Kannada Essay on Dr B R Ambedkar – ಡಾ. ಭೀಮರಾವ್ ರಾಮ್‌ಜೀ ಅಂಬೇಡ್ಕರ್

    Kannada Essay on Dr B R Ambedkar

    ಅಂಬೇಡ್ಕರ್ ಮನೆತನದವರು ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ಅಂಬಾವಾಡಿ ಎಂಬ ಚಿಕ್ಕಹಳ್ಳಿಯಿಂದ ಬಂದವರು. 1891ರಲ್ಲಿ ಜನಿಸಿದ ಅಂಬೇಡ್ಕರ್‌ರ ತಂದೆ ರಾಮ್‌ಜೀ ಮಣೂಜಿ ಸಂಕಪಾಲ, ತಾಯಿ ಭೀಮಾಬಾಯಿ. ಇವರದು ಹರಿಜನರ ಮಹರ್ ಪಂಗಡ, ಸತಾರಾದಲ್ಲಿ ವಿದ್ಯಾಭ್ಯಾಸ ಮಾಡಿ ಅನಂತರ ಮುಂಬಯಿಯ ಎಲ್ವಿನ್‌ಸ್ಟನ್ ಕಾಲೇಜಿನಲ್ಲಿ 1912ರಲ್ಲಿ ಪದವೀಧರರಾದರು. ಅಮೆರಿಕದ ಕೊಲಂಬಿಯಾ ವಿಶ್ವವಿದ್ಯಾನಿಲಯದಲ್ಲಿ ಎಂ.ಎ. ಹಾಗೂ ಪಿ.ಎಚ್.ಡಿ. ಪದವಿ ಪಡೆದರು. ಸ್ವಲ್ಪ ಕಾಲ ಇಂಗ್ಲೆಂಡ್ ಪ್ರವಾಸಮಾಡಿದರು. ಮುಂಬಯಿಯ ಸಿಡ್ನ ಹ್ಯಾಮ್ ಕಾಲೇಜಿನಲ್ಲಿ ಕೆಲವು ಕಾಲ ಶಿಕ್ಷಕ್ಷರಾಗಿದ್ದರು. 1920ರಲ್ಲಿ ಲಂಡನ್‌ನಲ್ಲಿ ಎಂ.ಎಸ್.ಸಿ. ಮತ್ತು ಡಿ.ಎಸ್.ಸಿ. ಪದವಿಗಳನ್ನು ಪಡೆದರು.

    ಮುಂಬಯಿಯ ಉಚ್ಚ ನ್ಯಾಯಾಲಯದಲ್ಲಿ 1924 ಜೂನ್‌ನಿಂದ ವಕೀಲ ವೃತ್ತಿ ಆರಂಭಿಸಿದರು. ಹರಿಜನರ ಉದ್ಧಾರಕ್ಕಾಗಿ ಆಗಲೇ ಶ್ರಮವಹಿಸಿ ಕೆಲಸ ಮಾಡತೊಡಗಿದರು. “ಮೂಕನಾಯಕ’ ಎಂಬ ಪತ್ರಿಕೆಯನ್ನು ಪ್ರಾರಂಭಿಸಿದರು. ತಾವೇ ಸ್ಥಾಪಿಸಿದ ‘ಬಹಿಷ್ಕೃತ ಹಿತಕಾರಣೀ ಸಭಾ’ದ ಪರವಾಗಿ ‘ಬಹಿಷ್ಕತ ಭಾರತ ಪತ್ರಿಕೆಯನ್ನು, ಸಾಮಾಜಿಕ ಸಮಾನತೆಯನ್ನು ಸಾಧಿಸಲು ಸ್ಥಾಪಿಸಿದ ‘ಸಮಾಜ ಸಮತಾ ಸಂಘ’ದ ಮುಖ ಪತ್ರವಾಗಿ ‘ಸಮತಾ ಪತ್ರಿಕೆಯನ್ನು ನಡೆಸಿದರು. ಬಡವರ ಪರವಾಗಿ ಮೊಕದ್ದಮೆಗಳನ್ನು ಯಾವುದೇ ಹಣ ತೆಗೆದುಕೊಳ್ಳದೆ ನಡೆಸಿಕೊಡುತ್ತಿದ್ದರು. ವಕೀಲರಾಗಿ ಅಂಬೇಡ್ಕರ್ ಜನಪ್ರಿಯತೆಗಳಿಸಿದರು. ಮುಂಬಯಿಯ ಲಾ ಕಾಲೇಜಿನ ಪ್ರಾಚಾರ್ಯರಾಗಿ ಕಾಯಿದೆ ಶಿಕ್ಷಣಕ್ಕೆ ಸಂಬಂಧಿಸಿದಂತೆ ಉಪಯುಕ್ತ ಸುಧಾರಣೆಗಳನ್ನು ಸೂಚಿಸಿದರು. ಕಾರ್ಮಿಕರು, ರೈತರು, ಹರಿಜನರ ಒಳಿತಿಗಾಗಿ ಹಗಲಿರುವಳು ಶ್ರಮಿಸಿದರು. 1926ರಲ್ಲಿ ಶಾಸನ ಸಭಾ ಸದಸ್ಯರಾದರು. ರಾಜಕೀಯವಾಗಿ ಅಂಬೇಡ್ಕರ್ ಹಿಂದುಳಿದ ವರ್ಗದವರ, ದೀನರು ದಲಿತರ ಮುಂದಾಳುತನ ವಹಿಸಿ ಅವರ ಏಳಿಗೆಗಾಗಿ ಕೆಲಸ ಮಾಡಿದರು.

    ಸ್ವತಂತ್ರ ಭಾರತ ಸಂವಿಧಾನ ರಚನಾ ಸಮಿತಿಯ ಅಧ್ಯಕ್ಷರಾಗಿ ದಕ್ಷತೆಯಿಂದ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ಕೆಲವು ಕಾಲ ಅವರು ಕೇಂದ್ರ ಸರ್ಕಾರದ ಕಾನೂನು ಮಂತ್ರಿಯಾಗಿದ್ದರು. ಹರಿಜನೋದ್ದಾರ ಕಾರ್ಯದಲ್ಲಿ ತಾವು ನಿರೀಕ್ಷಿಸಿದ ಯಶಸ್ಸು ದೊರೆಯದಿದ್ದುದರಿಂದ ಅವರು 1956ರಲ್ಲಿ ಲಕ್ಷಾಂತರ ಹರಿಜನ ಅನುಯಾಯಿಗಳೊಡನೆ ಬೌದ್ಧ ಧರ್ಮವನ್ನು ಸ್ವೀಕರಿಸಿದರು.

    “ಆಧುನಿಕ ಮನು” ಎಂದೇ ಪ್ರಶಂಸೆ ಪಡೆದ ಅಂಬೇಡ್ಕರ್‌ ಹಿಂದೂ ಕಾಯಿದೆಯ ಕ್ರೋಢೀಕರಣದಲ್ಲಿ ವಿಶಿಷ್ಟ ಸೇವೆ ಸಲ್ಲಿಸಿದರು. ಇವರು ಸ್ವತಂತ್ರ ಭಾರತದ ಸಂವಿಧಾನವನ್ನು ಅತ್ಯಂತ ಸಮರ್ಪಕವಾಗಿ, ದಕ್ಷತೆ ಹಾಗೂ ಶಿಸ್ತಿನಿಂದ ಯಶಸ್ವಿಯಾಗಿ ರಚಿಸಿದ ಸಮಿತಿಯ ಅಧ್ಯಕ್ಷರಾಗಿದ್ದರು. ‘ಸಂವಿಧಾನಶಿಲ್ಪಿ’ ಎಂಬ ಮೆಚ್ಚುಗೆಗೆ ಪಾತ್ರರಾದರು. ಉತ್ತಮ ನ್ಯಾಯವಾದಿ, ಸಮಾಜಸೇವಕ, ರಾಜಕಾರಣಿ ಹರಿಜನೋದ್ದಾರದ ಮುಂದಾಳು, ಲೇಖಕ, ಶಿಕ್ಷಣ ತಜ್ಞ ಭೀಮರಾವ್ ರಾಮ್‌ಜೀ ಅಂಬೇಡ್ಕರ್ 1956ರ ಡಿಸೆಂಬರ್ 6ರಂದು ನವದೆಹಲಿಯಲ್ಲಿ ನಿಧನರಾದರು.

    ಅಂಬೇಡ್ಕರ್‌ ಅವರ ಪ್ರಸಿದ್ಧ ಕೃತಿಗಳು – ‘ರೂಪಾಯಿಯ ಸಮಸ್ಯೆ’, ಬ್ರಿಟಿಷ್ ಇಂಡಿಯಾದಲ್ಲಿ ಪ್ರಾಂತೀಯ ಹಣಕಾಸು ವ್ಯವಸ್ಥೆಯ ವಿಕಾಸ, ಪಾಕೀಸ್ತಾನದ ಬಗೆಗಿನ ಚಿಂತನ, ರಾನಡೆ, ಗಾಂಧೀಜಿ ಮತ್ತು ಜಿನ್ನಾ ಮುಂತಾದವು. ಅಂಬೇಡ್ಕರ್‌ ತಮ್ಮ ಜೀವಿತದ ಕೊನೆಯವರೆಗೂ ಉಲ್ಲಾಸಿತರಾಗಿದ್ದರು. ಕರ್ತವ್ಯಪರರಾಗಿದ್ದರು. ಎಲ್ಲಕ್ಕಿಂತ ಹೆಚ್ಚಾಗಿ ಅವರು ದೇಶಪ್ರೇಮಿಯಾಗಿದ್ದರು.

    Leave a Reply

    Your email address will not be published. Required fields are marked *