ಕಿತ್ತೂರು ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲ್ಲೂಕಿನಲ್ಲಿದೆ. ತನ್ನ ರಾಜ್ಯದ ರಕ್ಷಣೆಗಾಗಿ ಇಂಗ್ಲಿಷರ ವಿರುದ್ಧ ಹೋರಾಡಿದ ಪ್ರಥಮ ಭಾರತೀಯ ಮಹಿಳೆ ಕಿತ್ತೂರು ಚೆನ್ನಮ್ಮ 1772ರಿಂದ 1816ರವರೆಗೆ ರಾಜ್ಯವನ್ನಾಳಿದ ಮಲ್ಲಸರ್ಜ ದೇಸಾಯಿ ಕಿತ್ತೂರಿನ ಅರಸರಲ್ಲಿ ಪ್ರಮುಖನಾದವನು ಮಲ್ಲಸರ್ಜ ದೊರೆಗೆ ರುದ್ರವ್ವ ಮತ್ತು ಚೆನ್ನಮ್ಮ ಇಬ್ಬರು ಹೆಂಡಂದಿರು, ಚೆನ್ನಮ್ಮ ಕಾಕತಿ ದೇಸಾಯರ ಮಗಳು. ಚೆಲುವೆ, ಯುದ್ಧ ಕಲೆಯಲ್ಲಿ ಪ್ರವೀಣಳು. ಚೆನ್ನಮ್ಮನಿಗೆ ಮಕ್ಕಳಿರಲಿಲ್ಲ. ಮಲ್ಲಸರ್ಜನ ಮರಣಾನಂತರ ರುದ್ರವ್ವಯ ಹಿರಿಯ ಮಗ ಶಿವಲಿಂಗ ರುದ್ರಸರ್ಜ ಪಟ್ಟಕ್ಕೆ ಬಂದ. ಮಕ್ಕಳಿಲ್ಲದ ರುದ್ರಸರ್ಜ ಅನಾರೋಗ್ಯದಿಂದ 1824ರಲ್ಲಿ ಮರಣಿಸಿದ. ಇದಕ್ಕೆ ಮೊದಲು ಮಾಸ್ತ ಮರಡಿ ಬಾಳಪ್ಪಗೌಡರ ಮಗ ಶಿವಲಿಂಗ ಎಂಬ ಬಾಲಕನನ್ನು ದತ್ತು ತೆಗೆದುಕೊಂಡಿದ್ದ.
ಬ್ರಿಟಿಷರು ಕಿತ್ತೂರು ಸಂಸ್ಥಾನವನ್ನು ತಮ್ಮ ವಶಕ್ಕೆ ತೆಗೆದುಕೊಳ್ಳಲು ಸನ್ನಾಹ ನಡೆಸಿದ್ದರು. ದತ್ತಕವನ್ನು ಒಪ್ಪಲು ಬ್ರಿಟಿಷರು ನಿರಾಕರಿಸಿದರು. ಇದರಿಂದ ಕುಪಿತಗೊಂಡ ಚೆನ್ನಮ್ಮ ಬ್ರಿಟಿಷರ ವಿರುದ್ಧ ಹೋರಾಡಲು ಸಿದ್ದತೆ ನಡೆಸಿದಳು. ಅರಮನೆಯ ಕಾರುಭಾರಿಗಳಾಗಿದ್ದ ಮಲ್ಲಪ್ಪಶೆಟ್ಟಿ, ವೆಂಕಟರಾಯ ಎಂಬ ದೇಶದ್ರೋಹಿಗಳಿಂದ ಈ ಸುದ್ದಿ ಧಾರವಾಡದ ಕಲೆಕ್ಟರ್ ಥ್ಯಾಕರೆಗೆ ತಿಳಿಯಿತು. 1824 ಅಕ್ಟೋಬರ್ 21 ರಂದು ಥ್ಯಾಕರೆ ಹಠತ್ತಾಗಿ ಕಿತ್ತೂರಿನ ಕೋಟೆಯ ಮೇಲೆ ಎರಗಿದ. ದಿನಾಂಕ23 ರಂದು ಕೋಟೆಯ ಹೆಬ್ಬಾಗಿಲನ್ನು ಒಡೆಯಲು ಥ್ಯಾಕರೆ ಕ್ಯಾಪ್ಟನ್ ಬ್ಲಾಕ್‌ಗೆ ಆಜ್ಞೆ ಮಾಡಿದ. ಅಷ್ಟರಲ್ಲಿ ಕಿತ್ತೂರಿನ ಯೋಧ ಮಟೂರು ಬಾಳಪ್ಪ ಥ್ಯಾಕರೆಯನ್ನು ಗುಂಡಿಕ್ಕಿ ಕೊಂದ. ಬ್ಲಾಕ್ ಮತ್ತಿತರ ಅಧಿಕಾರಿಗಳು ಹೋರಾಟದಲ್ಲಿ ಸತ್ತರು. ನೂರಾರು ಬ್ರಿಟಿಷ್ ಸೈನಿಕರು ಸೆರೆಸಿಕ್ಕರು. ಚಿನ್ನಮ್ಮ ಈ ಸೆರೆಯಾಳುಗಳ ಬಗೆಗೆ ಉದಾರವಾಗಿ ನಡೆದುಕೊಂಡಳು.
ಮೈಸೂರು, ಮದರಾಸು, ಮುಂಬಯಿ, ಸೊಲ್ಲಾಪುರ, ಇನ್ನಿತರ ಕಡೆಗಳಿಂದ ಬಂದ ಬ್ರಿಟಿಷ್ ಸೈನ್ಯ ಕಿತ್ತೂರಿನ ಮೇಲೆ ದಾಳಿ ಮಾಡಿತು. ದತ್ತುಪುತ್ರನನ್ನು ಮಾನ್ಯ ಮಾಡುವುದಾಗಿ ಚಾಪ್ಲಿನ್ ವಚನ ಕೊಟ್ಟಾಗ ಚೆನ್ನಮ್ಮ ಕೈದಿಗಳನ್ನು ಬಿಡುಗಡೆ ಮಾಡಿದಳು. ಆದರೆ ಮಾತಿಗೆ ತಪ್ಪಿದ ಚಾಪ್ಲಿನ್ ಕೋಟೆಯನ್ನು ಮುತ್ತಲು ಆಜ್ಞೆ ಮಾಡಿದ. ಇದರಿಂದ ಕ್ರೋಧಿತಳಾದ ಚೆನ್ನಮ್ಮ ಸ್ವತಃ ತನ್ನ ವೀರರೊಂದಿಗೆ ಕಾಳಗಕ್ಕೆ ಮುಂದಾದಳು ಬ್ರಿಟಿಷರ ಸುಸಜ್ಜಿತ ಆಯುಧಗಳೆದುರು ಕಿತ್ತೂರು ಪಕ್ಷಕ್ಕೆ ಸೋಲುಂಟಾಯಿತು.
ಚೆನ್ನಮ್ಮ ಮತ್ತು ಸೊಸೆ ವೀರವ್ವನನ್ನು ಬಂಧಿಸಿ ಬೈಲಹೊಂಗಲದ ಸರೆಯಲ್ಲಿರಿಸಲಾಯಿತು. ಚಿಕ್ಕಮ್ಮ ಮತ್ತೆ ರಾಜ್ಯ ಪಡೆಯುವ ಆಸೆ ಹೊತ್ತು ಸಂಗೊಳ್ಳಿ ರಾಯಣ್ಣನಂಥ ವೀರಯೋಧರ ಗುಪ್ತ ಸಂಪರ್ಕ ಪಡೆದಳು. ಕಿತ್ತೂರಿನ ಬಿಡುಗಡೆಗಾಗಿ ಪ್ರಯತ್ನ ನಡೆಸಲು ತನ್ನ ಒಡವೆಗಳನ್ನು, ಹಣವನ್ನು ಕಳಿಸುತ್ತಾ ಅವರನ್ನು ಹುರಿದುಂಬಿಸಿದಳು. ಕೊನೆಗೆ ರಾಣಿ ಚನ್ನಮ್ಮ ತನ್ನ 57ನೇ ವಯಸ್ಸಿನಲ್ಲಿ 1829 ಫೆಬ್ರವರಿ 2 ರಂದು ಕೊನೆಯುಸಿರೆಳೆದಳು. ಸಕಲ ಸೇನಾ ಮರ್ಯಾದೆಗಳೊಂದಿಗೆ ಆಕೆಯ ಅಂತ್ಯಕ್ರಿಯ ಬೈಲಹೊಂಗಲದ ‘ಕಠ’ದಲ್ಲಿ ನಡೆಯಿತು.
nice article
kannadaoppositewords.online
Nice