Kannada Essay on Lal Bahadur Shastri – ಲಾಲ್ ಬಹದ್ದೂರ್ ಶಾಸ್ತ್ರಿ

  Kannada Essay on Lal Bahadur Shastri

  ಲಾಲ್ ಬಹದ್ದೂರ್ ಶಾಸ್ತ್ರಿ ಸಾಮಾನ್ಯ ವರ್ಗದ ಕುಟುಂಬವೊಂದರಲ್ಲಿ 1904 ಅಕ್ಟೋಬರ್ 2 ರಂದು ಜನಿಸಿದರು. ತಂದೆ ಶಾರದಾ ಪ್ರಸಾದ್, ತಾಯಿ ರಾಮ್ ದುಲಾರಿ, ಪತ್ನಿ ಲಲಿತಾ, ವಾರಣಾಸಿಯ ಬಳಿಯ ಮೊಘಲ್ ಸರಾಯಿ ಶಾಸ್ತಿಯವರ ಹುಟ್ಟೂರು. ಮೆಟ್ರಿಕ್‌ವರೆಗೆ ಕಲಿತ ಅವರು 1921ರ ಅಸಹಕಾರ ಚಳವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡರು. ಅವರನ್ನು ಬಂಧಿಸಲಾಯಿತು. ಅನಂತರ ಅವರು ಕಾಶೀ ವಿದ್ಯಾಪೀಠದಲ್ಲಿ ವ್ಯಾಸಂಗ ಮಾಡಿದರು. ಅಲ್ಲಿ ಶಾಸ್ತ್ರಿ ಪದವಿ ಪಡೆದರು.

  ಅವರು ‘ಸರ್ವೆಂಟ್ಸ್ ಆಫ್ ದಿ ಸೊಸೈಟಿ ಸಂಸ್ಥೆಯನ್ನು ಸೇರಿ ಅಪೂರ್ವ ಸೇವೆಯನ್ನು ಸಲ್ಲಿಸಿದ್ದು ಗಮನಾರ್ಹವಾದದ್ದು. ಉತ್ತರ ಪ್ರದೇಶದ ಜನರು ಅವರ ಪ್ರಾಮಾಣಿಕತೆ, ನಿಸ್ಸಹತ ಹಾಗೂ ದಕ್ಷತೆಗೆ ಮಾರುಹೋದರು. ಉತ್ತರ ಪ್ರದೇಶದ ಕಾಂಗ್ರೆಸ್ ಸಮಿತಿಗೆ ಅವರು ಎರಡು ಬಾರಿ ಕಾರ್ಯದರ್ಶಿಯಾಗಿ ಆಯ್ಕೆಗೊಂಡರು. 1937ರಲ್ಲಿ ಸಂಯುಕ್ತ ಪ್ರಾಂತ್ಯದ ಶಾಸನ ಸಭೆಗೆ ಆಯ್ಕೆಯಾದರು. ಸ್ವತಂತ್ರ ಭಾರತದಲ್ಲಿ ಅವರು 1947ರಲ್ಲಿ ಗೃಹ ಹಾಗೂ ಸಾರಿಗೆ ಸಚಿವರಾದರು. 1951ರಲ್ಲಿ ಭಾರತದ ರಾಷ್ಟ್ರೀಯ ಕಾಂಗ್ರೆಸಿನ ಕಾರ್ಯದರ್ಶಿ ಮತ್ತು 1952ರಲ್ಲಿ ರಾಜ್ಯ ಸಭೆಗೆ ಆಯ್ಕೆಯಾದರು. ಅನಂತರ ರೈಲ್ವೆ ಮಂತ್ರಿಯಾದರು. ಅವರು ಈ ಖಾತೆಯಲ್ಲಿದ್ದಾಗ ಒಂದು ರೈಲು ಅಪಘಾತ ನಡೆಯಿತು. ಇದಕ್ಕೆ ಸಂವಿಧಾನಾತ್ಮಕವಾಗಿ ತಮ್ಮದೇ ಜವಾಬುದಾರಿ ಎಂದು ಹೇಳಿ ಮಂತ್ರಿ ಪದವಿಗೆ ರಾಜೀನಾಮೆ ನೀಡಿದರು. ಮುಂದೆ ಅವರು ಗೃಹ ಸಚಿವರಾದರು. ಪಕ್ಷದ ಕೆಲಸಕ್ಕಾಗಿ ಅವರು ಆ ಸ್ಥಾನವನ್ನು ಬಿಟ್ಟುಕೊಟ್ಟರು. ನೆಹರೂ ಅನಾರೋಗ್ಯ ಪೀಡಿತರಾದಾಗ ಅವರು ಖಾತಾ ರಹಿತ ಸಚಿವರಾಗಿ ನೇಮಕಗೊಂಡರು. 1964 ಮೇ 27 ರಂದು ನೆಹರೂ ನಿಧನರಾದಾಗ ಲಾಲ್ ಬಹದ್ದೂರ್ ಶಾಸ್ತ್ರಿಯವರು ಭಾರತದ ಪ್ರಧಾನಿಯಾದರು.

  1965ರಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವಿನ ಯುದ್ದದಲ್ಲಿ ದೇಶದ ಸಂರಕ್ಷಣೆಗಾಗಿ ರಕ್ಷಣಾ ಪಡೆಗಳು ಗಡಿ ದಾಟುವುದಕ್ಕೆ ಅನುಮತಿ ಕೊಟ್ಟರು. ಮತ್ತೆ ಯುದ್ಧ ಮುಗಿದ ಮೇಲೆ ಶಾಂತಿ ಸ್ಥಾಪನೆಗೆ ಆಕ್ರಮಿತ ಪ್ರದೇಶಗಳನ್ನು ಬಿಟ್ಟು ಹಿಂದೆ ಬರುವುದಕ್ಕೂ ಅವರು ಒಪ್ಪಿದರು. ಯುದ್ಧಕಾಲದಲ್ಲಿ ಅವರು ದೇಶಕ್ಕೆ ನೀಡಿದ ಘೋಷಣೆ “ಜೈ ಜವಾನ್ ! ಜೈ ಕಿಸಾನ್!”

  1966ಜನವರಿ 10ನೇ ತಾರೀಖು ಸೋವಿಯತ್ ಮಧ್ಯ ಏಷಿಯಾದ ತಾಷ್ಕಂಟ್’ ನಲ್ಲಿ ಶಾಂತಿಯ ಮಾತುಕತೆಗೆ ಹೋಗಿದ್ದ ಭಾರತದ ಪ್ರಧಾನಿ ಲಾಲ್‌ಬಹದ್ದೂರ್ ಶಾಸ್ತ್ರಿ ಹೃದಯಾಘಾತದಿಂದ ಮರಣಿಸಿದರು. ಅತ್ಯಂತ ಪ್ರಾಮಾಣಿಕ, ಸರಳ, ನಿಷ್ಠ ಹಾಗೂ ದಕ್ಷ ರಾಷ್ಟ್ರನಾಯಕ ಶಾಸ್ತಿ ಅವರಿಗೆ ಭಾರತ ಸರ್ಕಾರ ಮರಣೋತ್ತರ ಭಾರತ ರತ್ನ” ಪ್ರಶಸ್ತಿಯನ್ನು ನೀಡಿ ಗೌರವಿಸಿತು.

  “ಬಹುಶಃ ನಾನು ಗಾತ್ರದಲ್ಲಿ ಚಿಕ್ಕವನಾಗಿರುವುದರಿಂದ ಜನರು ನನ್ನನ್ನು ದುರ್ಬಲ ಎಂದು ತಿಳಿದಿರಬಹುದು. ಶಾರೀರಿಕವಾಗಿ ನಾನು ದುರ್ಬಲನಾಗಿದ್ದರೂ ಅಂತರಂಗದಲ್ಲಿ ಹಾಗಿಲ್ಲ ಎನ್ನುವ ನಂಬಿಕೆ ನನಗಿದೆ.”

  “ಹಸಿದವನಿಗೆ ಇಂದು ಒಂದು ಮೀನು ಕೊಡಿ. ಸಂತೋಷದಿಂದ ಅದನ್ನು ತಿನ್ನುತ್ತಾನೆ. ಮಾರನೆಯ ದಿನ ಮತ್ತೆ ಹಸಿವು ಎನ್ನುತ್ತಾನೆ. ಅವನಿಗೆ ಮೀನು ಹಿಡಿಯುವುದನ್ನು ಕಲಿಸಿ. ದಿನವೂ ತಿನ್ನುವನು. ಸ್ವಾವಲಂಬನೆ ಮುಖ್ಯ”

  “ಶತ್ರುವನ್ನು ನಾಶಪಡಿಸಿಕೊಳ್ಳುವ ಅತ್ಯುತ್ತಮ ಮಾರ್ಗವೆಂದರೆ ಅವನನ್ನು ಮೊದಲು ನಮ್ಮ ಮಿತ್ರನನ್ನಾಗಿ ಮಾಡಿಕೊಳ್ಳುವುದು.”

  “ನಾವು ಸತ್ಯ, ಶಾಂತಿ, ಅಹಿಂಸೆಯ ಹಾದಿಯಲ್ಲಿ ನಡೆಯುವ ಸತ್ಯಾಗ್ರಹಿಗಳಾಗಬೇಕು. ಆತ್ಮಾಭಿಮಾನ, ದೇಶಾಭಿಮಾನ ಸಂಪೂರ್ಣವಾಗಿ ಬೆರೆತಾಗಲೇ ರಾಷ್ಟ್ರಭಕ್ತಿಯಲ್ಲಿ ಬೆಳಕು ಹೊರಡುತ್ತದೆ.”
  “ನಾವು ಯಾವ ಧ್ವಜದಡಿ ನಿಂತಿರುವವೋ ಆಧ್ವಜದ ಗೌರವ, ರಕ್ಷಣೆಯ ಭಾರವೂ ನಮ್ಮದೇ. ನಾವು ಆಳಿದರೂ ಧ್ವಜದ ಗೌರವಕ್ಕೆ ಲೋಪತರಬಾರದು.”
  ಇದು ಶಾಸ್ತಿಯವರ ಕೆಲವು ನುಡಿಮುತ್ತುಗಳು.

  Leave a Reply

  Your email address will not be published. Required fields are marked *