Kannada Essay on History of Bijapur – ಬಿಜಾಪುರ ಇತಿಹಾಸ

  Kannada Essay on History of Bijapur

  ಆದಿಲ್‌ಶಾಹಿ ಕಾಲದ ವಾಸ್ತುಶಿಲ್ಪವನ್ನು ಬಿಜಾಪುರದಲ್ಲಿ ಕಾಣಬಹುದು. ಈ ಶೈಲಿ ಬಹುಮನಿ ಕಟ್ಟಡಗಳ ಭವ್ಯತೆಯನ್ನು ಉಳಿಸಿಕೊಂಡಿದೆ. ಈ ಶೈಲಿಯ ಇನ್ನೊಂದು ವೈಶಿಷ್ಟ, ಗೋಪುರದ ವಿನ್ಯಾಸ, ಗಾತ್ರದಲ್ಲಿ ಗೋಪುರಗಳು ಚಿಕ್ಕದಾಗಿದ್ದು ಅಲಂಕಾರದಿಂದ ಕೂಡಿದೆ. ಇಲ್ಲಿಯ ವಾಸ್ತುಶಿಲ್ಪದ ಲಕ್ಷಣಗಳಲ್ಲಿ ಮುಖ್ಯವಾದವು. ಇಲ್ಲಿಯ ಗೊಮ್ಮಟ ಬಹುತೇಕ ವರ್ತುಲ ಆಕಾರದಲ್ಲಿ ಅದರ ನೆಲಗಟ್ಟಿನಲ್ಲಿ ಹೂವಿನ ದಳದಂತೆ ಆಕಾರವನ್ನು ಕಾಣಬಹುದು. ಕಮಾನಿನ ಆಕಾರ ತುಂಬ ವಿಶೇಷವಾದದ್ದು. ಆದರ ಗೆರೆಗಳ ತುದಿ ಹಿಂದಿನ ಕೋನ ಸಂಧಿಗಳನ್ನು ಕಳೆದುಕೊಂಡು ನಯವಾಗಿ ಬಾಗಿಸಲಾಗಿದೆ. ಬಿಜಾಪುರದ ವಾಸ್ತುಶಿಲ್ಪದಲ್ಲಿ ಕಂಬಗಳು ಇರುವುದಿಲ್ಲ. ಅವುಗಳ ಜಾಗದಲ್ಲಿ ಆಯತಾಕಾರದ ವೇದವಿನ್ಯಾಸದ ದಪ್ಪಗೋಡೆಗಳಿರುತ್ತವೆ. ಗೋಡೆಯ ಚೌಕವು ಬಹುತೇಕ ಕಟ್ಟಡಗಳಲ್ಲಿ ಅಲಂಕಾರವಾಗಿರುತ್ತವೆ.

  ಗೋಳಗುಮ್ಮಟ

  ಇದು ಮಹಮದ್ ಆದಿಲ್‌ಶಾಹ್ನ (1627-57) ಸಮಾಧಿ ಸ್ಮಾರಕ, ಬಿಜಾಪುರದ ವಾಸ್ತುಶಿಲ್ಪಕ್ಕೆ ವಿಶಿಷ್ಟತೆಯನ್ನು ತಂದುಕೊಟ್ಟಿರುವ ಅದ್ವಿತೀಯ ಕಲಾಕೃತಿ. ಇದರ ಬೃಹದಾಕಾರದ ಅದ್ಭುತ ರಚನೆ ಅಚ್ಚರಿಯನ್ನುಂಟು ಮಾಡುವಂಥದು. ಇಲ್ಲಿ ಒಂದು ಧ್ವನಿ ಏಳು ಸಾರಿ ಪ್ರತಿಧ್ವನಿಸುತ್ತದೆ. ಊರಿನ ಪೂರ್ವಭಾಗದಲ್ಲಿರುವ ಈ ಕಟ್ಟಡ ಉದ್ಯಾನವಿರುವ ವಿಶಾಲವಾದ ಪ್ರಾಕಾರದ ಮಧ್ಯದಲ್ಲಿದೆ. ಸುಮಾರು 200 ಅಡಿಗಳಷ್ಟು ಉದ್ದ ಅಗಲಗಳ ಚೌಕಾಕೃತಿಯ ನೆಲಗಟ್ಟಿನ ಮೇಲೆ ಇದು ನಿರ್ಮಿತವಾಗಿದೆ. ಎತ್ತರ ಸಹ ಸುಮಾರು 200 ಅಡಿಗಳಷ್ಟಿದೆ. ಇದರ ಮೇಲೆ ವರ್ತುಲಾಕೃತಿಯ ಬೃಹತ್ ಗೋಪುರವಿದೆ. ಇದರ ವ್ಯಾಸ 114 ಅಡಿ ಇಷ್ಟು ದೊಡ್ಡ ಗೋಪುರವನ್ನು ಬೇರೆ ಯಾವುದೇ ಕಟ್ಟಡ ಹೊಂದಿಲ್ಲ. ಕಟ್ಟಡದ ಒಳಭಾಗದಲ್ಲಿ 135 ಅಡಿ ಚೌಕಾಕೃತಿಯ ಒಂದು ಸಮಾಧಿ ಕೋಣೆ ಇದೆ. ಇದರ ಎತ್ತರ 178 ಅಡಿಗಳು. ಇದರಲ್ಲಿ 110 ಅಡಿಗಳಷ್ಟು ಎತ್ತರದಿಂದ ಗೋಪುರದ ಆಕೃತಿ ಪ್ರಾರಂಭವಾಗುತ್ತದೆ. ಅಲ್ಲಿ ಗೋಪುರದ ಒಳಭಾಗದ ಸುತ್ತಲೂ ಬರುವಂತೆ ಹಲವಾರು ಅಡಿಗಳಷ್ಟು ಅಗಲದ ಮೊಗಸಾಲೆಯಿದೆ. ಈ ಕೋಣೆಯ ಒಳಭಾಗದ ವಿಸ್ತೀರ್ಣ 18,000 ಚ.ಅ.ಗಿಂತಲೂ ಹೆಚ್ಚಾಗಿದೆ. ಒಂದೇ ಗೋಪುರವನ್ನು ಇದು ಇಡೀ ಜಗತ್ತಿನಲ್ಲಿಯೇ ಅತ್ಯಂತ ದೊಡ್ಡದು ಎನ್ನಲಾಗಿದೆ. ಗಾತ್ರದಿಂದ ಮಾತ್ರವಲ್ಲದೆ ಈ ಕಟ್ಟಡ ವಾಸ್ತುಶಿಲ್ಪ ವಿನ್ಯಾಸಗಳ ದೃಷ್ಟಿಯಿಂದಲೂ ಮೆಚ್ಚುವಂಥದು. ಮೇಲಿರುವ ಗುಮ್ಮಟವೇ ಕಟ್ಟಡದ ಪ್ರಮುಖ ಆಕರ್ಷಣೆ. ಇಟ್ಟಿಗೆ ಮತ್ತು ಗಾರೆಗಳಿಂದ ಕೂಡಿದ ಸುಮಾರು 10 ಅಡಿಗಳಷ್ಟು ದಪ್ಪದ ಗೋಡೆಯಿಂದ ಇದು ನಿರ್ಮಿತವಾಗಿದೆ.

  ಇಬ್ರಾಹಿಂ ರೋಜಾ

  ಎರಡನೇ ಇಬ್ರಾಹಿಂ ಆದಿಲ್ ಷಾ ತನ್ನ ಸಮಾಧಿ ಮಂದಿರವಾಗಿ ಇದನ್ನು ಕಟ್ಟಿಸಿಕೊಂಡ. ಇದರಲ್ಲಿ ಎರಡು ಮುಖ್ಯ ಕಟ್ಟಡಗಳಿವೆ. ವಿನ್ಯಾಸ ಪರಿಪೂರ್ಣತೆಯನ್ನು ಮುಟ್ಟಿದೆ. ಕಟ್ಟಡ ಕಪಿಲವರ್ಣದ ಕಲ್ಲಿನದು. ಕಟ್ಟಡ ಅಷ್ಟೇನೂ ದೊಡ್ಡದಲ್ಲ. ಆದರೆ ರಚನೆಯ ತಂತ್ರ, ಅಲಂಕಾರ ಮತ್ತು ಉಪಯುಕ್ತತೆಯ ದೃಷ್ಟಿಯಿಂದ ಇದು ಅಪೂರ್ವವಾದದ್ದು. ಎರಡೂ ಕಟ್ಟಡಗಳು 260 ಅಡಿ ಉದ್ದ 150 ಅಡಿ ಅಗಲವಿರುವ ಜಗತಿಯ ಮೇಲಿವೆ. ರೋಜಾದಲ್ಲಿ ಮಧ್ಯ ಹಜಾರದ ಸುತ್ತಲೂ ಕಮಾನು ಸಾಲುಗಳಿಂದ ಸುತ್ತುವರೆದ ಮೊಗಸಾಲೆ ಮತ್ತು ಗುಮ್ಮಟ ಇವೆ. ತೆಳುವಾಗಿಯೂ ಉದ್ದವಾಗಿಯೂ ಇರುವ ಮಿನಾರ್‌ಗಳು ಕಟ್ಟಡದ ಮೇಲೆ ಇವೆ. ಹೊರ ಗೋಡೆಯ ಮೇಲೆ ಕಲ್ಲಿನಲ್ಲಿ ಖುರಾನಿನ ವಾಕ್ಯಗಳನ್ನು ಕೊರೆಯಲಾಗಿದೆ. ಉತ್ತರದಲ್ಲಿ ತಾಜಮಹಲ್ ಇರುವಂತೆ ದಕ್ಷಿಣದಲ್ಲಿ ಇಬ್ರಾಹಿಂ ರೋಜಾ ಇದೆ ಎಂದು ಅಭಿಪ್ರಾಯಪಡಲಾಗಿದೆ.

  ಜಾಮೀಮಸೀದಿ

  ಒಂದನೇ ಆದಿಲ್‌ಷಾಹ್ನ ಕಾಲದಲ್ಲಿ ಇದು ನಿರ್ಮಾಣಗೊಂಡಿತು. ಇದು ಆಯತಾಕಾರದ ದೊಡ್ಡ ಕಟ್ಟಡ. 450 ಅಡಿ ಉದ್ದ, 225 ಅಡಿ ಅಗಲವಿದೆ. ಕಮಾನುಗಳನ್ನು ಹೊಂದಿದೆ. ಗೋಪುರ ಅರ್ಧಗೋಲಾಕಾರದಲ್ಲಿದೆ. ಒಳಭಾಗದಲ್ಲಿ ಅಲಂಕಾರವಿಲ್ಲದೆ ಸರಳವಾಗಿದೆ. ಪ್ರಾರ್ಥನಾ ಹಜಾರ 208 ಅಡಿ ಉದ್ದ 107 ಅಡಿ ಅಗಲವಿದೆ. ಕಂಬಗಳಿಂದ ಕೂಡಿದೆ. ಕಮಾನುಗಳು ಇದನ್ನು 5 ಹಜಾರಗಳನ್ನಾಗಿ ವಿಭಾಗಿಸುವಂತಿದೆ. ಇಲ್ಲಿಯ ಗೋಡೆಗಳ ಮೇಲೆ ಬಗೆಬಗೆಯ ಚಿತ್ರದ ಕೆಲಸಗಳೂ, ವರ್ಣ ವಿನ್ಯಾಸಗಳು ಕಂಡುಬರುತ್ತವೆ. ಗಗನಮಹಲ್ ಸುಮಾರು 1561ರ ನಿರ್ಮಾಣ. ಹಿಂದೆ ಇದು ರಾಜರ ನಿವಾಸ ಹಾಗೂ ಸಭಾಸದನ, ಪ್ರಸಿದ್ದ ಚಾಂದ್‌ಬೀಬಿ ಆಡಳಿತ ನಡೆಸುತ್ತಿದ್ದುದು ಇಲ್ಲಿಂದಲೇ. ಔರಂಗಜೇಬ್ ಬಿಜಾಪುರವನ್ನು ಆಕ್ರಮಿಸಿದ ಅನಂತರ ತನ್ನ ವಿಜಯದ ದರ್ಬಾರನ್ನು ನಡೆಸಿದ್ದು ಹಾಗೂ ಕೊನೆಯ ಆದಿಲ್‌ಶಾಹೀ ರಾಜ ಸಿಕಂದರನಿಗೆ ಬೆಳ್ಳಿಯ ಸಂಕೋಲೆಯನ್ನು ತೊಡಿಸಿ ಔರಂಗಜೇಬನ ಎದುರು ತಂದಿದ್ದು ಈ ಸಭಾಂಗಣದಲ್ಲಿ ಬಿಜಾಪುರದ ಕೋಟೆ ಬಹುಶಃ ಭಾರತದ ಬೃಹತ್ ಕೋಟೆಗಳಲ್ಲೊಂದು. ಒಂದು ಕಾಲದಲ್ಲಿ ಇಡೀ ಭಾರತದಲ್ಲೇ ವೈಭವದ ನಗರವಾಗಿ ಬೆಳೆದಿದ್ದ ಬಿಜಾಪುರದ ಎಲ್ಲ ಕಡೆಯಲ್ಲೂ ಆ ಕಾಲದ ಭವ್ಯ ಕಟ್ಟಡಗಳ ಅವಶೇಷಗಳನ್ನು ಕಾಣಬಹುದು. ಕೇಂದ್ರ ಪುರಾತತ್ವ ಇಲಾಖೆ ಮುಖ್ಯವಾದ ಕೆಲವನ್ನು ಆರಿಸಿ ರಕ್ಷಿಸಿರುವುದರ ಸಂಖ್ಯೆಯೇ ಸುಮಾರು 300 ರಷ್ಟು, ಈ ಪ್ರಾಚೀನ ಕಟ್ಟಡಗಳ ಜೊತೆಗೆ ಮಹಾಲಕ್ಷ್ಮಿ ದೇವಾಲಯ, ನರಸಿಂಹ ದೇವಾಲಯ, ಸಿದ್ದೇಶ್ವರ ದೇವಾಲಯ ಮುಂತಾದವು ಪ್ರಸಿದ್ಧವಾಗಿವೆ.

  Leave a Reply

  Your email address will not be published. Required fields are marked *