ಏಷ್ಯಾ ಮತ್ತು ಆಫ್ರಿಕಾ ಖಂಡಗಳಲ್ಲಿ ಎರಡು ಜಾತಿಯ ಒಂಟೆಗಳಿವೆ. ಅರೇಬಿಯಾ, ಸಹರಾ ಮರುಭೂಮಿ ಮತ್ತು ಇರಾನ್ ಮೊದಲಾದ ಕಡೆ ವಾಸಿಸುವ ಜೋಡು ಡುಬ್ಬಗಳ ಒಂಟೆ. ಆಫ್ರಿಕಾದ ಒಂಟೆಗಳು ಅರಣ್ಯಕ್ಕಿಂತ ಹೆಚ್ಚಾಗಿ ಮನುಷ್ಯರ ಸಾಕಾಣಿಕೆಯಲ್ಲಿಯೇ ಅಧಿಕವಾಗಿದೆ. ಎರಡು ಡುಬ್ಬಗಳ ಒಂಟೆಗಳನ್ನು ‘ಬೆಕ್ಷಿಯ ಒಂಟೆ’ ಎಂದು ಕರೆಯುತ್ತಾರೆ. ಇದು ಸಾಧು ಪ್ರಾಣಿಗಳು.
ವಿಶೇಷ ಗಾತ್ರ ಮತ್ತು ಸಾಮರ್ಥ್ಯ ಎರಡರಲ್ಲೂ ಪ್ರಪಂಚದಲ್ಲಿ ಆನೆಯ ನಂತರ ಒಂಟೆಯೇ ದೊಡ್ಡದು ಎನ್ನಬಹುದು. ಅದರ ಭುಜದ ಎತ್ತರ ಏಳು ಅಡಿಗಳಷ್ಟು, ದೇಹದ ಉದ್ದ ಒಂಬತ್ತು ಅಡಿಗಳಷ್ಟು. ಮರಳಿನ ಮೇಲೆ ನಡೆಯಲು ಅನುಕೂಲವಾದ ಬಲಿಷ್ಠ ಕಾಲುಗಳು, ಎತ್ತರಕ್ಕೆ ಇಣುಕಿ ನೋಡಲು ಸಹಾಯವಾಗುವಂತಹ ಬಾಗಿದ ಉದ್ದನೆಯ ಕತ್ತು, ಚಿಕ್ಕ ಕಿವಿಗಳು, ಧೂಳಿನ ರಕ್ಷಣೆಗೆ ಕಣ್ಣನ್ನು ಕಾಯಬಲ್ಲ ಹುಬ್ಬುಗಳು, ಮರಳು ಭೂಮಿಯಲ್ಲಿ ಮರಳು ಮೂಗಿಗೆ ಅಡರದಂತೆ ತಮ್ಮ ಮೂಗಿನ ಹೊಳ್ಳೆಗಳನ್ನು ಬೇಕಾದಾಗ ಮುಚ್ಚಬಲ್ಲ ಕವಾಟಗಳೂ ಇವೆ. ಮರಳಿನ ಮೇಲೆ ಓಡಾಡಲು ಅದರ ದೊಡ್ಡ ಪಾದಗಳಲ್ಲಿ ಎರಡು ಸೀಳುಗಳಿದ್ದು, ಆ ಸೀಳುಗಳು ಬೆಂಗಡೆ ಕೂಡಿಕೊಂಡಿವೆ. ಮರಳುಗಾಡಿನಲ್ಲೇ ಹುಟ್ಟಿ ಬೆಳೆಯುವ ಒಂಟೆಗಳನ್ನು ‘ಮರಳುಗಾಡಿನ ಹಡಗು ಎಂದು ಕರೆಯುವುದುಂಟು.
ಮರುಭೂಮಿಯಲ್ಲಿ ಅವುಗಳಿಗೆ ಆಹಾರದ ಅಭಾವವಿದೆ. ಅಲ್ಲಿನ ಗಿಡ, ಮರಗಳ ತೊಗಟೆ ಒರಟಾಗಿದ್ದು ಅದರ ಮೇಲೆ ಮುಳ್ಳುಗಳಿರುತ್ತವೆ. ಆದ್ದರಿಂದ ಅವುಗಳನ್ನು ತಿನ್ನಲು ಅನುಕೂಲವಾದ ಬಾಯಿ, ನಾಲಿಗೆ ಮತ್ತು ಒಸಡುಗಳು ಇರುವುದರಿಂದ ಎಂಥದೇ ಕಚ್ಚಾ ಆಹಾರವನ್ನು ಅವು ತಿಂದು ಬದುಕಬಲ್ಲವು. ಒಂಟೆಗಳು ನೀರು ಕುಡಿಯದೆಯೇ ಮೂರ್ನಾಲ್ಕು ದಿನ ಇರಬಲ್ಲವು. ನೀರು ಸಿಕ್ಕಿದಾಗ ಕುಡಿದು, ಮೇವು ಸಿಕ್ಕಿದಾಗ ತಿಂದು ಎರಡು-ಮೂರು ದಿನಗಳವರೆಗೆ ಇವು ಉಪವಾಸವಿರುತ್ತವೆ.
ಮರುಭೂಮಿಯ ಅರಬರ ಒಂಟೆಗಳ ಗುಂಪು ದಿನದಲ್ಲಿ 25 ಮೈಲಿಯಷ್ಟು ಸಂಚರಿಸಬಲ್ಲವು. ಅಗತ್ಯಬಿದ್ದರೆ ಇಡೀದಿನ ಪ್ರಯಾಣಿಸಬಲ್ಲದು. ಚಳಿಗಾಲದಲ್ಲಿ ಬಹಳಷ್ಟು ದೂರ ಮರುಭೂಮಿಯಲ್ಲಿ ಎಲ್ಲಿಯೂ ನೀರಿಲ್ಲದೆ ನಡೆದಿರುವುದುಂಟು.
ಒಂಟೆಯ ಗರ್ಭಾವಧಿ 12 ಅಥವಾ 13 ತಿಂಗಳು. ಒಂಟೆಯ ಮರಿ ಹುಟ್ಟಿದ ಕೆಲವೇ ಗಂಟೆಗಳಲ್ಲಿ ನಡೆದಾಡುತ್ತದೆ. ಒಂಟೆಯ ಡುಬ್ಬ ಅದಕ್ಕೆ ಚೈತನ್ಯವನ್ನು ಸಂಗ್ರಹಿಸಿ ಒದಗಿಸುವ ಕೊಬ್ಬಿನ ಸಂಚಯ. ಹೀಗೆ ಸಂಗ್ರಹಿಸಿದ ಕೊಬ್ಬಿನಿಂದ ಅದು ನಾಲ್ಕಾರು ದಿನಗಳವರೆಗೆ ಉಪವಾಸವಿರಬಲ್ಲದು. ಒಂಟೆಯ ದೇಹದಲ್ಲಿ ನೀರು ಮಾತ್ರ ಹೀಗೆ ಸಂಗ್ರಹಗೊಳ್ಳುವುದಿಲ್ಲ. ಒಂಟೆಯ ದೇಹದ ಉಷ್ಣತೆ ಪ್ರದೇಶಕ್ಕೆ ಅನುಗುಣವಾಗಿ ಬದಲಾಗುತ್ತದೆ. ಅದರಲ್ಲಿ ಬೆವರು, ಮೂತ್ರಗಳಿಂದ ಉಂಟಾಗುವ ನಷ್ಟ ಕಡಿಮೆ. ಅದರ ದೇಹದಲ್ಲಿನ ಉಣ್ಣೆಯ ಹೊದಿಕೆ ಶರೀರದ ಶಾಖ ನಷ್ಟವಾಗದಂತೆ ರಕ್ಷಿಸುತ್ತದೆ.