Kannada Essay on Mahatma Gandhi – ಮಹಾತ್ಮ ಗಾಂಧಿ

    Kannada Essay on Mahatma Gandhi

    ಗುಜರಾತಿನ ಪೋರಬಂದರಿನಲ್ಲಿ 1869 ಅಕ್ಟೋಬರ್ 2 ರಂದು ಜನಿಸಿದ ಮೋಹನದಾಸ ಕರಮಚಂದ ಗಾಂಧೀ ‘ರಾಷ್ಟ್ರಪಿತ’ ಎಂದು ಭಾರತದಲ್ಲಿ ಪೂಜ್ಯರು. ‘ಮಹಾತ್ಮ’ ಎಂದು ಜಗತ್ತಿನಲ್ಲಿ ಗೌರವಾನ್ವಿತರು. ಅವರು ಸಾಟಿಯಿಲ್ಲದ ಜನನಾಯಕರು. ಪರದಾಸ್ಯದಲ್ಲಿ ನೊಂದಿದ್ದ ಭಾರತೀಯರನ್ನು ಅವರು ಸೂಜಿಗಲ್ಲಿನಂತೆ ತಮ್ಮೆಡೆಗೆ ಸೆಳೆದರು. ಜನಕೋಟಿಯ ಪಾಲಿಗೆ ಕಿಂದರಿಜೋಗಿಯಾದರು. ಅವರ ನಾಯಕತ್ವದಲ್ಲಿ ಭಾರತದಲ್ಲಿ ಹೊಸಶಕ್ತಿ ಸಂಚಾರವಾಯಿತು.

    ಇಂಗ್ಲಿಷರ ಪಾಶವೀಶಕ್ತಿಯ ವಿರುದ್ದವಾಗಿ ಅದನ್ನು ಎದುರಿಸಲು ಅವರು ಭಾರತದ ಜನರಿಗೆ ನೀಡಿದ ದಿವ್ಯಾಸ್ತವೆಂದರೆ – “ಸತ್ಯಾಗ್ರಹ”, ವಿದೇಶಿವಸ್ತುಗಳಿಗೆ ಬಹಿಷ್ಕಾರ, ಸ್ವದೇಶಿ ವಸ್ತುಗಳಿಗೆ ಮನ್ನಣೆ, ಗ್ರಾಮೀಣ ಸ್ವಾವಲಂಬನೆ, ಅಸ್ಪೃಶ್ಯತೆಯ ನಿವಾರಣೆ, ಮದ್ಯಪಾನ ನಿಷೇಧ, ಹಿಂದೂ-ಮುಸಲ್ಮಾನ ಐಕ್ಯ, ಹಿಂದೂಸ್ತಾನಿ ಪ್ರಚಾರ, ದೇಶೀಯ ಭಾಷೆಗಳಿಗೆ ಉತ್ತೇಜನ – ಇವು ದೇಶದ ಮುಂದೆ ಅವರು ಇರಿಸಿದ ವಿಧಾಯಕ ಕಾರ್ಯಕ್ರಮ. ಗಾಂಧೀ ಟೋಪಿ ಮತ್ತು ಚರಖಾ ಇವು ಸ್ವಾತಂತ್ರ್ಯ ಸಂಗ್ರಾಮದ ಸಂಕೇತಗಳಾದವು.

    ಉಪ್ಪಿನ ಸತ್ಯಾಗ್ರಹ, ಕರನಿರಾಕರಣೆ, ಅಸಹಕಾರ ಚಳುವಳಿ, ಕಾಯಿದೆ ಭಂಗ ಹೋರಾಟ, ಆಮರಣ ಉಪವಾಸ – ಇವು ಗಾಂಧೀಜಿ ಮುನ್ನೆಡೆಸಿದ ಸ್ವಾತಂತ್ರ್ಯ ಸಮರದ ವಿವಿಧ ಹಂತಗಳು. ಕೊನೆಯಲ್ಲಿ ಇಂಗ್ಲಿಷರಿಗೆ ಗಾಂಧೀಜಿ ‘ಭಾರತ ಬಿಟ್ಟು ತೊಲಗಿ’ ‘ಕ್ವಿಟ್ ಇಂಡಿಯಾ’ ‘ಚಲೇ ಜಾವ್’ ಎಂದರು. ಇದು 1942ರಲ್ಲಿ ನಡೆದ ಸ್ವಾತಂತ್ರ್ಯ ಸಂಗ್ರಾಮದ ಘೋಷಣೆ. ಇದೇ ಕೊನೆಯ ಹೋರಾಟ ಎಂದರು ಗಾಂಧೀಜಿ, ‘ಮಾಡು ಇಲ್ಲವೇ ಮಡಿ’ ಎಂದು ಪ್ರತಿಯೊಬ್ಬ ಭಾರತೀಯನಿಗೂ ಕರೆ ನೀಡಿದರು. ಬ್ರಿಟಿಷ್ ಸರಕಾರ ಈ ಚಳವಳಿಯನ್ನು ಮುರಿಯಲು ತೀವ್ರ ಕ್ರಮಗಳನ್ನು ಕೈಗೊಂಡಿತು. ಗಾಂಧೀಜಿ ಮತ್ತು ಮುಖಂಡರನ್ನು ಬಂಧಿಸಿತು. ಸಾವಿರಾರು ಜನರನ್ನು ಬಂಧಿಸಿ ಸೆರೆಯಲ್ಲಿಟ್ಟಿತ್ತು. ಸರಕಾರದ ಅಂಕಿಅಂಶಗಳಂತೆ 60229 ಮಂದಿ ಬಂಧನಕ್ಕೆ ಒಳಗಾದರು. ಅದರಲ್ಲಿ 18,000 ಜನರು ಸರೆಮನೆ ಸೇರಿದರು. 950 ಮಂದಿ ಸತ್ತರು. ಪೊಲೀಸರು ಹಾರಿಸಿದ ಗುಂಡಿನಿಂದ 1630 ಜನರು ಗಾಯಗೊಂಡರು. ಚಳವಳಿಯನ್ನು ಹತ್ತಿಕ್ಕಲು ಸರಕಾರ 60 ಕಡೆ ಸೈನಿಕರನ್ನು ನಿಯೋಜಿಸಿತು. ಆರು ಕಡೆ ವಿಮಾನದಿಂದ ಬಾಂಬ್ ಹಾಕಿತು. ಪರಿಸ್ಥಿತಿ ಪ್ರಕ್ಷುಬ್ಧವಾಯಿತು.

    1944ರಲ್ಲಿ ಗಾಂಧೀಜಿ ಬಿಡುಗಡೆ ಹೊಂದಿದರು. ತಾನು ಭಾರತವನ್ನು ಬಿಟ್ಟು ಹೂರಡುವುದು ಅನಿವಾರ್ಯ ಎಂದು ಮನಗಂಡು ಬ್ರಿಟಿಷರು ಅಧಿಕಾರ ಹಸ್ತಾಂತರಕ್ಕೆ ಸಂಬಂಧಿಸಿದ ಮಾತುಕತೆ ಆರಂಭಿಸಿದರು. ಇದು ಭಾರತೀಯರ ನೈತಿಕ ಹೋರಾಟಕ್ಕೆ ಸಿಕ್ಕದ ಗೌರವವಾಗಿತ್ತು.

    ಬಲ ಶಾರೀರಿಕ ಸಾಮರ್ಥ್ಯದಿಂದ ಬರುವುದಿಲ್ಲ; ಅದಮ್ಯ ಇಚ್ಚಾಶಕ್ತಿಯಿಂದ ಬರುತ್ತದೆ’ ಎನ್ನುತ್ತಿದ್ದರು ಗಾಂಧೀಜಿ. ಅವರು ಸರ್ವೋದಯವನ್ನು ಬಯಸಿದ್ದರು. ರಾಮರಾಜ್ಯ ಸ್ಥಾಪನೆಗಾಗಿ ಹಂಬಲಿಸಿದ್ದರು.

    ಗಾಂಧೀಜಿ ದೃಷ್ಟಿಯಲ್ಲಿ ‘ಸ್ವಾರ್ಥತ್ಯಾಗ’ ಮತ್ತು ‘ಸೇವಾ ಮನೋಭಾವ ಮಹತ್ವದ್ದಾಗಿತ್ತು. ಬಾಪೂಜಿ ಸಾಧಾರಣ ಜೀವನದಿಂದ ಮುನ್ನೆಡೆದು ಅಸಾಧಾರಣ ಜನಶಕ್ತಿಯನ್ನು ಗಳಿಸಿ ತಮ್ಮ ಗುರಿಯನ್ನು ತಲುಪಿದರು. ಸತ್ಯ, ಧರ್ಮ, ನ್ಯಾಯ, ನಿಷ್ಠೆ ಮೊದಲಾದ ಆದರ್ಶಗಳನ್ನು ಮೈಗೂಡಿಸಿಕೊಂಡ ವಿಭೂತಿ ಪುರುಷರಾದರು. ‘

    ದೀರ್ಘ ಹೋರಾಟದ ಬಳಿಕ ದೇಶಕ್ಕೆ ಸ್ವಾತಂತ್ರ ಬಂತು. ಅನಂತರ ಅನಿವಾರ್ಯವಾಗಿ ದೇಶದ ವಿಭಜನೆಯಾಯಿತು. ಈ ಸಂದರ್ಭದಲ್ಲಿ ನಡೆದ ಮತೀಯ ಗಲಭೆಗಳು, ರಕ್ತಪಾತ, ಗೂಂಡಾಗಿರಿ ಗಾಂಧೀಜಿಗೆ ವ್ಯಥೆಯನ್ನುಂಟು ಮಾಡಿದವು. ಅಂಥ ವೇಳೆಯಲ್ಲಿ 1948 ಜನವರಿ 30 ರಂದು ದೆಹಲಿಯಲ್ಲಿ ಸಂಜೆ ಪ್ರಾರ್ಥನಾ ಸಭೆಗೆ ಗಾಂಧೀಜಿ ಹೋಗುತ್ತಿದ್ದಾಗ ಹಂತಕನೊಬ್ಬನ ಗುಂಡಿಗೆ ನೆಲಕ್ಕುರುಳಿ ಕಣ್ಮುಚ್ಚಿದರು. ಬಾಪೂ ಅಮರರಾದರು.

    Leave a Reply

    Your email address will not be published. Required fields are marked *