Kannada Essay on Alcoholism – ಮಧ್ಯಪಾನದ ದುಷ್ಪರಿಣಾಮಗಳು

Kannada Essay on Alcoholism
  1. ಕುಡಿತದ ಚಟ
  2. ದುಷ್ಪರಿಣಾಮಗಳು
  3. ಅನಾರೋಗ್ಯಕ್ಕೆ ಕಾರಣ
  4. ಅಪಾಯಕಾರಿ
  5. ಪಾರಾಗುವ ದಾರಿ

ಮನುಷ್ಯನನ್ನು ಸರ್ವನಾಶ ಮಾಡುವ ಕೆಟ್ಟ ಚಟಗಳಲ್ಲಿ ಮದ್ಯಪಾನ ಅಥವಾ ಕುಡಿತ ಅತ್ಯಂತ ಅಪಾಯಕಾರಿಯಾದುದು. ಒಮ್ಮೆ ಕುಡಿತದ ಚಟಕ್ಕೆ ಬಲಿಯಾದರೆ ಜೀವನಪರ್ಯಂತ ಅದನ್ನು ಬಿಡಲು ಸಾಧ್ಯವಿಲ್ಲ. ಕುಡಿತವು, ಕುಡಿತ ಚಟಕ್ಕೆ ಬಲಿಯಾದ ವ್ಯಕ್ತಿಯನ್ನೇ ಅಲ್ಲದೆ, ಅವನನ್ನು ಅವಲಂಬಿಸಿದ ಹೆಂಡತಿ ಮಕ್ಕಳನ್ನೂ ನಿರ್ಗತಿಕರನ್ನಾಗಿ ಮಾಡುತ್ತದೆ. ಮನೆ ಹೊಲಗಳನ್ನೂ, ಒಡವೆ ವಸ್ತುಗಳನ್ನೂ ಮಾರುವಂತೆ ಮಾಡುತ್ತದೆ. ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಕುಡಿತಕ್ಕೆ ಹಣ ಬೇಕಾಗುತ್ತದೆ. ಇದರಿಂದ ಕುಡುಕರು ಕಳ್ಳತನ ಕೊಲೆಗಳಿಗೂ ಹೇಸುವುದಿಲ್ಲ.

ಕುಡಿತ ಹಿಂದಿನ ಕಾಲದಿಂದಲೂ ಮನುಷ್ಯನಿಗೆ ಅಂಟಿಕೊಂಡಿರುವ ಬೆಂಬಿಡದ ಭೂತ, ಸೋಮಪಾನ, ಸುರಾಪಾನ ಎಂಬ ಹೆಸರುಗಳಿಂದ ಋಷಿಗಳ ಕಾಲದಲ್ಲಿ ಇದು ಪ್ರಸಿದ್ಧವಾಗಿತ್ತು. ಈಚೆಗೆ ಹೆಂಡ, ಸಾರಾಯಿ, ವೈನ್, ಬ್ರಾಂದಿ, ರಮ್, ವಿಸ್ಕಿ-ಇತ್ಯಾದಿ ನಾನಾ ರೂಪಗಳಲ್ಲಿ ಮದ್ಯವು ಜನರನ್ನು ಹುಚ್ಚರನ್ನಾಗಿ ಮಾಡಿದೆ. ಮದ್ಯ ಸೇವಿಸಿದಾಗ ಸ್ವಲ್ಪಕಾಲ ಮನುಷ್ಯ ಒಂದು ರೀತಿಯ ಉಲ್ಲಾಸ ಕಾಣುತ್ತಾರೆ. ದುಃಖವನ್ನು ಮರೆಯುತ್ತಾನೆ. ಆದರೆ ಅಮಲು ಇಳಿದ ಮೇಲೆ ಅವನು ಮತ್ತೆ ದುಃಖಿಯಾಗುತ್ತಾನೆ. ಕುಡಿತದಿಂದ ಸಮಸ್ಯೆಗಳು ಪರಿಹಾರವಾಗುವುದಿಲ್ಲ. ಪರಿಹಾರ ಕಾಣದ ಸಮಸ್ಯೆಗಳನ್ನು ಮರೆಯಲು ಮನುಷ್ಯ ಮತ್ತೆ ಮತ್ತೆ ಕುಡಿಯುತ್ತಲೇ ಹೋಗುತ್ತಾನೆ.

ಶ್ರೀಮಂತ ವರ್ಗದವರಲ್ಲೂ ಮೇಲ್ವರ್ಗದ ಅಧಿಕಾರಿಗಳಲ್ಲೂ ಈ ಚಟ ಇರುತ್ತದೆ. ಆದರೆ ಅವರಿಗೆ ಹಣದ ಕೊರತೆ ಇರುವುದಿಲ್ಲ. ಬಡವರಾದ ಕೂಲಿಯವರಲ್ಲಿ ಈ ಚಟ ಅಧಿಕವಾಗಿದೆ. ದಿನದ ಕೂಲಿಯನ್ನೆಲ್ಲಾ ಅವರು ಕುಡಿತಕ್ಕೆ ಹಾಕಿ ಬರಿಗೈಯಲ್ಲಿ ಮನೆಗೆ ಬರುತ್ತಾರೆ. ಮನೆಯವರೆಲ್ಲಾ ಉಪವಾಸವಿದ್ದರೂ ಯಜಮಾನನಿಗೆ ಮಾತ್ರ ನಿತ್ಯ ಕುಡಿತಬೇಕು. ಹಣ ಇಲ್ಲವಾದಾಗ ಮನೆಯ ಒಡವೆ ವಸ್ತುಗಳನ್ನು ಮಾರುತ್ತಾನೆ. ಹೆಂಡತಿಯ ಮೈಮೇಲಿನ ಒಡವೆಗಳನ್ನೂ ಕೊನೆಗೆ ತಾಳಿಯನ್ನೂ ಕಿತ್ತುಕೊಂಡು ಕಡಿಮ ಬೆಲೆಗೆ ಮಾರಿ ಕುಡಿಯುತ್ತಾನೆ. ಆಕೆ ಕೊಡದಿದ್ದರೆ ಹೊಡೆದು ಬಡಿದು ಹಿಂಸಿಸುತ್ತಾನೆ. ಕುಡಿತದಿಂದ ಹೆಂಡ ಮಾರುವವನಿಗೆ ಲಾಭ. ಬಡವರು ಮಾತ್ರ ಆರ್ಥಿಕವಾಗಿ ಹಿಂದುಳಿದೇ ಇರುತ್ತಾರೆ.

ಮನಷ್ಯನು ದುಃಖದಲ್ಲಿದ್ದಾಗ ಅದನ್ನು ಮರೆಯಲು ಕುಡಿಯುತ್ತಾನೆ. ಸಂತೋಷವಾಗಿರುವಾಗಲೂ ಕುಡಿಯುತ್ತಾನೆ. ಈ ಚಟಕ್ಕೆ ಬೀಳಲು ಸ್ನೇಹಿತರೂ ಮುಖ್ಯ ಕಾರಣರಾಗುತ್ತಾರೆ. ಸ್ನೇಹ ಕೂಟಗಳಲ್ಲಿ ಮೊದಲು ತಾವೇ ದುಡ್ಡು ಕೊಟ್ಟು ಕುಡಿಸುತ್ತಾರೆ. ಸ್ವಲ್ಪ ಕುಡಿದರೆ ಏನೂ ತೊಂದರೆಯಿಲ್ಲ. ಆರೋಗ್ಯಕ್ಕೆ ಒಳ್ಳೆಯದು ಎಂದೆಲ್ಲಾ ಹೇಳುತ್ತಾರೆ, ಹೀಗೆ ಚಟ ಅಂಟಿಕೊಳ್ಳುತ್ತದೆ. ಮುಂದೆ ಚಟಕ್ಕೆ ಗುರಿಯಾದ ವ್ಯಕ್ತಿಯೇ ಹಣ ಕೊಟ್ಟು ಕುಡಿಯಬೇಕಾಗುತ್ತದೆ. ಹಣ ಖರ್ಚು ಮಾಡಿ ಸ್ನೇಹಿತನಿಗೂ ಕುಡಿಸಬೇಕಾಗುತ್ತದೆ, ಹೀಗೆ ಅವರು ಜೀವನ ಪರ್ಯಂತ ದುರ್ವ್ಯಸನಿಗಳಾಗುತ್ತಾರೆ. ತಮ್ಮ ದಿನನಿತ್ಯದ ಕೆಲಸ ಕಾರ್ಯಗಳನ್ನೂ ಮರೆಯುತ್ತಾರೆ, ಮಾನಮರ್ಯಾದೆಗಳಂತೂ ಯಾವಾಗಲೋ ಹೋಗಿರುತ್ತವೆ, ಅಧಿಕ ಕುಡಿತಕ್ಕೆ ಒಳಗಾಗಿ ಹಾದಿಬೀದಿಗಳಲ್ಲಿ ಸತ್ತವರಿಗೂ ಕೊರತೆ ಇಲ್ಲ.

ಮದ್ಯಪಾನವು ಮನುಷ್ಯನನ್ನು ಹಾಳು ಮಾಡುತ್ತದೆ, ಮನುಷ್ಯ ಮೊದಮೊದಲು ತಾನು ಮದ್ಯವನ್ನು ಕುಡಿಯುತ್ತಾನೆ, ಕೊನೆಕೊನೆಗೆ ಮದ್ಯವೇ ಅವನನ್ನು ಕುಡಿಯುತ್ತದೆ. ಮದ್ಯವು ಯಾವುದೇ ರೀತಿಯಲ್ಲಿರಲಿ; ಅದು ಮೊದಲು ಮಿಥುಳಿನ ಮೇಲೆ ದುಷ್ಪರಿಣಾಮವುಂಟುಮಾಡುತ್ತದೆ. ಕ್ರಮೇಣ ನರಮಂಡಲಗಳು ನಿಷ್ಕ್ರಿಯವಾಗುತ್ತವೆ. ಕರುಳುಗಳು ಪಚನ ಶಕ್ತಿಯನ್ನು ಕಳೆದುಕೊಳ್ಳುತ್ತವೆ, ಕೈಕಾಲುಗಳು ಶಕ್ತಿಯುಡುಗಿ ಕೊನೆಗೆ ಡೊಂಕಾಗುವ ಸಂಭವವೂ ಉಂಟು, ಕುಡಿದವರಿಗೆ ದೇಹ ಮತ್ತು ಬುದ್ಧಿಯ ಮೇಲೆ ಸ್ವಾಧೀನವೇ ಇರದೆ ಹಾದಿಬೀದಿಗಳಲ್ಲಿ ತೂರಾಡುತ್ತಾರೆ, ಬಾಯಿಗೆ ಬಂದದ್ದನ್ನು ಗಳಗುತ್ತಾರೆ, ನಾಟಕ ಅಥವಾ ಸಿನಿಮಾಗಳ ಪಾತ್ರಗಳಿಗೆ ಮಾದರಿಯಾಗುತ್ತಾರೆ.

ಕುಡುಕರಿಂದ, ಕುಡಿಯದವರೂ ತೊಂದರೆ ತಾಪತ್ರಯಗಳಿಗೆ ಸಿಲುಕುತ್ತಾರೆ. ಕುಡುಕನ ಹೆಂಡತಿ ಮಕ್ಕಳ ಗತಿ-ನೋಡಿ, ಅನುಭವಿಸಿದವರಿಗೇ ಗೊತ್ತು. ಆದ್ದರಿಂದ ಕುಡಿತ ಕೇವಲ ವೈಯಕ್ತಿಕ ಅಭ್ಯಾಸವಲ್ಲ. ಈ ವೈಯಕ್ತಿಕತೆ ಸಾಮಾಜಿಕವಾಗಿಯೂ ದುಷ್ಪರಿಣಾಮಗಳನ್ನು ಬೀರುತ್ತದೆ, ಆದ್ದರಿಂದ ಗಾಂಧೀಜಿ, ಸ್ವಾತಂತ್ರ್ಯ ಬರುವ ಮುನ್ನವೇ ಹೆಂಡದ ಅಂಗಡಿಗಳ ಮುಂದೆ ಪಿಕೆಟಿಂಗ್ ನಡೆಸುತ್ತಿದ್ದರು, ‘ಕುಡಿತ ಭಯಂಕರ ಸಾಮಾಜಿಕ ಪಿಡುಗು, ಅದನ್ನು ಬಿಡಿ’ ಎಂದು ಜನರ ಮನವೊಲಿಸುತ್ತಿದ್ದರು,

ಕುಡಿತ ಇಂದು ಅತ್ಯಂತ ಲಾಭದಾಯಕ ಉದ್ಯಮವಾಗಿದೆ, ಒಂದೋಂಡು ತಾಲ್ಲೂಕಿನ ವರ್ಷದ ಹೆಂಡದ ಹರಾಜು ಹತ್ತು-ಇಪ್ಪತ್ತು ಲಕ್ಷಗಳಿಗೆ ಮಾರಾಟವಾಗುತ್ತಿದೆ, ಸರ್ಕಾರಕ್ಕೆ ಆದಾಯ ಒದಗಿಸುವ ಭಾಬುಗಳಲ್ಲಿ ಹೆಂಡಕ್ಕೆ ಅಗ್ರಸ್ಥಾನ, ಕೋಟ್ಯಂತರ ರೂಪಾಯಿಗಳ ಲಾಭ ಸರ್ಕಾರದ ಬೊಕ್ಕಸಕ್ಕೆ ಸೇರುತ್ತದೆ, ಆದ್ದರಿಂದ ಸರ್ಕಾರ ಈ ಬಾಬನ್ನು ಮುಂದುವರಿಸುತ್ತಲೇ ಇದೆ. ಕೆಲವು ರಾಜ್ಯಗಳಲ್ಲಿ ಹಂಡ ಸಾರಾಯಿ ಮಾರಾಟ ಸಂಪೂರ್ಣ ಬಂದ್ ಆಗಿದ್ದೆ. ನಮ್ಮ ಕರ್ನಾಟಕ ರಾಜ್ಯವೂ ಈ ನಿಟ್ಟಿನಲ್ಲಿ ಸಾಗಬೇಕು. ಆಗ ಮಾತ್ರ ಜನರ ಸುಖ ನೆಮ್ಮದಿಗಳಿಂದ ಆರೋಗ್ಯವಂತರಾಗಿ ಬಾಳಲು ಸಾಧ್ಯ. ಈ ದಿಸೆಯಲ್ಲಿ ಜನಜಾಗೃತಿ ಆಗಬೇಕಾಗಿದೆ.

1 thought on “Kannada Essay on Alcoholism – ಮಧ್ಯಪಾನದ ದುಷ್ಪರಿಣಾಮಗಳು”

  1. Hi, i believe that i saw you visited my weblog thus i got here to “return the favor”.I am trying to find things to improve my web site!I suppose its ok to make use of some of your ideas!!

Leave a Reply

Your email address will not be published. Required fields are marked *