಗಳನೊಳಕೊಂಡು
    ಕ್ರಿಯಾಗುರುಲಿಂಗ ಜಂಗಮ ಸ್ವರೂಪವಾದ
    ಇಷ್ಟಮಹಾಲಿಂಗದ ಅಧೋಪೀಠಿಕೆಯೆಂಬ ಹಲ್ಲೆಯಲ್ಲಿ
    ಸ್ಪರ್ಶನೋದಕ, ಅವಧಾನೋದಕ, ಗುರುಪಾದೋದಕ,
    ಅಪ್ಯಾಯನಪ್ರಸಾದ, ಸಮಯಪ್ರಸಾದ, ಗುರುಪ್ರಸಾದ
    ಆದಿ ಪ್ರಸಾದ, ನಿಚ್ಚಪ್ರಸಾದವಾಗಿ ತೆರಹಿಲ್ಲದೆ ಒಪ್ಪುತ್ತಿರ್ಪುದು ನೋಡ !
    ಜ್ಞಾನಶೂನ್ಯಸ್ಥಲವೆ ಮೂಲ ಜಂಗಮಸ್ವರೂಪವಾಗಿ
    ಹದಿನೆಂಟು ಚರಸ್ಥಲಂಗಳನೊಳಕೊಂಡು
    ಮಹಾಜ್ಞಾನಗುರುಲಿಂಗಜಂಗಮ ಸ್ವರೂಪವಾದ
    ಇಷ್ಟಮಹಾಲಿಂಗದ ಜಲರೇಖೆಯನ್ನುಳ್ಳ ಪಾನಿವಟ್ಟಲಲ್ಲಿ
    ಪರಿಣಾಮೋದಕ, ನಿರ್ನಾಮೋದಕ, ಜಂಗಮಪಾದೋದಕ, ನಿತ್ಯೋದಕ,
    ಸಮತಾಪ್ರಸಾದ, ಪ್ರಸಾದಿಯ ಪ್ರಸಾದ, ಜಂಗಮ ಪ್ರಸಾದ, ಸದ್ಭಾವ ಪ್ರಸಾದ,
    ಜ್ಞಾನಪ್ರಸಾದ, ಸೇವ್ಯ ಪ್ರಸಾದ,
    ಅಚ್ಚ ಪ್ರಸಾದವಾಗಿ ತೆರಹಿಲ್ಲದೆ ಒಪ್ಪುತಿರ್ಪುದು ನೋಡ !
    ಸ್ವಯ ಪರವರಿಯದ ಸ್ಥಲವೆ ಮೂಲಲಿಂಗಸ್ವರೂಪವಾಗಿ
    ಹದಿನೆಂಟು ಲಿಂಗಸ್ಥಲಂಗಳನೊಳಕೊಂಡು
    ಜ್ಞಾನಗುರುಲಿಂಗ ಜಂಗಮ ಸ್ವರೂಪವಾದ
    ಇಷ್ಟಮಹಾಲಿಂಗದ ಉನ್ನತವಾದ ಗೋಲಕದಲ್ಲಿ
    ಅಪ್ಯಾಯನೋದಕ, ಹಸ್ತೋದಕ, ಲಿಂಗಪಾದೋದಕ,
    ಪಂಚೇಂದ್ರಿ[ಯ] ವಿರಹಿತಪ್ರಸಾದ,
    ಕರಣಚತುಷ್ಟಯವಿರಹಿತ ಪ್ರಸಾದ, ಲಿಂಗಪ್ರಸಾದ
    ಅಂತ್ಯಪ್ರಸಾದ ಸಮಯಪ್ರಸಾದವಾಗಿ ತೆರಹಿಲ್ಲದೆ ಒಪ್ಪುತ್ತಿರ್ಪುದು ನೋಡ !
    ಇಂತಪ್ಪ ಲಿಂಗಜಂಗಮದ ಪಾದೋದಕ ಪ್ರಸಾದವ ಸ್ವೀಕರಿಸಿದಂಥ
    ಜಂಗಮಭಕ್ತರಾದ ಸಹಜಭಕ್ತರೆ ಪ್ರಸಾದಪಾದೋದಕ ಸಂಬಂದಿಗಳು.
    ಇವರು ಸ್ವೀಕರಿಸಿದಂಥ ಪಾದೋದಕವೆ
    ನೇತ್ರದಲ್ಲಿ ಕರುಣಜಲ; ವಾಕಿನಲ್ಲಿ ವಿನಯಜಲ; ಅಂತರಂಗದಲ್ಲಿ ಸಮತಾಜಲ-
    ಇಂತೀ ತ್ರಿವಿಧೋದಕವೆ ಘಟ್ಟಿಗೊಂಡು ಸಾಕಾರವಾಗಿ,
    ತಿಳಿದುಪ್ಪ ಹೆರೆದುಪ್ಪವಾದಂತೆ
    ಇಷ್ಟ ಮಹಾಲಿಂಗಕ್ಕೆ ತ್ಯಾಗಾಂಗವಾದ ಶುದ್ಧ ಪ್ರಸಾದವಾಗಿರ್ಪುದಯ್ಯ;
    ಪ್ರಾಣಲಿಂಗಕ್ಕೆ ಭೋಗಾಂಗವಾದ ಸಿದ್ಧ ಪ್ರಸಾದವಾಗಿರ್ಪುದಯ್ಯ.
    ಭಾವಲಿಂಗಕ್ಕೆ ಯೋಗಾಂಗವಾದ ಪ್ರಸಿದ್ಧ ಪ್ರಸಾದವಾಗಿರ್ಪುದಯ್ಯ.
    ಇಂತೀ ತ್ರಿವಿಧಪ್ರಸಾದಪಾದೋದಕವೆ
    ಶರಣನ ಶುದ್ಧ ಪ್ರಸಾದವೆ ಜಿಹ್ವೆಯಲ್ಲಿ ಅಚ್ಚಪ್ರಸಾದವಾಗಿರ್ಪುದಯ್ಯ
    ಸಿದ್ಧಪ್ರಸಾದವೆ ಪಾದದಲ್ಲಿ ಸಮಯ ಪ್ರಸಾದವಾಗಿರ್ಪುದಯ್ಯ
    ಇಂತಪ್ಪ ಶರಣಸ್ವರೂಪವಾದ ಜ್ಞಾನಲಿಂಗಜಂಗಮದ
    ತೀರ್ಥಪ್ರಸಾದ ಸ್ವರೂಪವನ್ನು ಅರಿಯದೆ,
    ಕ್ರಿಯಾ `ಜಂಗಮಲಿಂಗ’ದ ತೀರ್ಥಪ್ರಸಾದವನ್ನು ತೆಗೆದುಕೊಳ್ಳಬಹುದು.
    ಜ್ಞಾನಲಿಂಗಜಂಗಮ ತೀರ್ಥಪ್ರಸಾದವನ್ನು ತೆಗೆದುಕೊಳ್ಳಲಾಗದು ಎಂಬ
    ಅಜ್ಞಾನಿಗಳ ಎನಗೆ ತೋರದಿರ ! ಗುಹೇಶ್ವರ !/140

    FAQs – ಅಲ್ಲಮ ಪ್ರಭುವಿನ ಸಂಕ್ಷಿಪ್ತ ಪರಿಚಯ

    1. Where did Allama Prabhu born? ಅಲ್ಲಮ ಪ್ರಭುವಿನ ಹುಟ್ಟೂರು ಎಲ್ಲಿ?

    Allama Prabhu was born in Shimoga district of Karnataka, India, in the 12th century, to Sujnani and Nirashankara
    ಶಿವಮೊಗ್ಗೆ ಜಿಲ್ಲೆ ಶಿಕಾರಿಪುರ ತಾಲ್ಲೂಕಿನ ಬಳ್ಳಿಗಾವೆಯಲ್ಲಿ ಸುಮಾರು(೧೨ನೇ ಶತಮಾನ) ಎಂಟನೂರೈವತ್ತು ವರ್ಷಗಳಿಂದಲೂ ಇರುವ ಊರು. ಆಗಿನ ಬನವಾಸಿ-೧೨೦೦೦ ಎಂಬ ಪ್ರಾಂತ್ಯದ ಒಂದು ಹಳ್ಳಿ. ಇದೇ ಬಳ್ಳಿಗಾವೆಯ ಹತ್ತಿರವಿರುವ ಕೋಡಿಮಠ ಕಾಳಾಮುಖ ಶೈವರ ಪ್ರಮುಖ ಕೇಂದ್ರ.

    2. Where did Allama Prabhu spent his last days?

    Allama died in Kadalivana near Srishila (Andhra Pradesh), and legend has it that he “became one with the linga“.
    ಅಲ್ಲಮಪ್ರಭು ತನ್ನ ಕೊನೆಯ ದಿನಗಳಲ್ಲಿ ಶ್ರೀಶೈಲ‍ಕ್ಕೆ ಹೋಗಿ ಅಲ್ಲಿಯ ವನದಲ್ಲಿ ಶಿವೈಕ್ಯನಾದನೆಂದು ಪ್ರತೀತಿ.

    Leave a Reply

    Your email address will not be published. Required fields are marked *