“ಸ್ವರಾಜ್ಯ ನನ್ನ ಜನ್ಮಸಿದ್ಧ ಹಕ್ಕು, ಅದನ್ನು ದೊರಕಿಸಿಯೇ ತೀರುವೆ” ಹೀಗೆ ಘೋಷಿಸಿದವರು ಬಾಲಗಂಗಾಧರ ತಿಲಕರು. ಅದಮ್ಯ ದೇಶಭಕ್ತಿ, ಸುಸಂಸ್ಕೃತ ನಡತ, ಧೀರೋದ್ದಾತ್ತ ಬದುಕಿನಿಂದ ‘ಲೋಕಮಾನ್ಯ’ ಎಂದು ಬಿರುದು ಪಡೆದರು. ಜನಪ್ರಿಯ ವ್ಯಕ್ತಿಯಾದರು ತಿಲಕರು.
ತಿಲಕರು 1856 ಜುಲೈ 26 ರಂದು ಮಹಾರಾಷ್ಟ್ರದ ರತ್ನಗಿರಿಯಲ್ಲಿ ಜನಿಸಿದರು. ತಂದೆ ಗಂಗಾಧರ ಪಂತ ಶಾಲಾ ಮಾಸ್ತರರು. ತಾಯಿ ಪಾರ್ವತೀಬಾಯಿ ಒಳ್ಳೆಯ ಗೃಹಿಣಿ, ಹುಟ್ಟು ಹೆಸರು. ಕೇಶವ, ಹೆತ್ತವರು ಮುದ್ದಿನಿಂದ ‘ಬಾಲ’ ಎಂದು ಕರೆಯುತ್ತಿದ್ದರು. ತಂದೆ ಸಂಸ್ಕೃತ ಮತ್ತು ಗಣಿತದಲ್ಲಿ ಮಹಾಪಂಡಿತರು, ಮಗನಿಗೆ ತಂದೆಯೇ ಮೊದಲ ಗುರು. ತಿಲಕರು ಪುಣೆಯಲ್ಲಿ ಇಂಗ್ಲಿಷ್ ಶಾಲೆಯಲ್ಲಿ ಓದು ಮುಂದುವರಿಸಿದರು.
ವಿದ್ಯಾಭ್ಯಾಸವನ್ನು ಮುಗಿಸಿ ತಿಲಕರು ತಮ್ಮ ಸ್ನೇಹಿತರೊಂದಿಗೆ 1880 ಜನವರಿ 1 ರಂದು ಒಂದು ಶಾಲೆಯನ್ನು ಸ್ಥಾಪಿಸಿದರು. ಭಾರತದ ಮಕ್ಕಳಲ್ಲಿ ಸ್ವಾತಂತ್ಯದ ಅರಿವು ಮೂಡಿಸುವುದು ಅವರ ಉದ್ದೇಶವಾಗಿತ್ತು. 1881ರಲ್ಲಿ ಜನರಿಗೆ ಪತ್ರಿಕಾ ಸೌಲಭ್ಯವನ್ನು ಒದಗಿಸಲು ಮುದ್ರಣಾಲಯವನ್ನು ಸ್ಥಾಪಿಸಿ ‘ಕೇಸರಿ’ ಎಂಬ ಪತ್ರಿಕೆಯನ್ನು ಆರಂಭಿಸಿದರು. ಪತ್ರಿಕೆಯಲ್ಲಿ ನಿರ್ಭಯವಾಗಿ ಸತ್ಯವನ್ನು ಸಾರುತ್ತಿದ್ದರು. ಆಳುತ್ತಿದ್ದ ಬ್ರಿಟಿಷ್ ಸರ್ಕಾರವನ್ನೇ ಖಂಡಿಸುತ್ತಿದ್ದರು. ಇದರಿಂದ ತಿಲಕರು ಸೆರೆಮನೆ ಸೇರಬೇಕಾಯಿತು.
1885 ಜನವರಿ 2ರಂದು ಪುಣೆಯಲ್ಲಿ ಫರ್ಗ್ಯೂಸನ್ ಕಾಲೇಜು ಆರಂಭಿಸಿದರು. 1893ರಲ್ಲಿ ಮುಂಬಯಿಯಲ್ಲಿ ಹಿಂದೂ ಮುಸಲ್ಮಾನರ ಗಲಭೆ ಪ್ರಾರಂಭವಾಯಿತು. ಜನರು ಅಪಾರ ಕಷ್ಟನಷ್ಟಗಳಿಗೆ ತುತ್ತಾದರು. ಮನನೊಂದ ತಿಲಕರು ಹಿಂದೂಗಳಲ್ಲಿ ಹುದುಗಿದ್ದ ಧಾರ್ಮಿಕ ಭಾವನೆಗೆ ಹೊಸ ರೂಪವನ್ನು ಕೊಡಲು ಗಣೇಶನ ಹಬ್ಬವನ್ನು ನಾಡಹಬ್ಬವನ್ನಾಗಿ ಪರಿವರ್ತಿಸಿದರು. ಮಹಾರಾಷ್ಟ್ರದಲ್ಲಿ ರಾಷ್ಟ್ರೀಯ ಭಾವನೆ ಬೆಳೆಯಲಾರಂಭಿಸಿತು. 1897ರಲ್ಲಿ ಸರಕಾರ ಮತ್ತೆ ಅವರನ್ನು ಜೈಲಿಗೆ ಕಳಿಸಿತು.
ಜನರು ಸ್ವದೇಶದ ವಸ್ತುಗಳನ್ನು ಪ್ರೀತಿಸಬೇಕು. ಅವುಗಳನ್ನೇ ಉಪಯೋಗಿಸಬೇಕು. ವಿದೇಶಿ ವಸ್ತುಗಳು ನಿಷಿದ್ಧ. ಅವುಗಳನ್ನು ಬಹಿಷ್ಕರಿಸಬೇಕು ಎಂದು 1905ರಲ್ಲಿ ತಿಲಕರು ಹೇಳಿದರು. ಭಾರತದ ರಾಷ್ಟ್ರೀಯ ಮಹಾಸಭೆಯಲ್ಲಿ ತಿಲಕರು ಉಗ್ರಗಾಮಿಗಳೆಂದು ಹೆಸರಾದರು. 1908ರಲ್ಲಿ ಸರ್ಕಾರದ ವಿರುದ್ಧ ಲೇಖನ ಬರೆದ ಆಪಾದನೆಯ ಮೇಲೆ ಅವರನ್ನು ಬಂಧಿಸಲಾಯಿತು. ತಿಲಕರಿಗೆ ಆಗ 52 ವರ್ಷ. ಅವರಿಗೆ ಆರು ವರ್ಷಕಾಲ ಗಡೀಪಾರು ಶಿಕ್ಷೆ ವಿಧಿಸಿದರು. ಜನರ ಕಣ್ಣು ತಪ್ಪಿಸಿ ಅರ್ಧರಾತ್ರಿಯಲ್ಲಿ ಸಾಬರಮತಿ ಸರಮನೆಗೆ ಕರೆದೊಯ್ದು, ಅಲ್ಲಿಂದ ಬರ್ಮಾದೇಶದ ಮಾಂಡಲೆ ಎಂಬಲ್ಲಿ ಸುರಂಗದ ಕತ್ತಲುಕೋಣೆಯಲ್ಲಿ ಬಂಧಿಸಿಟ್ಟರು. ಅಲ್ಲಿ ತಿಲಕರು ‘ಗೀತ’ಯನ್ನು ಚೆನ್ನಾಗಿ ಅಭ್ಯಾಸ ಮಾಡಿ ‘ಗೀತಾರಹಸ್ಯ’ ಎಂಬ ಗ್ರಂಥವನ್ನು ಬರೆದರು. ಅಲ್ಲಿಯೇ ಫ್ರೆಂಚ್, ಜರ್ಮನ್, ಪಾಲಿ ಭಾಷೆಗಳನ್ನು ಅಭ್ಯಾಸ ಮಾಡಿದರು. ಅವರು ಸರವಾಸದಲ್ಲಿದ್ದಾಗಲೇ 1912ರಲ್ಲಿ ಅವರ ಪತ್ನಿ ಮರಣಿಸಿದರು.
ಸೆರವಾಸದ ನಂತರ ತಿಲಕರು ಮತ್ತೆ ಸ್ವಾತಂತ್ರ್ಯ ಚಳವಳಿಯಲ್ಲಿ ತಮ್ಮನ್ನು ತೊಡಗಿಸಿಕೊಂಡರು. 1918ರಲ್ಲಿ ದೆಹಲಿಯಲ್ಲಿ ನಡೆದ ಅಖಿಲ ಭಾರತ ಕಾಂಗ್ರೆಸ್ ಅಧಿವೇಶನಕ್ಕೆ ಬಾಲಗಂಗಾಧರ ತಿಲಕರು ಅಧ್ಯಕ್ಷರಾದರು. ಆ ವರ್ಷ ‘ಸ್ವರಾಜ್ಯ ಮಂತ್ರ’ವನ್ನು ಇಂಗ್ಲೆಂಡಿಗೆ ಮುಟ್ಟಿಸಲು ತಿಲಕರು ಶಿಷ್ಯಮಂಡಲದ ಜೊತೆ ಹೋದರು. ಬ್ರಿಟಿಷರು ಭಾರತದ ಈ ಬೇಡಿಕೆಯನ್ನು ಮನ್ನಿಸಲಿಲ್ಲ. ತಿಲಕರನ್ನು ‘ರಾಷ್ಟ್ರೀಯ ಅಸಂತೋಷದ ಜನಕ’ ಎಂದು ಬ್ರಿಟಿಷ್ ಪತ್ರಿಕೆಗಳು ಅವರನ್ನು ದೂಷಿಸಿದರು. ಹದಿಮೂರು ತಿಂಗಳ ಅವರ ವಿದೇಶ ಪ್ರವಾಸ ಹರ್ಷದಾಯಕವಾಗಿರಲಿಲ್ಲ.
ಆ ವೇಳೆಗೆ ಗಾಂಧೀಜಿ ದಕ್ಷಿಣ ಆಫ್ರಿಕಾದಿಂದ ಮರಳಿದ್ದರು. ಗಾಂಧೀಜಿಯಲ್ಲಿ ಹಿರಿಯ ನಾಯಕನ ಗುಣಗಳಿದ್ದುದನ್ನು ತಿಲಕರು ಮನಗಂಡರು. ಸತತ ಪರಿಶ್ರಮದಿಂದ ಬಳಲಿದ್ದ ತಿಲಕರು 1920 ಆಗಸ್ಟ್ 1 ರಂದು ಮುಂಬಯಿಯಲ್ಲಿ ತೀರಿಕೊಂಡರು. ತಿಲಕರು ಭಾರತಕ್ಕಾಗಿ ಬಾಳಿದರು, ಭಾರತಕ್ಕಾಗಿಯೇ ಪ್ರಾಣಾರ್ಪಣೆ ಮಾಡಿದರು. ಭಾರತದ ಜನರ ಮನಸ್ಸಿನಲ್ಲಿ ಲೋಕಮಾನ್ಯರಾದರು.