ಒನಕೆ ಓಬವ್ವ ಚಿತ್ರದುರ್ಗದ ಹೆಸರನ್ನು ಕೇಳಿದ ಒಡನೆಯೇ ಅಲ್ಲಿನ ಏಳುಸುತ್ತಿನ ಕೋಟೆಯ ನೆನಪಾಗುವುದು ಹೇಗೆ ಸಹಜವೋ ಹಾಗೆಯೇ ಇಂದಿಗೂ ಮನೆಮಾತಾಗಿ ಉಳಿದಿರುವ ಒನಕೆಯ ಓಬವ್ವನ ಪರಾಕ್ರಮವೂ ಕಣ್ಣುಮುಂದೆ ಕಟ್ಟಿದಂತಾಗುತ್ತದೆ. ಓಬವ್ವನ ದೇಶಪ್ರೇಮವನ್ನು ಕುರಿತ ಕಥೆ ಹೀಗಿದೆ. ಚಿತ್ರದುರ್ಗದ ಪಾಳೆಯಗಾರರಲ್ಲಿ ಕಡೆಯವನಾದ ಮದಕರಿನಾಯಕನಿಗೂ (ಕ್ರಿ.ಶ. 1753-1778) ಹೈದರನಿಗೂ ನಡೆದ ಕಾಳಗ ಇತಿಹಾಸಪ್ರಸಿದ್ಧವಾಗಿದೆ. ಹೈದರ್ ಈ ಅಭೇದ್ಯ ದುರ್ಗವನನ್ನು ತಿಂಗಳುಗಟ್ಟಲೆ ಮುತ್ತಿಗೆ ಹಾಕಿ ಸ್ವಾಧೀನಪಡಿಸಿಕೊಳ್ಳಲಾರದೆ ಹೋದ. ಕಡೆಗೆ ತನ್ನ ಶತ್ರುವನ್ನು ಭೇದೋಪಾಯದಿಂದಲೇ ಗೆಲ್ಲಬೇಕೆಂದು ಬಯಸಿ, ತನ್ನ ಬೇಹುಗಾರರನ್ನು ಕರೆದು ಕೋಟೆಯ ಕಳ್ಳದಾರಿಗಳನ್ನು ಪತ್ತೆಮಾಡಿ ತಿಳಿಸಬೇಕೆಂದು ಆಜ್ಞೆಮಾಡಿದ. ವೇಷಧಾರಿಗಳಾದ ಆ ಬೇಹುಗಾರರನ್ನು ಕೋಟೆಯ ಸುತ್ತಲೂ ಸುಳಿದಾಡುತ್ತಿರುವಾಗ, ಒಂದು ಪಾರ್ಶ್ವದಲ್ಲಿ ಒಬ್ಬ ಹೆಂಗಸು ಮೊಸರಿನ ಮಡಕೆಯನ್ನು ತಲೆಯ ಮೇಲೆ ಹೊತ್ತುಕೊಂಡು ಆ ಕೋಟೆಯ ಕಡೆ ನಡೆದು ಅದೃಶ್ಯಳಾದದ್ದು ಗಮನಕ್ಕೆ ಬಂತು. ಚಾರರು, ಆ ದಿಕ್ಕಿನಲ್ಲಿ ಎಲ್ಲಿಯೋ ಕಳ್ಳಗಿಂಡಿಯಿರಬೇಕೆಂದು ತರ್ಕಿಸಿ ಹುಡುಕತೊಡಗಿದಾಗ, ಬಂಡೆಗಳ ಮಧ್ಯೆ ನುಸುಳಿಕೊಂಡು ಹೋಗುವಂತೆ ಒಂದು ಇಕ್ಕಟ್ಟಾದ ಮಾರ್ಗವಿರುವುದು ಸ್ಪಷ್ಟವಾಯಿತು. ಈ ಸುದ್ದಿಯನ್ನು ಕೇಳಿದ ನವಾಬನಿಗೆ ತುಂಬ ಸಂತೋಷವಾಯಿತು. ಶತ್ರುಸೈನಿಕರು ಒಬ್ಬೊಬ್ಬರಾಗಿ ಆ ದಾರಿಯ ಮೂಲಕ ಒಳಕ್ಕೆ ಹೋಗಲು ನಿಶ್ಚಯಿಸಿಕೊಂಡರು.
ಆ ಕಳ್ಳದಾರಿಯ ಒಳಭಾಗಕ್ಕೆ ಸ್ವಲ್ಪ ದೂರದಲ್ಲಿಯೇ ಒಂದು ಕೊಳವೂ ಕಾವಲುಗಾರನ ಒಂದು ಬತೇರಿಯೂ ಇದ್ದುವು. ಸರ್ಪಗಾವಲು ಕಾಯುತ್ತಿದ್ದ ಕಾವಲುಗಾರ ಸ್ವಲ್ಪ ಬಿಡುವು ಮಾಡಿಕೊಂಡು ತನ್ನ ಗುಡಿಸಿಲಿನಲ್ಲಿ ಊಟಮಾಡುತ್ತಿರುವಾಗ್ಗೆ ಅವನ ಹೆಂಡತಿ ಓಬವ್ವ ನೀರು ತರಲೆಂದು ಕೊಳದ ಬಳಿಗೆ ಬಂದಳು. ಆ ವೇಳೆಗೆ ಕಳ್ಳಗಿಂಡಿಯ ಸಮೀಪದಲ್ಲಿ ಶತ್ರುಸೈನಿಕರು ಹೊಂಚುಹಾಕಿ, ಪಿಸಿಪಿಸಿ ಮಾತುಗಳನ್ನಾಡುತ್ತಿದ್ದುದು ಅವಳಿಗೆ ಕೇಳಿಸಿತು. ಆಕೆಗೆ ಆ ಸೂಕ್ಷದ ಅರಿವಾಗಿ, ಕೂಡಲೆ ಗುಡಿಸಲಿಗೆ ತೆರಳಿ ಒಂದು ಒನಕೆಯನ್ನು ತೆಗೆದುಕೊಂಡು ಬಂದು ಆ ಕಳ್ಳಗಿಂಡಿಯ ಬಳಿ ನಿಂತಳು. ಅತ್ತ ಶತ್ರುಸೈನಿಕರು ಒಬ್ಬೊಬ್ಬರಾಗಿ ನುಸುಳಿ ಬರುವುದೇ ತಡ, ಓಬವ್ವ ಅವರ ತಲೆಯನ್ನು ಒನಕೆಯಿಂದ ಹೊಡೆದು ಕೆಡವುತ್ತಿದ್ದಳು. ಈ ಹತ್ಯೆ ಕೆಲಕಾಲ ಹೀಗೆಯೇ ಸಾಗಿತು. ಓಬವ್ವನ ಗಂಡ ಮನೆಯಲ್ಲಿ ತನ್ನ ಹೆಂಡತಿಯನ್ನು ಕಾಣದೆ ಹುಡುಕಿಕೊಂಡು ಕಳ್ಳಕಂಡಿಯ ಹತ್ತಿರಕ್ಕೆ ಬಂದಾಗ ಆಕೆಯ ಮುಂದೆ ಬಿದ್ದಿದ್ದ ಹೆಣದ ರಾಶಿಯನ್ನೂ ಹರಿಯುತ್ತಿದ್ದ ಕೆನ್ನೇರಿನ ಕಾಲುವೆಯನ್ನೂ ಕಂಡು ಕಂಗೆಟ್ಟ, ಆಕೆಯ ಹೆಸರು ಹಿಡಿದು ಕೂಗುತ್ತ ಮುಂದುವರಿಯಲು ವೀರಾವೇಶದಲ್ಲಿ ಮೈಮರೆತ್ತಿದ್ದ ಓಬವ್ವ ತನ್ನ ಗಂಡನನ್ನೂ ಹೊಡೆಯುವುದರಲ್ಲಿದ್ದಳು. ಗಂಡ ದೂರ ಸರಿದು, ಕೆಲಸ ಕೆಟ್ಟಿತೆಂದು ಎಣಿಸಿ ಕೂಡಲೆ ಕಹಳೆಯನ್ನು ಊದಿದ. ಆ ಎಚ್ಚರಿಕೆಯ ದನಿಯನ್ನು ಕೇಳಿದ ಒಡನೆಯೇ ಮದಕರಿನಾಯಕನ ಸೈನಿಕರು ಅತ್ತ ಧಾವಿಸಿಬಂದರು. ಶತ್ರುಸೈನಿಕರೊಂದಿಗೆ ಯುದ್ಧ ಮೊದಲಾಯಿತು. ಆ ಗೊಂದಲದಲ್ಲಿ ಶತ್ರುಸೈನಿಕನೊಬ್ಬನ ಪೆಟ್ಟಿಗೆ ಸಿಕ್ಕಿ ಓಬವ್ವ ಹತಳಾದಳು. ಮದಕರಿನಾಯಕನ ಸೈನಿಕರ ಕೈಮೇಲಾಗಲು ಶತ್ರುಗಳು ಮತ್ತೆ ಹಿಮ್ಮೆಟ್ಟಿದರು. ಕ್ಷಣಮಾತ್ರದಲ್ಲಿ ಅಸದೃಶವಾದ ಕೆಚ್ಚನ್ನು ತೋರಿ ಕಾಳಗದಲ್ಲಿ ಬಲಿಯಾದ ಓಬವ್ವನ ಸಲುವಾಗಿ ಎಲ್ಲರೂ ಕಣ್ಣೀರು ಸುರಿಸಿದರು. ಕಾವಲುಗಾರನ ಹೆಂಡತಿಯಾದ ಓಬವ್ವನ ಆ ಪರಾಕ್ರಮದ ಕುರುಹಾಗಿ ಆ ಕಳ್ಳಗಿಂಡಿಗೆ ಒನಕೆಯ ಓಬವ್ವನ ಕಂಡಿ ಎಂಬ ಹೆಸರು ಇಂದಿಗೂ ಪ್ರಚಲಿತವಾಗಿದೆ.
I learn the onake obavva story from this