ಶ್ರೀರಂಗಪಟ್ಟಣ ಇತಿಹಾಸ ಪ್ರಸಿದ್ದ ಪಟ್ಟಣ, ಮೈಸೂರು-ಬೆಂಗಳೂರು ರಾಜ್ಯ ಹೆದ್ದಾರಿಯಲ್ಲಿ ಕಾವೇರಿ ನದಿಯಿಂದ ಸುತ್ತುವರಿದಿರುವ ದ್ವೀಪ ಮತ್ತು ಒಂದು ಪುಣ್ಯಕ್ಷೇತ್ರ, ಮೈಸೂರಿನ ಉತ್ತರಕ್ಕೆ 13 ಕಿ.ಮೀ. ದೂರದಲ್ಲಿ ಇದೆ. ಸ್ಥಳ ಪುರಾಣದ ಪ್ರಕಾರ ಪೂರ್ವದಲ್ಲಿ ಗೌತಮ ಋಷಿ ಇಲ್ಲಿಯ ಆದಿರಂಗನನ್ನು ಪೂಜಿಸಿ ಇಲ್ಲಿ ವಾಸಿಸುತ್ತಿದ್ದರಿಂದ ಇದಕ್ಕೆ ‘ಗೌತಮ ಕ್ಷೇತ್ರ’ ಎಂಬ ಹೆಸರಿತ್ತು. ಎನ್ನಲಾಗಿದೆ. 844ರಲ್ಲಿ ಗಂಗರ ಸಾಮಂತನಾದ ತಿರುಮಲಯ್ಯ ರಂಗನಾಥ ಸ್ವಾಮಿ ದೇವಾಲಯವನ್ನು ಕಟ್ಟಿಸಿ ಇದಕ್ಕೆ ಶ್ರೀರಂಗಪುರ ಎಂದು ಹೆಸರಿಟ್ಟನೆಂದು ಕೆಲವು ಶಾಸನಗಳಿಂದ ತಿಳಿದು ಬರುತ್ತದೆ. 15-16ನೇ ಶತಮಾನದಲ್ಲಿ ವಿಜಯನಗರದ ಚಕ್ರವರ್ತಿಗಳು ಪಟ್ಟಣವನ್ನು ತಮ್ಮದಾಗಿ ಮಾಡಿಕೊಂಡರು.
ಆ ದ್ವೀಪ ನಗರಕ್ಕೆ ನೈಸರ್ಗಿಕ ರಕ್ಷಣೆಯಿದ್ದರೂ ಸುತ್ತಲೂ ಬಲವಾದ ಕೋಟೆಯನ್ನು ಕಟ್ಟಿಸಿದರು. ವಿಜಯನಗರದ ಪತನಾನಂತರ ಮೈಸೂರಿನ ರಾಜಒಡೆಯರು 1610ರಲ್ಲಿ ಶ್ರೀರಂಗ ಪಟ್ಟಣವನ್ನು ವಶಪಡಿಸಿಕೊಂಡರು. ಮುಂದೆ 1761 ವೇಳೆಗೆ ಹೈದರನು ಪ್ರಾಬಲ್ಯಕ್ಕೆ ಬಂದನು. ಮೈಸೂರು ರಾಜರನ್ನು ಮೂಲೆಗೊತ್ತಿ ತಾನೇ ಆಡಳಿತ ನಡೆಸತೊಡಗಿದನು. ಅನಂತರ ಇವನ ಮಗ ಟಿಪ್ಪು ಅಧಿಕಾರಕ್ಕೆ ಬಂದನು. 1799ರಲ್ಲಿ ಟಿಪ್ಪುವಿನ ನಿಧನಾನಂತರ ಬ್ರಿಟಿಷರು ಶ್ರೀರಂಗಪಟ್ಟಣವನ್ನು ವಶಪಡಿಸಿಕೊಂಡರು. ಇಲ್ಲಿರುವ ಶ್ರೀರಂಗನಾಥ ಸ್ವಾಮಿ ದೇವಾಲಯ ದ್ರಾವಿಡ ಶೈಲಿಯಲ್ಲಿದೆ. ದೇವಾಲಯದ ಒಳಭಾಗ ಬಹುಪಾಲು ಹೊಯ್ಸಳರ ಕಾಲದ್ದು. ಗರ್ಭಗೃಹ ಮತ್ತು ಸುಕನಾಸಿಗಳ ಚಾವಣಿಗಳ ಮಧ್ಯದಲ್ಲಿ ಪದ್ಯಗಳನ್ನು ಬಿಡಿಸಿದೆ. ಶ್ರೀರಂಗನಾಥನ ಮುಖ್ಯ ವಿಗ್ರಹ ಸುಂದರವಾಗಿದೆ. ಏಳು ಹೆಡೆಗಳಿರುವ ಆದಿಶೇಷನ ಮೇಲೆ ಪವಡಿಸಿದ್ದಾನೆ. ವಿಗ್ರಹದ ಪಾದದ ಬಳಿ ಲಕ್ಷ್ಮೀ ವಿಗ್ರಹವಿದೆ. ಅಲ್ಲದೆ ಗೌತಮ ಮುನಿಯ ವಿಗ್ರಹವೂ ಇದೆ. ಟಿಪ್ಪುಸುಲ್ತಾನ್ ಈ ದೇವಾಲಯಕ್ಕೆ ಕೊಟ್ಟಿದ್ದನೆಂದು ಹೇಳುವ ಕೆಲವು ಬೆಳ್ಳಿ ಪಾತ್ರೆಗಳೂ ಇಲ್ಲಿವೆ. ಇಲ್ಲಿರುವ ಇತರ ಪ್ರಮುಖ ದೇವಾಲಯಗಳೆಂದರೆ ನರಸಿಂಹ ಮತ್ತು ಗಂಗಾಧರೇಶ್ವರ ದೇವಾಲಯಗಳು. ಹೊಯ್ಸಳರ ಕಾಲದ ಲಕ್ಷ್ಮೀನರಸಿಂಹ ವಿಗ್ರಹ ಸುಂದರವಾಗಿ ಕೆತ್ತಲ್ಪಟ್ಟಿದೆ. ಇಲ್ಲಿರುವ ಅಂಬೆಗಾಲು ಕೃಷ್ಣ ಆಕರ್ಷಕವಾಗಿದೆ. ಇಲ್ಲಿ 31/2 ಅಡಿ ಎತ್ತರದ 17ನೆಯ ಶತಮಾನದ ಕಂಠೀರವ ನರಸರಾಜ ಒಡೆಯರ ವಿಗ್ರಹವಿದೆ. ಶ್ರೀರಂಗಪಟ್ಟಣವನ್ನು ಸುತ್ತುವರಿದಿದ್ದ ಗಟ್ಟಿಕೋಟೆಯ ಅವಶೇಷವನ್ನು ಈಗಲೂ ಕಾಣಬಹುದು.
ಟಿಪ್ಪುವಿನ ಅರಮನೆ ಎನ್ನುವ ಲಾಲ್‌ಮಹಲ್ ಈಗ ನಾಶವಾಗಿದೆ. ಖೈದಿಗಳನ್ನು ಬಂಧಿಸಿಡುತ್ತಿದ್ದ ಎರಡು ನೆಲಮಾಳಿಗೆ ಮತ್ತು ಬಂದೀಖಾನೆಗಳಿವೆ (ಇವನ್ನು ಉಗ್ರಾಣಗಳನ್ನಾಗಿಯೂ ಬಳಸಲಾಗುತ್ತಿತ್ತು). ಕೋಟೆಯ ಸುತ್ತ ಕಂದಕವಿದ್ದು ಅದರಲ್ಲಿ ಕಾವೇರಿ ನದಿಯ ನೀರು ತುಂಬುವಂತೆ ಮಾಡಲಾಗುತ್ತಿತ್ತು. ಕೋಟೆಯೊಳಗಡೆ ಇರುವ ಜುಮಾ ಮಸೀದಿಯನ್ನು ಟಿಪ್ಪು 1787ರಲ್ಲಿ ಕಟ್ಟಿಸಿದ. ಎರಡು ಮೀನಾರುಗಳಿದ್ದು ಅವುಗಳ ಒಳಗಿನಿಂದ ಮೇಲಕ್ಕೆ ಹತ್ತಿ ಹೋಗಲು ಮೆಟ್ಟಿಲುಗಳಿವೆ. ಇಲ್ಲಿರುವ ಗುಂಬಜನ್ನು ಹೈದರಾಲಿಯ ಅಪೇಕ್ಷೆಯಂತೆ ಟಿಪ್ಪು ಕಟ್ಟಿಸಿದ ಎಂದು ಪ್ರತೀತಿ. ಇಲ್ಲಿ ಹೈದರ್, ಅವನ ಪತ್ನಿ ಫಕ್ರುನ್ನೀಸಾ ಬೇಗಂ ಹಾಗೂ ಟಿಪ್ಪುಸುಲ್ತಾನರ ಸಮಾಧಿಗಳಿವೆ. ಇಲ್ಲಿನ ದೊಡ್ಡ ಆಕಾರದ ಗುಂಬಜ್‌ನ ಕೈಸಾಲೆಯಲ್ಲಿರುವ ಕರಿಯ ಕಂಬಗಳು ಅಂದವಾಗಿವೆ. ಬಾಗಿಲುಗಳು ದಂತದ ಕುಶಲ ಕೆತ್ತನೆ ಕೆಲಸದಿಂದ ಕೂಡಿವೆ.
ಶ್ರೀರಂಗಪಟ್ಟಣದ ಕೋಟೆಯ ಹೊರಗಡೆ ಸುಂದರವಾದ ವಿಶಾಲ ತೋಟವಿದೆ. ಇದರ ಮಧ್ಯೆ ಟಿಪ್ಪುಸುಲ್ತಾನ್ 1784ರಲ್ಲಿ ಕಟ್ಟಿಸಿದ ದರಿಯಾ ದೌಲತ್ ಅಥವಾ ಬೇಸಿಗೆ ಅರಮನೆಯಿದೆ. ಈ ಅರಮನೆಯ ತುಂಬ ಚಿತ್ರಕಲೆಯಿದೆ. ದರಿಯಾದೌಲತ್ ಎಂದರೆ ‘ಸಮುದ್ರ ಸಂಪತ್ತು’ ಎಂದು ಅರ್ಥವಿದೆ. ಟಿಪ್ಪು ತನ್ನ ರಾಜ್ಯವನ್ನು ಸಮುದ್ರದವರೆಗೆ ವಿಸ್ತರಿಸಿದ ನೆನಪಿಗೆ ಇದನ್ನು ನಿರ್ಮಿಸಿದ ಎನ್ನುವುದುಂಟು. ಟಿಪ್ಪು ಈ ಅರಮನೆಯಲ್ಲಿ ರಾಯಭಾರಿಗಳನ್ನು, ಮುಖ್ಯ ಅತಿಥಿಗಳನ್ನು ಭೇಟಿ ಮಾಡುತ್ತಿದ್ದ. ದರಿಯಾದೌಲತ್ ಅರಮನೆ ಎತ್ತರವಾದ ಚೌಕಾಕಾರದ ಜಗತಿಯ ಮೇಲೆ ನಿರ್ಮಿತವಾಗಿದೆ. ದಪ್ಪನಾದ ಕಮಲದ ಆಕಾರದ ಮರದ ಕಂಬಗಳೂ, ಅರೆ ಗೋಲಾಕೃತಿಯ ಕಮಾನುಗಳಿಂದ ವ್ಯವಸ್ಥಿತವಾಗಿದೆ. ಇಲ್ಲಿಯ ಗೋಡೆಯ ಹೊರಭಾಗದಲ್ಲಿ ಆ ಕಾಲದ ಪ್ರಮುಖ ಘಟನೆಗಳನ್ನು, ಯುದ್ದಗಳನ್ನು, ಸಮಕಾಲೀನ ರಾಜರನ್ನು ಸೂಚಿಸುವ ವರ್ಣಚಿತ್ರಗಳನ್ನು ಬರೆಯಲಾಗಿದೆ. ಒಳಗಿನ ಗೋಡೆಗಳ, ಕಂಬಗಳ ಮತ್ತು ಛಾವಣಿಗಳಲ್ಲಿ ವಿವಿಧ ವರ್ಣಗಳಿಂದಲೂ, ಚಿನ್ನದ ಮುಲಾಮಿನಿಂದಲೂ ರಚಿತವಾದ ಎಲೆ, ಬಳ್ಳಿ, ಹೂವು, ಮೃಗ, ಪಕ್ಷಿಗಳು ಪ್ರಕೃತಿ ಸಹಜವಾಗಿವೆ. ಈ ಭಿತ್ತಿ ಚಿತ್ರಗಳನ್ನು 1791ರ ಸುಮಾರಿನಲ್ಲಿ ಬಿಡಿಸಿರಬಹುದು ಎಂದು ಅಂದಾಜುಮಾಡಲಾಗಿದೆ. ಗಾಳಿ ಮತ್ತು ಬಿಸಿಲಿನ ತಾಪಕ್ಕೆ ಇಲ್ಲಿಯ ಕೆಲವು ಭಾಗಗಳು ಮಂಕಾಗಿದ್ದು ಅವುಗಳನ್ನು 1920ರಲ್ಲಿ ಸರಿಪಡಿಸುವ ಕೆಲಸ ಆರಂಭವಾಯಿತು. ಇಲ್ಲಿನ ಚಿತ್ರಗಳಲ್ಲಿನ ವರ್ಣಗಳ ಈಗಲೂ ತಮ್ಮ ಹೊಳಪನ್ನು ಕಳೆದುಕೊಂಡಿಲ್ಲ. ಈ ಭಿತ್ತಿ ಚಿತ್ರಗಳನ್ನು ಕರ್ನಾಟಕದ ಚಿತ್ರಕಾರರು ರಚಿಸಿದ್ದಾರೆಂದು ತಿಳಿಯಲಾಗಿದೆ. ದರಿಯಾ ದೌಲತ್ ಅರಮನೆಯ ಪೂರ್ವದಿಕ್ಕಿನ ಭಿತ್ತಿಯಲ್ಲಿ ಅನೇಕ ರಾಜರು, ನವಾಬರು ಹಾಗೂ ಪಾಳೇಗಾರರನ್ನು ಚಿತ್ರಿಸಲಾಗಿದೆ. ಇಲ್ಲಿ ಹೈದರ್ ಮತ್ತು ಟಿಪ್ಪುವಿಗೆ ಸೇರಿದ ವರ್ಣಚಿತ್ರಗಳೂ, ಲಿಥೋ ಚಿತ್ರಗಳೂ, ನಿಸರ್ಗ ಚಿತ್ರಗಳೂ, ತೈಲವರ್ಣದ ಭಾವಚಿತ್ರಗಳೂ ಇವೆ. ಟಿಪ್ಪುವಿನ ಕೈಕೆಳಗೆ ಸೇವೆ ಸಲ್ಲಿಸಿದ ಅಧಿಕಾರಿಗಳ ಹಾಗೂ ಆತನ ಏಳು ಜನ ಗಂಡು ಮಕ್ಕಳ ಚಿತ್ರಗಳನ್ನು ಇಲ್ಲಿ ಪ್ರದರ್ಶಿಸಲಾಗಿದೆ.