Kannada Essay on Ramkrishna Paramhans – ರಾಮಕೃಷ್ಣ ಪರಮಹಂಸರು

  Kannada Essay on Ramkrishna Paramhans

  ಬಂಗಾಳದ ಕಾಮಾರಪುಕುರವೆಂಬ ಹಳ್ಳಿಯಲ್ಲಿ 1836ನೇ ಫೆಬ್ರವರಿ 18 ರಂದು ರಾಮಕೃಷ್ಣ ಪರಮಹಂಸರು ಹುಟ್ಟಿದರು. ತಂದ ಖುದಿರಾಮ ಚಟ್ಟೋಪಾಧ್ಯಾಯ. ತಾಯಿ ಚಂದ್ರಮಣಿ, ರಾಮಕೃಷ್ಣರಿಗೆ ಹೆತ್ತವರು ಇಟ್ಟ ಹೆಸರು ಗದಾಧರ, ರಾಮಕೃಷ್ಣ ಎಂದೂ ಕರೆಯುತ್ತಿದ್ದರು. ಗದಾಧರನ ಏಳನೆಯ ವಯಸ್ಸಿನಲ್ಲೇ ಆತನ ತಂದೆ ತೀರಿಕೊಂಡರು. ಗದಾಧರನಿಗೆ ಶಾಲೆ ಎಂದರೆ ನಿರಾಸಕ್ತಿ. ಅವನ ಆಸಕ್ತಿ ದೇವರ ಧ್ಯಾನದಲ್ಲಿ ಭಜನೆಗಳಲ್ಲಿ, ರಾಣಿ ರಾಸಮಣಿ ಎನ್ನುವ ಐಶ್ವರ್ಯವಂತೆ ದಕ್ಷಿಣೇಶ್ವರದಲ್ಲಿ ಕಟ್ಟಿಸಿದ ಭವತಾರಿಣಿದೇವಿಯ ಮಂದಿರದಲ್ಲಿ ಗದಾಧರ ಅರ್ಚಕರಾದರು. ಅವರ ಪೂಜಾ ವಿಧಾನ ವಿಶಿಷ್ಟವಾಗಿತ್ತು. ಅವರು ಕಲ್ಲಿನ ವಿಗ್ರಹವನ್ನು ತಾಯಿಯೆಂದೇ ಪೂಜೆ ಮಾಡುತ್ತಿದ್ದರು. ರಾಮಕೃಷ್ಣರಿಗೆ ದೇವರನ್ನು ನೋಡಬೇಕೆಂಬ ಹುಚ್ಚೇ ಹಿಡಿಯಿತು. ದೇವರ ಹುಚ್ಚು ಹೆಚ್ಚಾದ ಹಾಗೆ ಪೂಜೆಯೂ ಹೆಚ್ಚಾಯಿತು. ಪೂಜಾರಿ ಹುಚ್ಚನೆಂದು ಭಕ್ತರು ದೂರಿದರು. ಆದರೆ ರಾಸಮಣಿ ತಾನೇ ಬಂದು ರಾಮಕೃಷ್ಣರು ಎಂಥ ಭಗವದ್ಭಕ್ತರೆಂದು ತಿಳಿದುಕೊಂಡಳು. ಮಗ ಹುಚ್ಚ ಎನ್ನುವುದನ್ನು ಕೇಳಿದ ತಾಯಿ ಆತನನ್ನು ಸ್ವಗ್ರಾಮಕ್ಕೆ ಕರೆದೊಯ್ದು ಮದುವೆ ಮಾಡಿಸಿದರು. ಮದುವೆಯಾದಾಗ ರಾಮಕೃಷ್ಣರಿಗೆ ಇಪ್ಪತ್ತಮೂರು ವರ್ಷ ಅವನ ಹೆಂಡತಿ ಶಾರದಾಮಣಿದೇವಿಗೆ ಐದು ವರ್ಷ.

  ರಾಮಕೃಷ್ಣ ದಕ್ಷಿಣೇಶ್ವರಕ್ಕೆ ವಾಪಸು ಬಂದಮೇಲೂ ಅವರಿಗೆ ದೇವರದೇ ಧ್ಯಾನವಾಯಿತು. ಅವರಿಗೆ ಭೈರವಿ ಬ್ರಾಹ್ಮಣಿ ಎಂಬಾಕೆಯೂ, ತೋತಾಪುರಿ ಎಂಬ ಸನ್ಯಾಸಿಯೂ ಗುರುಗಳಾಗಿ ಬಂದು ಸಾಧನೆಯ ಮಾರ್ಗವನ್ನು ತೋರಿಸಿದರು. ತಮ್ಮ ಸಾಧನೆಯಿಂದ ಭವತಾರಿಣಿ ಕಾಳಿಕಾಮಾತೆ, ಶ್ರೀರಾಮ ಇವರನ್ನೇ ಅಲ್ಲದೆ ಮಹಮ್ಮದೀಯರ ಅಲ್ಲಾಹ್ನನ್ನೂ ಕ್ರೈಸ್ತರ ಕ್ರಿಸ್ತನನ್ನೂ ಸಾಕ್ಷಾತ್ಕಾರ ಮಾಡಿಕೊಂಡ ಅನುಭವ ರಾಮಕೃಷ್ಣರಿಗಾಯಿತು. ದೇವರು ಒಬ್ಬನೇ, ಎಲ್ಲ ಧರ್ಮಗಳೂ ಅದೇ ದೇವರ ಬಳಿಗೆ ಕರೆದೊಯ್ಯುತ್ತವೆ ಎಂದು ಮನಗಂಡರು. ರಾಮಕೃಷ್ಣರ ಸಾಧನೆಗೆ, ಪೂಜೆಗೆ, ಜೀವನದ ರೀತಿಗೆ ಶಾರದಾದೇವಿ ಸರ್ವ ವಿಧದಲ್ಲೂ ನೆರವಾದರು. ಒಮ್ಮೆ ರಾಮಕೃಷ್ಣರು ಶಾರದಾದೇವಿಯನ್ನು ಕೂಡಿಸಿ ಜಗನ್ಮಾತೆಯನ್ನು ಪೂಜಿಸುವ ಹಾಗೆ ಪೂಜಿಸಿದರು.

  ಶಿಷ್ಯರಿಗೆ ಅವರಿಬ್ಬರೂ ತಂದೆ ತಾಯಿ ಆದರು. ಅವರನ್ನು ಕಾಣಲೆಂದು ಮತ್ತು ಭವತಾರಿಣಿಯ ದರ್ಶನಕ್ಕೆಂದು ಸಾವಿರಾರು ಮಂದಿ ದಕ್ಷಿಣೇಶ್ವರಕ್ಕೆ ಬರಲಾರಂಭಿಸಿದರು. ಹಾಗೆ ಬಂದವರಲ್ಲಿ ಮುಂದೆ ವಿವೇಕಾನಂದರಂದು ಪ್ರಸಿದ್ದರಾದ ನರೇಂದ್ರರೂ ಒಬ್ಬರು. ದೇವರಿಲ್ಲವೆಂದು ವಾದಿಸಲು ಬಂದ ನರೇಂದ್ರ, ರಾಮಕೃಷ್ಣರ – ಪಟ್ಟ ಶಿಷ್ಯರಾದರು; ರಾಮಕೃಷ್ಣರ ಉಪದೇಶವನ್ನು ದೇಶವಿದೇಶಗಳಲ್ಲೆಲ್ಲಾ ಸಾರಿದರು. ರಾಮಕೃಷ್ಣರು ವಾಗ್ನಿಗಳಲ್ಲ. ತಮ್ಮ ನಿರ್ಮಲ ಹೃದಯದಿಂದ, ಎಲ್ಲರಿಗೂ ಅರ್ಥವಾಗುವಂಥ ಮಾತುಗಳಿಂದ, ಸುಲಭ ಕಥೆಗಳಿಂದ, ಪ್ರೇಮದಿಂದ, ಅನುಕಂಪನದಿಂದ ಎಲ್ಲರ ಮನಸ್ಸನ್ನೂ ಸೆಳೆಯುತ್ತಿದ್ದರು. ತಮ್ಮ ಬಳಿಗೆ ಬಂದವರ ಕಷ್ಟಗಳನ್ನು ವಿಚಾರಿಸಿ ಶಾಂತಿಯ ದಾರಿ ತೋರಿಸುತ್ತಿದ್ದರು.

  1886 ಆಗಷ್ಟ 15ರಂದು ರಾಮಕೃಷ್ಣರು ಗಂಟಲು ವ್ಯಾಧಿಯಿಂದ ಕಣ್ಮರೆಯಾದರು. ಲಕ್ಷಾಂತರ ಜನರಿಗೆ ಮಾರ್ಗದರ್ಶಿಯಾಗಿ ಭಗವಂತನ ಕಡ ಮನಸ್ಸನ್ನು ಹರಿಸುವಂತ ಮಾಡಿದ ಮಹಾಪುರುಷ ಶ್ರೀರಾಮಕೃಷ್ಣ ಪರಮಹಂಸರು. ಎಲ್ಲ ಮತಗಳೂ ಒಂದೇ ಅನ್ನುವುದನ್ನು ಅವರು ಆಚರಣೆಯಲ್ಲಿ ತಂದು, ಎಲ್ಲ ಮತಗಳ ಮೂಲಕವೂ ದೇವರನ್ನು ಕಂಡು, ಸರ್ವಧರ್ಮ ಸಮನ್ವಯ ಸಾಧಿಸಿದರು.

  Leave a Reply

  Your email address will not be published. Required fields are marked *