Kannada Essay on National Animal Tiger – ಹುಲಿ ಬಗ್ಗೆ ಪ್ರಬಂಧ

  Kannada Essay on National Animal Tiger

  ಹುಲಿ ‘ಫೀಲಿಡೀ’ ಕುಟುಂಬದಲ್ಲಿಯೇ ದೊಡ್ಡ ಪ್ರಾಣಿ. ಇದರ ಶಾಸ್ತ್ರೀಯ ನಾಮ ‘ಪ್ಯಾಂಥರ ಟೈಗ್ರಿಸ್’. ಭಾರತದಲ್ಲಿ ಹಿಮಾಲಯದಿಂದ ಕನ್ಯಾಕುಮಾರಿವರೆಗೆ ಕಾಡುಗಳಲ್ಲಿವೆ. ಸಾಮಾನ್ಯವಾಗಿ ತೇವ ವಾತಾವರಣದ ದಟ್ಟ ಕಾಡಿನ ನಿರ್ಜನ ಪ್ರದೇಶದಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ಹೆಣ್ಣು ಹುಲಿಗಳಿಗಿಂತ ಗಂಡುಹುಲಿ ತುಂಬ ಬಲಿಷ್ಠ. ಇದರ ಉದ್ದ 8 ರಿಂದ 9.6 ಅಡಿ, ಎತ್ತರ 3 ರಿಂದ 3.5 ಅಡಿ, ಬಾಲ 3 ಅಡಿ ಇದ್ದು, ಇದರ ತೂಕ 180 ರಿಂದ 230 ಕೆ.ಜಿ. ಇರುತ್ತದೆ. ಹುಲಿ ಮಾಂಸಾಹಾರಿ, ಜಿಂಕೆ, ಚಿಗರಿ, ಕಾಟಿ, ಕಾಡುಹಂದಿ, ಕಾಡುಎಮ್ಮೆಗಳನ್ನು ಬೇಟೆಯಾಡುತ್ತದೆ. ಹಿಂಡುಗಳಲ್ಲಿರುವ ಪ್ರಾಣಿಗಳನ್ನು ಹಿಡಿಯಲು ಹೋಗುವುದಿಲ್ಲ. ದನ, ಕರು, ಕೆಲವೊಮ್ಮೆ ಮನುಷ್ಯರನ್ನು ಬೇಟೆಯಾಡುತ್ತದೆ. ಸಾಮಾನ್ಯವಾಗಿ ಒಂದು ಸಲಕ್ಕೆ 18 ರಿಂದ 25 ಕೆ.ಜಿ. ಮಾಂಸವನ್ನು ತಿನ್ನುತ್ತದೆ.

  ಕಂಪು ಕೂಡಿದ ಕಿತ್ತಳೆ ಹಳದಿ ಅಥವಾ ನಸುಗೆಂಪಿನ ದೇಹದ ಬಣ್ಣದ ಮೇಲೆ ನೇರವಾಗಿ ಇಳಿದ ಕಪ್ಪು ಪಟ್ಟೆಗಳಿವೆ. ಗಲ್ಲ, ಗಂಟಲು, ಹೊಟ್ಟೆ, ಕಾಲು, ಕಿವಿಯ ಒಳಮಗ್ಗುಲು ಬಿಳಿ ಬಣ್ಣದಲ್ಲಿರುತ್ತದೆ. ಬೇಸಿಗೆಯಲ್ಲಿ ಮೈಬಣ್ಣ ಮಾಸಲಾಗುತ್ತದೆ. ಬಿಳಿ ಹುಲಿಗಳು ಭಾರತದಲ್ಲಿ ಅಪರೂಪವಾಗಿ ಕಂಡಿವೆ. ಹುಲಿಗೆ ದೃಷ್ಟಿ ಮತ್ತು ಪ್ರಾಣಶಕ್ತಿ ಕಡಿಮೆ. ಆದರೆ ಶ್ರವಣ ಶಕ್ತಿ ಚುರುಕು. ಕಣ್ಣುಗಳು ತಿಳಿಹಳದಿ, ಕಿವಿಗಳು ಗಿಡ್ಡ ಮತ್ತು ದುಂಡು. ಬಲವಾದ ಸ್ನಾಯುಗಳಿರುವ ದೇಹ ಮತ್ತು ಮೊನಚಾದ ಕೋರೆಹಲ್ಲುಗಳು ಇದರ ವೈಶಿಷ್ಟ. ಮುಂಗಾಲುಗಳಲ್ಲಿ ಐದು, ಹಿಂಗಾಲುಗಳಲ್ಲಿ ನಾಲ್ಕು ಬೆರಳುಗಳಿದ್ದು ಒಳಸೇರುವ ನಖಗಳಿವೆ. ಬೆಕ್ಕುಗಳಂತ ಮತ್ತನೆಯ ಪಾದ, ಬಿರುಸಾದ ಮೀಸೆ, ಒರಟಾದ ನಾಲಿಗೆ ಇವೆ. ಬಾಲದಲ್ಲಿ ಕಪ್ಪು ಉಂಗುರಗಳಿವೆ. ಗಂಡು ಹುಲಿಗಳಲ್ಲಿ ಗಲ್ಲಗಳ ಮೇಲೆ ಗಡ್ಡದ ಹಾಗೆ ಕೂದಲುಗಳಿರುತ್ತವೆ.

  ಹೆಣ್ಣು ಹುಲಿ 3-4ವರ್ಷಕ್ಕೆ ಗಂಡು 4-5ವರ್ಷಕ್ಕೆ ಪ್ರಾಯಕ್ಕೆಬರುತ್ತದೆ. ಗರ್ಭಾವಧಿ 105ರಿಂದ 133 ದಿನಗಳು. ಒಮ್ಮೆಗೇ ಎರಡು ಅಥವಾ ಮೂರು ಮರಿಗಳು ಹುಟ್ಟುತ್ತವೆ. ಮರಿಗಳ ಕಣ್ಣುಗಳಲ್ಲಿ ಪೂರೆ ಇದ್ದು 10-12ದಿನಗಳಲ್ಲಿ ಪೊರೆಹರಿದು ಕಣ್ಣು ತೆರೆಯುತ್ತದೆ. ಸುಮಾರು 100ದಿನ ಮರಿಗಳು ಮೊಲೆಹಾಲು ಕುಡಿಯುತ್ತವೆ. ನಂತರ ಮಾಂಸ ತಿನ್ನಲು ಆರಂಭಿಸುತ್ತವೆ. 16 ತಿಂಗಳಲ್ಲಿ ತಾಯಿಯಷ್ಟು ಗಾತ್ರ ಬೆಳೆದು ತಾವೇ ಸ್ವತಃ ಬೇಟೆಯಾಡುತ್ತವೆ. ಹುಲಿಗಳು 20 ರಿಂದ 25 ವರುಷಗಳವರೆಗೆ ಬದುಕುತ್ತವೆ. ಹುಲಿಗಳಿಗೆ ಶಾಖ ಇಷ್ಟವಿಲ್ಲ. ನೀರು, ನೆರಳು, ತೇವ ಇರುವ ಜಾಗವನ್ನು ಆರಿಸಿಕೊಳ್ಳುತ್ತವೆ. ಚೆನ್ನಾಗಿ ಈಜಬಲ್ಲವು. ಗಿಡಮರಗಳನ್ನು ಹತ್ತುವುದಿಲ್ಲ. ಶಕ್ತಿ, ವೇಗ, ಕ್ರೂರತನದಲ್ಲಿ ಎತ್ತಿದ ಕೈ, ಕಾಡಿನಲ್ಲಿ ನಿರಂಕುಶ ದೊರೆ. ನಿಶಾಚರಿ, ಸುಂದರ ಪ್ರಾಣಿ. ರಾತ್ರಿಯಲ್ಲಿ ಬೇಟೆಯಾಡುತ್ತವೆ. ಇವುಗಳ ಹಿಡಿತದಲ್ಲಿ ಸಿಕ್ಕ ಪ್ರಾಣಿಗಳು ಪಾರಾಗುವುದು ಕಠಿಣ.

  ಒಂದು ಹುಲಿಯ ಅಧೀನ ಪ್ರದೇಶ ಸುಮಾರು 45 ರಿಂದ 55 ಕಿಲೋಮೀಟರ್. ಮಲ-ಮೂತ್ರದಿಂದ ಕ್ಷೇತ್ರದ ಗಡಿಯನ್ನು ನಿರ್ಮಿಸುತ್ತದೆ. ನಿಸರ್ಗದಲ್ಲಿ ಹುಲಿ ಮತ್ತು ಸಿಂಹಗಳು ಲೈಂಗಿಕವಾಗಿ ಕೂಡುವುದಿಲ್ಲ. ಮೃಗಾಲಯಗಳಲ್ಲಿ ಇವು ಒತ್ತಟ್ಟಿಗಿದ್ದು ಮರಿಗಳನ್ನು ಪಡೆದುದುಂಟು. ಗಂಡುಹುಲಿ ಮತ್ತು ಹೆಣ್ಣು ಸಿಂಹದಿಂದಹುಟ್ಟಿದ ಸಂತತಿಗೆ “ಟಾಯಗಾನ್” ಎಂದು, ಗಂಡು ಸಿಂಹ ಮತ್ತು ಹೆಣ್ಣು ಹುಲಿಯಿಂದಾದ ಸಂತತಿಗೆ “ಲಾಯಗಾನ್’ ಎಂದು ಹೆಸರು. ಆದರೆ ಈ ಮರಿಗಳು ಮುಂದೆ ಬದುಕಿದ ದಾಖಲೆಗಳಿಲ್ಲ. ಹುಲಿ ಭಾರತದ ರಾಷ್ಟ್ರೀಯ ಮೃಗ, ಹುಲಿಗಳ ಆವಾಸದ ಮೇಲಾದ ಹಾವಳಿ, ನೆಲೆಯ ಅತಿಕ್ರಮಣ ಮತ್ತು ವಿಪರೀತ ಕೊಲೆ-ಅವುಗಳ ಕ್ಷೀಣತೆಗೆ ಕಾರಣವಾಗಿದೆ. ಹೀಗಾಗಿ ಭಾರತದಲ್ಲಿ ಹುಲಿಗಳ ಬೇಟೆಯನ್ನು ನಿಷೇಧಿಸಲಾಗಿದೆ. 1973ರಿಂದ ‘ಪ್ರೊಜೆಕ್ಸ್ ಟಾಯ್ದರ್’ ಎಂಬ ಬೃಹತ್ ಯೋಜನೆಯನ್ನು ಜಾಗತಿಕ ವನ್ಯಜೀವಿಗಳ ನಿಧಿ ಸಂಸ್ಥೆಯ ಸಹಾಯದಿಂದ ಹಮ್ಮಿಕೊಂಡು ಸುಮಾರು 15 ಅರಣ್ಯ ಕ್ಷೇತ್ರಗಳನ್ನು ಕಾಯ್ದಿರಿಸಿದೆ. ಕರ್ನಾಟಕದ ಬಂಡೀಪುರ ಅರಣ್ಯ ಪ್ರದೇಶ ಈ ಕಾಯ್ದಿಟ್ಟ ಕ್ಷೇತ್ರಗಳಲ್ಲಿ ಒಂದು, ಇದರಿಂದಾಗಿ ಹುಲಿಗಳ ಸಂಖ್ಯೆ ಕ್ರಮೇಣ ಸುಧಾರಿಸುತ್ತಿದೆ.

  Leave a Reply

  Your email address will not be published. Required fields are marked *