ರವೀಂದ್ರನಾಥ ಠಾಗೋರ್ ಪ್ರಖ್ಯಾತ ವಂಶ, ಅವರ ಅಜ್ಜ ದ್ವಾರಕಾನಾಥ ಠಾಕೂರರು. ಅವರ ಮಗ ದೇವೇಂದ್ರನಾಥ ಠಾಕೂರ್. 1861 ಮೇ 7ರಂದು ಕಲ್ಕತ್ತಾದ ಜೋರಾಶಂಕೋ ಎಂಬಲ್ಲಿ ರವೀಂದ್ರರು, ದೇವೇಂದ್ರನಾಥ ಮತ್ತು ಶಾರದಾದೇವಿಯ 14ನೇ ಮಗುವಾಗಿ ಜನಿಸಿದರು. ಪ್ರಾರಂಭದಿಂದಲೂ ರವೀಂದ್ರರದು ಸ್ವತಂತ್ರ ಮನೋವೃತ್ತಿ ಅವರಿಗೆ ಶಾಲೆಯ ಕಟ್ಟುಪಾಡು ರುಚಿಸುತ್ತಿರಲಿಲ್ಲ. ರಾಮಾಯಣ, ಮಹಾಭಾರತ ಮತ್ತು ಬಂಗಾಳಿಯ ಪತ್ರಿಕೆ, ಪುಸ್ತಕಗಳನ್ನು ತುಂಬ ಆಸಕ್ತಿಯಿಂದ ಓದುತ್ತಿದ್ದರು. ಬೋಲ್ಪುರ ಎಂಬಲ್ಲಿ ತಂದೆ ದೇವೇಂದ್ರನಾಥರು ತಮ್ಮ ಧ್ಯಾನಕ್ಕೆ ಅನುಕೂಲವಾಗಲು ‘ಶಾಂತಿನಿಕೇತನ’ ಎಂಬ ಮನೆಯನ್ನು ಕಟ್ಟಿಕೊಂಡಿದ್ದರು. ಮೊದಲಬಾರಿ ರವೀಂದ್ರರು ‘ಶಾಂತಿನಿಕೇತನ’ವನ್ನು ಕಂಡು ಮಾರುಹೋದರು. ಹಿಮಾಲಯದ ಭವ್ಯತೆ ಅವರನ್ನು ಮುಗ್ಧರನ್ನಾಗಿಸಿತು. ಬಂಗಾಳಿ, ಸಂಸ್ಕೃತ, ಇಂಗ್ಲಿಷಿನಲ್ಲಿ ಪಾರಂಗತರಾಗಿದ್ದ ರವೀಂದ್ರರು ಕಾಳಿದಾಸರ ‘ಶಾಂಕುತಲ’, ‘ಕುಮಾರ ಸಂಭವ’ಗಳನ್ನು ಓದಿ ಅದರಿಂದ ಪ್ರಭಾವಿತರಾದರು.
1883ರಲ್ಲಿ ರವೀಂದ್ರರಿಗೆ ಮೃಣಾಲಿನೀದೇವಿಯ ಜೊತೆ ವಿವಾಹವಾಯಿತು. 1898 ಸೆಪ್ಟೆಂಬರ್ 20 ರಂದು ಅವರು ತಮ್ಮ ಅಣ್ಣ ಸತ್ಯೇಂದ್ರನಾಥರೊಡನೆ ಇಂಗ್ಲೆಂಡಿಗೆ ಹೋದರು. ಅಲ್ಲಿ ಒಂದೂವರೆ ವರುಷ ಲಂಡನ್ ವಿಶ್ವವಿದ್ಯಾನಿಲಯದಲ್ಲಿ ಆಂಗ್ಲ ಸಾಹಿತ್ಯವನ್ನು ಅಭ್ಯಾಸ ಮಾಡಿದರು. 1912ರಲ್ಲಿ ರವೀಂದ್ರರು ಅನಾರೋಗ್ಯದ ಅನಂತರ ವಿಶ್ರಾಂತಿ ಪಡೆಯುತ್ತಿದ್ದಾಗ ತಮ್ಮ ಬಂಗಾಳಿ ಕವನ ಸಂಕಲನದಿಂದ ಆರಿಸಿದ ಕೆಲವು ಕವನಗಳನ್ನು ಇಂಗ್ಲಿಷಿಗೆ ಭಾಷಾಂತರಿಸತೊಡಗಿದರು.
‘ಗೀತಾಂಜಲಿ’ ಎಂಬ ಹೆಸರಿನಿಂದ ಈ ಕವನಗಳನ್ನು ಪ್ರಕಟಿಸಿದರು ಇದು ಆಂಗ್ಲ ಕವಿ ಯೇಟ್ಸ್ಗೆ ತುಂಬ ಮೆಚ್ಚುಗೆಯಾಯಿತು. 44 ವಯಸ್ಸಿನ ರವೀಂದ್ರರಿಗೆ ಈ ಕವನ ಸಂಗ್ರಹಕ್ಕೆ ನೊಬೆಲ್ ಪ್ರಶಸ್ತಿ’ ದೊರೆಯಿತು. ಇದರಿಂದ ಬಂದ ಹಣವನ್ನು ರವೀಂದ್ರರು ಬ್ಯಾಂಕಿನಲ್ಲಿಟ್ಟು ಶಾಂತಿನಿಕೇತನದಲ್ಲಿ ತಾವು ಸ್ಥಾಪಿಸಿದ್ದ ಶಾಲೆಯ ನಿರ್ವಹಣೆಗಾಗಿ ಉಪಯೋಗಿಸಿದರು. ಈ ಸಂಸ್ಥೆ ಚೆನ್ನಾಗಿ ಬೆಳೆದು 1918 ರಲ್ಲಿ ‘ವಿಶ್ವಭಾರತಿ’ ಎಂಬ ವಿಶ್ವವಿದ್ಯಾನಿಲಯವಾಗಿ ರೂಪುಗೊಂಡಿತು. ಇಲ್ಲಿ ಸಾಮಾನ್ಯ ವಿದ್ಯಾಭ್ಯಾಸ, ನಾನಾವಿಧವಾದ ತತ್ವಜ್ಞಾನಗಳ ಅಧ್ಯಯನ, ಕಲೆ, ಸಂಗೀತ, ಶಿಕ್ಷಣ, ಶಿಲ್ಪ, ಚೀನಿ ಮತ್ತು ಹಿಂದಿ ವಿಭಾಗಗಳಿದ್ದವು. ಭೂ ವ್ಯವಸಾಯ ಮತ್ತು ಬೇರೆ ಬೇರೆ ಗ್ರಾಮೋದ್ಯೋಗಗಳನ್ನು ಆಧರಿಸಿ ಗ್ರಾಮ ಜೀವನವನ್ನು ಸುಧಾರಿಸುವ ಬಗಗೆ ಸೂಕ್ತ ಪ್ರಯೋಗಗಳನ್ನು ನಡೆಸಲು ಶಾಂತಿನಿಕೇತನಕ್ಕೆ ಸಮೀಪವಾಗಿ ‘ಶ್ರೀನಿಕೇತನ’ವನ್ನು ಸ್ಥಾಪಿಸಿದರು.
ರವೀಂದ್ರರು ಈ ಶತಮಾನದ ಪ್ರಮುಖ ಕವಿ. ಅವರ ಆಸಕ್ತಿ, ಪ್ರತಿಭೆ, ಬಹುಮುಖಿ. ಗಮಕಿ, ಗಾಯಕ, ಸಂಗೀತ ರಚನಾಕಾರ, ಉತ್ತಮ ನಟ, ನಿರ್ದೇಶಕ, ಕಲಾವಿದ, ಶಿಕ್ಷಣದಲ್ಲಿ ವಿಶೇಷ ಆಸಕ್ತಿ – ಹೀಗೆ ರವೀಂದ್ರರದು ದೈತ್ಯಾಕಾರದ ಪ್ರತಿಭೆ ಮತ್ತು ಆಸಕ್ತಿ. ಅವರು ಬರೆದಿರುವ ಕವನಗಳು ಸುಮಾರು 5000ದಷ್ಟಿವೆ. ಅಲ್ಲದೆ ಮಾನಸಿ, ನೈವೇದ್ಯ, ಗೀತಾಂಜಲಿ, ನವಜಾತಕ್ ಮುಂತಾದ ಕವನ ಸಂಕಲನಗಳು ಅವರ ಅಪೂರ್ವ ಕವಿತ್ವ ಶಕ್ತಿಗೆ ನಿದರ್ಶನವಾಗಿವೆ. .
ವಾಲ್ಮೀಕಿ, ಪ್ರತಿಭಾ, ಚಿತ್ರಾಂಗದಾ, ಚಂಡಾಲಿಕಾ ಇತ್ಯಾದಿ 24 ನಾಟಕಗಳು, ಗೋರಾ, ಯೋಗಾಯೋಗ ಮುಂತಾದ 12 ಕಾದಂಬರಿಗಳು, ಗಲ್ಪ ಗುಚ್ಛ ಕಥಾಸಂಕಲನ, ಯುರೋಪ್, ಜಪಾನ್ ಯಾತ್ರೆ, ಪ್ರಭಾನಿ ಪತ್ರ ಮೊದಲಾದ ಪ್ರವಾಸ ಕಥನಗಳು, ವಿಚಿತ್ರ ಪ್ರಬಂಧ, ಸ್ವದೇಶ, ಶಾಂತಿನಿಕೇತನ ಮುಂತಾದ ಪ್ರಬಂಧ ಸಂಕಲನಗಳು, ಜೀವನ ಸೃತಿ, ಭಿನ್ನಪತ್ರ ಮೊದಲಾದ ಪತ್ರ ಸಂಗ್ರಹಗಳು ಅವರ ದೈತ್ಯ ಸಾಹಿತ್ಯ ಪ್ರತಿಭೆಗೆ ದ್ಯೋತಕವಾಗಿದೆ. ಚಿತ್ರ ಲಿಪಿಯ ಎರಡು ಸಂಪುಟಗಳು ಅಮೆರಿಕದಲ್ಲಿ ಅವರು ಮಾಡಿದ ಪರ್ಸನಾಲಿಟಿ’ ಭಾಷಣಗಳ ಪುಸ್ತಕ ಪ್ರಮುಖವಾದವು ಇವರ ಅನೇಕ ಪುಸ್ತಕಗಳು ಬೇರೆ ಬೇರೆ ಭಾಷೆಗಳಿಗೆ ಅನುವಾದಗೊಂಡಿದೆ. ನಮ್ಮ ರಾಷ್ಟ್ರಗೀತೆ ಜನಗಣಮನ ಬರೆದವರೂ ರವೀಂದ್ರರೇ,
ರವೀಂದ್ರರು 80 ವರ್ಷಗಳ ತುಂಬು ಬಾಳು ನಡೆಸಿ 1941 ಆಗಸ್ಟ್ 7ನೇ ತಾರೀಖು ನಿಧನರಾದರು.