“ಎಲಿಫಾಸ್ ಮ್ಯಾಕ್ಸಿಮಸ್” ಇದರ ಶಾಸ್ತ್ರೀಯ ಹೆಸರು. ಭಾರತದಲ್ಲಿ ಆನೆಗಳು ಉತ್ತರ ಪ್ರದೇಶದ ಪೂರ್ವಭಾಗ, ಅಸ್ಸಾಂ, ಪಶ್ಚಿಮ ಬಂಗಾಳ, ಒರಿಸ್ಸಾ, ನೀಲಗಿರಿ, ಕರ್ನಾಟಕ, ತಮಿಳುನಾಡು, ಕೇರಳದಲ್ಲಿ ನೆಲೆಸಿವೆ. ದಟ್ಟವಾದ ಕಾಡುಗಳಿಂದ ಬಯಲು ಪ್ರದೇಶದ ಹುಲ್ಲುಗಾವಲುಗಳಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ಜೀವಂತ ಭೂಚರ ಪ್ರಾಣಿಗಳಲ್ಲಿಯೇ ಇದು ಅತಿ ದೊಡ್ಡದು. ಗಂಡು ಆನೆಯ ಸರಾಸರಿ ಎತ್ತರ 9 ಅಡಿ. ಬಾಲ 4ರಿಂದ 5 ಅಡಿ, ತೂಕ 4,000 ಕೆ.ಜಿ.ಗಳಷ್ಟು. ದಂತ ಗಂಡು ಆನೆಗಳಲ್ಲಿ ಮಾತ್ರ ಕಂಡುಬರುತ್ತದೆ. ಇದು ಸುಮಾರು 5 ಅಥವಾ 6 ಅಡಿ ಉದ್ದವಿರುತ್ತದೆ. ಇದು 70 ಕೆ.ಜಿ.ಯಷ್ಟು ತೂಕವಿರುತ್ತದೆ. ಹೆಣ್ಣುಗಳಲ್ಲಿ ದಂತ ಇರುವುದಿಲ್ಲ. ಕೆಲವು ಗಂಡು ಆನಗಳಲ್ಲಿಯೂ ದಂತ ಇರುವುದಿಲ್ಲ. ಇವುಗಳನ್ನು ‘ಮಕಾಸ್’ ಎನ್ನುವರು. ವಿವಿಧ ರೀತಿಯ ಹುಲ್ಲು, ಎಲೆ, ಕಾಂಡ, ಕಾಡು ಬಿದಿರಿನ ಎಲೆ, ಬಾಳೆಯ ಗಿಡ, ಎಲ್ಲ ತರಹದ ಪೈರು, ಗೊತ್ತಾದ ಜಾತಿಯ ಮರದ ತೊಗಟೆಗಳು, ಹಣ್ಣು, ಕಬ್ಬು ಆನೆಗೆ ತುಂಬ ಇಷ್ಟವಾದ ಆಹಾರ. ಒಂದು ದಿನಕ್ಕೆ 270ರಿಂದ 320ಕೆ.ಜಿ. ಆಹಾರ ತಿನ್ನುತ್ತದೆ.
ಏಷ್ಯಾದ ಆನೆಗಳು ಆಫ್ರಿಕಾದ ಆನೆಗಳಿಗಿಂತ ಚಿಕ್ಕವು. ಮೊರದಂತೆ ದೊಡ್ಡದಾಗಿ ಅಗಲವಾದ ಕಿವಿಗಳು, ಕಂಬದಂತಿರುವ ಉದ್ದವಾದ ಕಾಲುಗಳು, ಮುಂಗಾಲುಗಳಲ್ಲಿ ಐದು ಮತ್ತು ಹಿಂಗಾಲುಗಳಲ್ಲಿ ನಾಲ್ಕು ಬೆರಳುಗಳಿರುತ್ತವೆ. ಬೆರಳುಗಳಿಗೆ ಉಗುರು ಇವೆ. ಮಂಡಿ ಭಾಗ ಬಾಗಿರುವುದಿಲ್ಲ. ನಡೆಯುವಾಗ ತನ್ನ ದೇಹದ ಭಾರವನ್ನು ಕಾಲಿನ ಹಿಂಭಾಗದಲ್ಲಿರುವ ಮತ್ತೆಯ ಮೇಲೆ ಹೇರುತ್ತದೆ. ಕಾಲಿನ ಹರಡಿನಲ್ಲಿ ಕೀಲು ಇಲ್ಲ. ಗಂಡು ಆನೆಗಳಲ್ಲಿ ಬಾಚಿ ಹಲ್ಲುಗಳು ಕೋರೆ (ದಂತ)ಗಳಾಗಿ ಮಾರ್ಪಟ್ಟಿವೆ. ಆನೆಗಳಿಗೆ ವಿಶಿಷ್ಟ ರೀತಿಯ ದಂತ ವಿನ್ಯಾಸವಿದೆ. ಅದರ ಎಲ್ಲ ದವಡೆ ಹಲ್ಲುಗಳು ಒಟ್ಟಿಗೆ ಕಾಣಿಸಿಕೊಳ್ಳುವುದಿಲ್ಲ. ಒಂದು ಅಥವಾ ಎರಡು ದವಡೆ ಹಲ್ಲು ಮಾತ್ರ ಒಂದೇ ಕಾಲಕ್ಕೆ ಕೆಲಸ ಮಾಡುತ್ತವೆ. ಅದು ಸವೆದಂತೆ ಹಿಂದಿನ ದವಡೆ ಹಲ್ಲು ಕೆಲಸ ಮಾಡಲು ಆರಂಭಿಸುತ್ತವೆ. ದವಡೆಗಳು ಚಿಕ್ಕದು. ಆದರೆ ದವಡೆ ಹಲ್ಲುಗಳು ತುಂಬ ದೊಡ್ಡವು. ಮೇಲಿನ ತುಟಿ ಮತ್ತು ಮೂಗು ಸೇರಿ ಮುಂದಕ್ಕೆ ಚಾಚಿ ಸೊಂಡಿಲು ಆಗಿದೆ. ಸೊಂಡಿಲಿನ ತುದಿಯಲ್ಲಿ ಒಂದು ತುಟಿ ಇದೆ. ದೇಹ ಸ್ಫೂಲವಾಗಿ ಬೆಳೆದಿದೆ. ಬಾಲ ಉದ್ದವಾಗಿದ್ದು ಅದರ ತುದಿಯಲ್ಲಿ ಕುಚ್ಚಿನಂತಿರುವ ಕೂದಲುಗಳಿವೆ. ಆನೆಯ ಬಣ್ಣ ಬೂದು ಬಣ್ಣದಿಂದ ಕಂದು ಬಣ್ಣದ್ದಾಗಿರಬಹುದು. ಹಣೆ, ಕಿವಿ ಮತ್ತು ಮುಂಡ ಭಾಗದ ತಳ ಹಾಗೂ ಎದೆ ಬಿಳಿ ಮಚ್ಚಿಗಳನ್ನು ಹೊಂದಿರಬಹುದು. ಬೆನ್ನಿನ ಹಿಂಭಾಗ ಇಳಿಜಾರಾಗಿದೆ. ದೇಹದ ಚರ್ಮ ದಪ್ಪ, ದೇಹದ ಮೇಲೆ ಕಮ್ಮಿ ಕೂದಲು ಇರುತ್ತದೆ. ಇವು ಒರಟಾಗಿ ಬಿರುಗೂದಲಿನಂತಿವೆ. ದೃಷ್ಟಿ ಮಂದ, ಕಿವಿ ಮತ್ತು ಮೂಗು ಇತರ ಪ್ರಾಣಿಗಳಿಗಿಂತಲೂ ತೀಕ್ಷ್ಯ ಪ್ರಾಣೇಂದ್ರಿಯ, ಶ್ರವಣೇಂದ್ರಿಯ ಚೆನ್ನಾಗಿ ಕೆಲಸ ಮಾಡುತ್ತವೆ. ಸಾಧಾರಣವಾಗಿ ಆನೆ ನೂರು ವರುಷ ಜೀವಿಸುತ್ತವೆ.
ಗರ್ಭಾವಧಿ 18 ರಿಂದ 22 ತಿಂಗಳು. ಸಾಮಾನ್ಯವಾಗಿ ಒಂದು ಸೋಲದಲ್ಲಿ ಒಂದು ಮರಿ, ಅಪರೂಪವಾಗಿ ಎರಡು ಮರಿ ಹುಟ್ಟಬಹುದು. ಹುಟ್ಟಿದ ಮರಿ 100 ಕೆ.ಜಿ. ತೂಕವಿರುತ್ತದೆ. 3 ರಿಂದ 5 ಅಡಿ ಎತ್ತರವಿದ್ದು ಹುಟ್ಟಿದ ಐದು ನಿಮಿಷದಲ್ಲಿ ಎದ್ದು ನಿಲ್ಲುತ್ತದೆ. ಒಂದು ಗಂಟೆಯಲ್ಲಿ ನಡೆದಾಡುತ್ತದೆ. ಎರಡು ತಿಂಗಳು ತಾಯಿಯ ಹಾಲು ಕುಡಿಯುತ್ತದೆ. ಗಂಡು ಆನೆ ಪ್ರಬುದಕ್ಕೆ ಬರಬೇಕಾದರೆ 20 ರಿಂದ 25 ವರ್ಷ ಬೇಕು. ಆದರೆ ಹೆಣ್ಣಿಗೆ 20 ವರ್ಷ ಸಾಕು, ಬಿದಿರು ಬೆಳೆಯುವ ಮತ್ತು ದಟ್ಟ ಕಾಡುಗಳಿಂದ ಕೂಡಿದ ಬೆಟ್ಟ ಪ್ರದೇಶಗಳಲ್ಲಿ ಇವು ಕಂಡುಬರುತ್ತವೆ. ತೇವವಾದ ಕಾಡುಪ್ರದೇಶ ಅಥವಾ ತಂಪಾದ ಎತ್ತರವಾದ ದಟ್ಟ ಕಾಡು ಪ್ರದೇಶದಲ್ಲಿ ಇವು ಬದುಕಬಲ್ಲದು. ಆನೆಗಳು ಸಂಘಜೀವಿಗಳು. ಒಂದು ಗುಂಪಿನಲ್ಲಿ ಬಲಿಷ್ಠ ಗಂಡು ಆನೆ (ಸಲಗ) ನಾಯಕನಾಗಿರುತ್ತದೆ. ಮತ್ತು ತನ್ನ ಗುಂಪಿನಲ್ಲಿ ಬೇರೆ ಗಂಡು ಆನೆಗಳು ಇರಲು ಬಿಡುವುದಿಲ್ಲ. ಕೆಲವೊಮ್ಮೆ ಸಲಗ ಮದವೇರಿದಾಗ ರೊಚ್ಚಿಗೇಳುವುದುಂಟು. ಅಂತಹ ಮದಗಜ ಹಿಂಡಿನಿಂದ ಹೊರದೂಡಲ್ಪಡುತ್ತದೆ. ಹಗಲಿನಲ್ಲಿ ವಿಶ್ರಾಂತಿ ಪಡೆದು ರಾತ್ರಿ, ಬೆಳಗಿನ ಜಾವ ಮತ್ತು ಸಂಜೆ ಆಹಾರಕ್ಕಾಗಿ ಹೊರಡುತ್ತವೆ. ನೀರಿನಿಂದ ದೂರ ಉಳಿಯುವುದಿಲ್ಲ. ಇದರ ವೇಗ ಒಂದು ಗಂಟೆಗೆ 15 ಮೈಲಿಯಷ್ಟು, ಆನೆಗಳನ್ನು ಸಾಕಬಹುದು. ಆನೆಗಳನ್ನು ಸವಾರಿ, ಸಾಮಾನು ಸಾಗಾಣಿಕೆ, ಮರದ ದಿಮ್ಮಿಎಳೆಯಲು ಇತ್ಯಾದಿ ಕೆಲಸಗಳಿಗೆ ಉಪಯೋಗಿಸಿಕೊಳ್ಳಲಾಗುತ್ತದೆ. ಆನೆಗಳನ್ನು ಪಳಗಿಸುವುದನ್ನು ‘ಖೆಡ್ಡಾ’ ಎನ್ನುತ್ತಾರೆ. ಆನೆಗಳಲ್ಲಿ ಎರಡು ಪ್ರಭೇದಗಳಿವೆ. ಆಫ್ರಿಕಾ ಆನೆ ಮತ್ತು ಏಷ್ಯಾದ ಆನೆ, ಆನೆಯ ಶತ್ರು ಹುಲಿ ಮತ್ತು ಸಿಂಹ.
As I web-site possessor I believe the content material here is rattling fantastic , appreciate it for your efforts. You should keep it up forever! Good Luck.