Kannada Essay on November 14th, Children’s Day about Jawaharlal Nehru – ಜವಾಹರಲಾಲ ನೆಹರು

    Kannada Essay on November 14th, Children's Day about Jawaharlal Nehru

    ಜವಾಹರಲಾಲರ ಜನ್ಮದಿನ 14 ನವೆಂಬರ್ 1889. ರಾಷ್ಟ್ರದಲ್ಲಿ ಅದನ್ನು ‘ಮಕ್ಕಳ ದಿನ’ ಎಂದು ಆಚರಿಸಲಾಗುವುದು. ಮಕ್ಕಳ ಪಾಲಿಗೆ ಆ ಹಿರಿಯ ವ್ಯಕ್ತಿ ಚಾಚಾ ನೆಹರು’. ಮಕ್ಕಳ ಜೊತೆ ಇರುವುದು, ಅವರೊಡನೆ ಮಾತಾಡುವುದು, ಅವರೊಂದಿಗೆ ಆಟವಾಡುವುದು ಜವಾಹರರಿಗೆ ತುಂಬ ಪ್ರಿಯವಾಗಿತ್ತು.

    ಕಾಶ್ಮೀರ, ಜವಾಹರರ ಪೂರ್ವಿಕರ ನಾಡು. ತಂದೆ ಮೋತಿಲಾಲರು. ತಿಂಗಳಿಗೆ ಅರ್ಧಲಕ್ಷ ರೂಪಾಯಿ ವರಮಾನವಿದ್ದ ಪ್ರಸಿದ್ದ ನ್ಯಾಯವಾದಿ, ತಾಯಿ ಸ್ವರೂಪರಾಣಿ, ಸಾದ್ವಿಮಣಿ, ದೈವಭಕ್ತಿ, ಜವಾಹರ ಇವರ ಒಬ್ಬನೇ ಮಗ. 14ನೇ ವಯಸ್ಸಿನಲ್ಲೇ ಹುಡುಗ ಇಂಗ್ಲೆಂಡಿಗೆ ವಿದ್ಯಾಭ್ಯಾಸಕ್ಕೆ ಹೋದ. ಹ್ಯಾರೋಶಾಲೆಯ ಬಳಿಕ ಕೇಂಬ್ರಿಡ್ಜ್‌ನಲ್ಲಿ ರಸಾಯನಶಾಸ್ತ್ರ, ಭೂ ವಿಜ್ಞಾನ ಮತ್ತು ಸಸ್ಯಶಾಸ್ತ್ರ ವಿಷಯದಲ್ಲಿ ಪದವೀಧರನಾದ.

    ಶಾಸ್ತ್ರದಲ್ಲಿ ಪಾರಂಗತನಾಗಿ ಬಾರ್ -ಅಟ್-ಲಾ ಪದವಿ ಪಡೆದ. ಭಾರತಕ್ಕೆ ಹಿಂದಿರುಗಿದ ಮೇಲೆ ಪರಕೀಯರ ಸರ್ಕಾರದ ವಿರುದ್ದ ಹೋರಾಟಕ್ಕೆ ಇಳಿದರು ಜವಾಹರರು, ಮುಂದೆ ಗಾಂಧೀಜಿಯ ಪ್ರಭಾವದಿಂದ ನೆಹರು ಮನೆತನ ಸರ್ವಸ್ವವನ್ನೂ ದೇಶಕ್ಕಾಗಿ ಧಾರೆಯೆರೆಯಿತು. ನೆಹರು ಅವರ ಮಡದಿ ಕಮಲಾ, ತಂದೆ, ತಾಯಿ, ತಂಗಿ ಎಲ್ಲರೂ ಸ್ವಾತಂತ್ರ್ಯ ಸಮರದಲ್ಲಿ ಸಕ್ರಿಯವಾಗಿ ಪಾಲ್ಗೊಂಡರು. ಜೈಲುವಾಸವನ್ನು ಅನುಭವಿಸಿದರು.

    ಜವಾಹರರು ಬುದ್ದಿಜೀವಿ, ವಿಚಾರತಜ್ಞ, ಜಾಗತಿಕ ದೃಷ್ಟಿಕೋನವಿದ್ದವರು. ನೇರ ಮಾತು, ಧೀರ ನಿಲುವು, ಅಚಲ ದೇಶಪ್ರೇಮ-ಇವುಗಳಿಂದ ಅವರು ಭಾರತೀಯರ ಆರಾಧ್ಯ ಮೂರ್ತಿಯಾದರು. ಮುಂದೆ ಗಾಂಧೀಜಿ ಅವರನ್ನು ತಮ್ಮ ಉತ್ತರಾಧಿಕಾರಿ ಎಂದರು. 1929ರಲ್ಲಿ ಲಾಹೋರಿನಲ್ಲಿ ನಡೆದ ಅಖಿಲ ಭಾರತ ಕಾಂಗ್ರೆಸಿನ ಅಧಿವೇಶನದಲ್ಲಿ ಪೂರ್ಣ ಸ್ವಾತಂತ್ರ” ನಮ್ಮಗುರಿ ಎಂದು ಘೋಷಿಸಲಾಯಿತು.

    ದೀರ್ಘ ಕಾಲದ ಹೋರಾಟದ ನಂತರ ಭಾರತ 15 ಆಗಸ್ಟ್ 1947 ರಂದು ಸ್ವತಂತ್ರವಾಯಿತು. ಜವಾಹರಲಾಲ್ ನೆಹರು ಸ್ವತಂತ್ರ ಭಾರತದ ಮೊದಲ ಪ್ರಧಾನ ಮಂತ್ರಿಯಾದರು. ಆಗ ಅವರಿಗೆ 58 ವರ್ಷ. ಮುಂದೆ 17 ವರ್ಷಗಳ ಕಾಲ ರಾಷ್ಟ್ರವನ್ನು ಪ್ರಧಾನಿಯಾಗಿ ಮುನ್ನಡೆಸಿದ ನೆಹರು 1964 ಮೇ 27 ರಂದು ನಿಧನ ಹೊಂದಿದರು.

    ಇತಿಹಾಸ ಜ್ಞಾನ, ಕಲೆ, ಸಾಹಿತ್ಯ, ನಾಟಕದಲ್ಲಿ ಅಪಾರ ಆಸಕ್ತಿಯಿದ್ದ ನೆಹರು ಭಾರತದ ಧೀಮಂತ ನಾಯಕರಾಗಿದ್ದರು. ಜವಾಹರರ ಆತ್ಮಕಥೆ’, ‘ಜಗತ್ತಿನ ಚರಿತ್ರೆಯ ಇಣುಕು ನೋಟಗಳು’, ‘ಭಾರತ ದರ್ಶನ’-ಎಲ್ಲವೂ ಶ್ರೇಷ್ಠ ಕೃತಿಗಳು. ಬ್ರಿಟಿಷ್ ಸರ್ಕಾರದ ವಿರುದ್ಧ ಅವಿರತ ಹೋರಾಟ ನಡೆಸಿದ ಜವಾಹರರು ಒಂಬತ್ತು ಸಾರಿ ಸೆರೆವಾಸ ಅನುಭವಿಸಿ ಒಟ್ಟು 1041 ದಿನ ಅಲ್ಲಿ ಕಳೆದಿದ್ದರು. ಜೈಲಿನಲ್ಲಿ ಬರವಣಿಗೆ, ಅಧ್ಯಯನಗಳಲ್ಲಿ ಕಾಲ ಸವೆಸಿದರು. ನಹರು ಪ್ರಕೃತಿ ಪ್ರೇಮಿ, ಚೆಂಗುಲಾಬಿ ಅವರಿಗೆ ಪ್ರಿಯವಾದ ಹೂವು. ಅವಿಶ್ರಾಂತ ದುಡಿಮೆ, ಶಿಸ್ತು, ಒಪ್ಪ-ಓರಣ ಅವರ ಜೀವನದಲ್ಲಿ ಹಾಸುಹೊಕ್ಕಾಗಿದ್ದವು.

    ವಿಶ್ವಭ್ರಾತೃತ್ವದಲ್ಲಿ ನಂಬಿಕೆಯಿದ್ದ ಜವಾಹರರು ಯುದ್ಧ ವಿರೋಧಿಯಾಗಿದ್ದರು. ಶಾಂತಿಸಾಧಕರಾಗಿದ್ದರು. ಸಹಬಾಳ್ವೆಯ ‘ಪಂಚಶೀಲ’ ಸೂತ್ರಗಳನ್ನು ಪ್ರತಿಪಾದಿಸಿದ ಅವರು ಜಗತ್ತಿನಲ್ಲಿ ಶಕ್ತಿ ಬಣಗಳಿಗೆ ಸೇರದ ಅಲಿಪ್ತ ರಾಷ್ಟ್ರಗಳ ಬಲವನ್ನು ನಿರ್ಮಿಸಲು ಕಾರಣರಾದರು. ಭಾರತದ ಏಳಿಗೆಗೆ ವಿಜ್ಞಾನ, ತಂತ್ರಜ್ಞಾನ ಅಗತ್ಯವೆಂದು ನಂಬಿದ್ದರು. ಇದಕ್ಕಾಗಿ ಯೋಜನಾಬದ್ದವಾಗಿ ಕೆಲಸ ಮಾಡಿದರು. ಅಣೆಕಟ್ಟುಗಳ ಭವ್ಯ ನಿರ್ಮಾಣಗಳನ್ನು ಕಂಡು ಮನತುಂಬಿದ ಜವಾಹರರು ಇವು ನಾನು ಪೂಜೆ ಕೈಗೊಳ್ಳುವ ಭಾರತದ ನೂತನ ದೇವಾಲಯಗಳು, ಇವೇ ರಾಷ್ಟ್ರೀಯ ಯಾತ್ರಾಸ್ಥಳಗಳು ಎಂದರು. ನೆಹರು ಭಾರತದ ಸುಖೀ ರಾಜ್ಯದ ಕನಸು ಕಂಡವರು. ಹಗಲಿರುಳು ಭಾರತದ ಜನಕೋಟಿಯ ಹಿತಕ್ಕಾಗಿಯೇ ಕೆಲಸ ಮಾಡಿದರು. ಕೊನೆಯವರೆಗೂ ಅವರು ಶ್ರೇಷ್ಠ ಪ್ರಜಾಪ್ರಭುತ್ವವಾದಿಯಾಗಿ ಬಾಳಿದರು.

    Leave a Reply

    Your email address will not be published. Required fields are marked *