Kannada Essay on Rajendra Prasad – ರಾಜೇಂದ್ರ ಪ್ರಸಾದ್

  Kannada Essay on Rajendra Prasad

  ಸ್ವತಂತ್ರ ಭಾರತದ ಮೊದಲ ರಾಷ್ಟ್ರಪತಿ ಬಾಬು ರಾಜೇಂದ್ರ ಪ್ರಸಾದ್ ಹುಟ್ಟಿದ್ದು 1884 ಜನವರಿ 3 ರಂದು, ಬಿಹಾರ ಪ್ರಾಂತದ ಸಾರನ್ ಜಿಲ್ಲೆಯ ಜೀರಾಡೇಯಿ ಗ್ರಾಮದಲ್ಲಿ. ತಂದೆ ಮಹಾದೇವ ಸಹಾಯ್.’ ತಾಯಿ ಕಮಲೇಶ್ವರಿ, ಛಾಪ್ರಾ ಪಟ್ಟಣ, ಕಲ್ಕತ್ತಾದಲ್ಲಿ ಶಿಕ್ಷಣ ಮುಗಿಸಿ ಎಂ.ಎ. ಪದವೀಧರರಾದ ರಾಜೇಂದ್ರ ಪ್ರಸಾದ್ ಮುಜಫರ್‌ಪುರ್ ಕಾಲೇಜಿನಲ್ಲಿ ಸ್ವಲ್ಪಕಾಲ ಪ್ರಾಧ್ಯಾಪಕರಾಗಿದ್ದರು. ಅನಂತರ ವಕೀಲಿ ಪರೀಕ್ಷೆ ಮುಗಿಸಿ ಪಟ್ಟಾ ನಗರದಲ್ಲಿ ವಕೀಲ ವೃತ್ತಿ ಆರಂಭಿಸಿದರು. ತಮ್ಮ ಆದಾಯದ ಬಹುಪಾಲು ಅಂಶವನ್ನು ಅವರು ಸಾರ್ವಜನಿಕ ಕಾರ್ಯಗಳಿಗೆ ಉಪಯೋಗಿಸುತ್ತಿದ್ದರು.

  ಚಂಪಾರಣ್ಯದಲ್ಲಿ ನೀಲಿ ತೋಟದ ರೈತರು ಮತ್ತು ಅದರ ಮಾಲೀಕರ ಮಧ್ಯೆ ಭಾರಿ ವಿವಾದವುಂಟಾದಾಗ ಕಾರ್ಮಿಕರ ಅಹವಾಲನ್ನು ಕೇಳಿ ಅವರ ಸಂಕಷ್ಟಗಳನ್ನು ನಿವಾರಿಸಲು ಬಂದ ಗಾಂಧೀಜಿಯನ್ನು ರಾಜೇಂದ್ರಪ್ರಸಾದ್ ಭೇಟಿಯಾದರು. ಅವರಿಗೆ ಸುಮಾರು 7000 ಸಾಕ್ಷಾಧಾರಗಳನ್ನು ಒದಗಿಸಿದರು.

  1920ರಲ್ಲಿ ಅಸಹಕಾರ ಚಳವಳಿಯಲ್ಲಿ ಭಾಗವಹಿಸಿದರು. ವಕೀಲ ವೃತ್ತಿಯನ್ನು ಬಿಟ್ಟರು. ಸರೆವಾಸ ಅನುಭವಿಸಿದರು. ಶಾಲಾ ಕಾಲೇಜುಗಳಿಂದ ಹೊರಬಂದ ವಿದ್ಯಾರ್ಥಿಗಳಿಗಾಗಿ ‘ಬಿಹಾರ ವಿದ್ಯಾಪೀಠ’ ಎಂಬ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿದರು. ಇದರ ಆಶ್ರಯದಲ್ಲಿ 650 ವಿವಿಧ ವಿದ್ಯಾಲಯಗಳಿದ್ದು 62 ಸಾವಿರ ವಿದ್ಯಾರ್ಥಿಗಳು ಕಲಿಯುತ್ತಿದ್ದರು.

  1906ರಲ್ಲಿ ಕಲ್ಕತ್ತೆಯಲ್ಲಿ ಸೇರಿದ ಇಪ್ಪತ್ತೆರಡನೆಯ ಕಾಂಗ್ರೆಸ್ ಅಧಿವೇಶನದಲ್ಲಿ ಪ್ರಸಾದರು ಸ್ವಯಂ ಸೇವಕರಾಗಿ ಕೆಲಸ ಮಾಡಿದರು. 1934ರಲ್ಲಿ ಮುಂಬಯಿಯಲ್ಲಿ ನಡೆದ ಕಾಂಗ್ರೆಸ್ ಮಹಾಧಿವೇಶನದ ಅಧ್ಯಕ್ಷತೆ ವಹಿಸಿದರು. 1939ರಲ್ಲಿ ಸುಭಾಷ್‌ಚಂದ್ರ ಬೋಸ್ ರಾಜೀನಾಮೆ ಕೊಟ್ಟಾಗ ಅವರು ಇನ್ನೊಮ್ಮೆ ಕಾಂಗ್ರೆಸ್ ಅಧ್ಯಕ್ಷರಾದರು.

  ಬಿಹಾರದಲ್ಲಿ 1934ರಲ್ಲಿ ಕ್ವೆಟ್ಟಾದಲ್ಲಿ 1935ರಲ್ಲಿ ಭೂಕಂಪವಾದಾಗ ರಾಜೇಂದ್ರಪ್ರಸಾದರು ಅಲ್ಲಿಯ ಜನರಿಗೆ ಅಪಾರ ಸೇವೆ ಸಲ್ಲಿಸಿದರು. ನೊಂದವರ ಕಷ್ಟನಿವಾರಹಣೆಗೆ 23 ಲಕ್ಷ ರೂಪಾಯಿಯನ್ನು ಸಂಗ್ರಹಿಸಿ ವ್ಯವಸ್ಥಿತವಾಗಿ ಖರ್ಚುಮಾಡಿದರು. 1942ರಲ್ಲಿ ‘ಚಲೇಜಾವ್ ಚಳವಳಿ’ಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಮತ್ತೆ ಜೈಲು ಸೇರಿದರು. ಮುಂದೆ 1947ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಬಂದಾಗ ಕೇಂದ್ರ ಮಂತ್ರಿಮಂಡಲದಲ್ಲಿ ಆಹಾರ ಮಂತ್ರಿಯಾದರು. ಮುಂದೆ ರಾಜ್ಯಾಂಗ ರಚನಾ ಸಭೆಯ ಅಧ್ಯಕ್ಷರಾಗಿ 1950 ಜನವರಿ 26 ರಂದು ಭಾರತ ಸಾರ್ವಭೌಮ ಪ್ರಜಾಪ್ರಭುತ್ವ ಗಣರಾಜ್ಯ ಎನಿಸಿದಾಗ ಅವರು ಪ್ರಥಮ ರಾಷ್ಟ್ರಪತಿಯಾದರು. 1950ರಿಂದ 62ರವರೆಗೆ ರಾಷ್ಟ್ರಪತಿಯಾಗಿದ್ದು ಅನಂತರ ನಿವೃತ್ತರಾದರು. .

  ರಾಜೇಂದ್ರಪ್ರಸಾದರು ಬಹುಭಾಷಾಪಂಡಿತರು. ಒಮ್ಮೆ ಅಖಿಲ ಭಾರತ ಹಿಂದೀ ಸಾಹಿತ್ಯ ಸಮ್ಮೇಳನ ಅಧ್ಯಕ್ಷತೆ ವಹಿಸಿದ್ದರು. ‘ಚಂಪಾರಣ್ಯ ಸತ್ಯಾಗ್ರಹದ ಕಥೆ’, ‘ಒಡೆದ ಭಾರತ’ ಅವರ ಅಮೂಲ್ಯ ಕೃತಿಗಳು. ‘ಅಜಾತಶತ್ರು’ ಎಂದು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು. ರಾಷ್ಟ್ರನಾಯಕ ಗಾಂಧೀಜಿಯ ನಿಷ್ಠಾವಂತ ಅನುಯಾಯಿ ಬಾಬೂ ರಾಜೇಂದ್ರಪ್ರಸಾದ್ ತಮ್ಮ ಹುಟ್ಟೂರಿನಲ್ಲಿ, ತಾವು ಸ್ಥಾಪಿಸಿದ ಆಶ್ರಮದಲ್ಲಿ 1963 ಫೆಬ್ರವರಿ 28ರಂದು ನಿಧನರಾದರು.

  Leave a Reply

  Your email address will not be published. Required fields are marked *