Kannada Essay on Subhash Chandra Bose – ಸುಭಾಷ್ ಚಂದ್ರ ಬೋಸ್

  Kannada Essay on Subhash Chandra Bose

  ಸುಭಾಷರು 23 ಜನವರಿ 1897ರಲ್ಲಿ ಒರಿಸ್ಸಾದಲ್ಲಿ ಜನಿಸಿದರು. ತಂದೆ ರಾವ್ ಬಹದ್ದೂರ್ ಜಾನಕೀನಾಥ ಬೋಸ್. ನಿಷ್ಠಾವಂತ ವಕೀಲರು, ತಾಯಿ ಪ್ರಭಾವತಿ ದೇವಿ, ಸಂಪ್ರದಾಯ, ಧರ್ಮ, ಆಚಾರಗಳಲ್ಲಿ ನಿಷ್ಠೆ ಇದ್ದವರು. ಮಿಕ್ ಮುಗಿಸಿದ ಸುಭಾಷರು 1913ರಲ್ಲಿ ಕಲ್ಕತ್ತೆಯ ಪ್ರೆಸಿಡೆನ್ಸಿ ಕಾಲೇಜು ಸೇರಿದರು. 1914ರಲ್ಲಿ ಗೆಳೆಯರೊಡಗೂಡಿ ಬ್ರಹ್ಮಚರ್ಯ ಮತ್ತು ದೇಶಸೇವೆಯ ವ್ರತ ಕೈಗೊಂಡರು. 1919ರಲ್ಲಿ ವಿದೇಶಕ್ಕೆ ಹೋಗಿ ಐ.ಸಿ.ಎಸ್. ಪರೀಕ್ಷೆಯಲ್ಲಿ ತೇರ್ಗಡೆಹೊಂದಿದರು. ಕೆಲವೇ ದಿನಗಳಲ್ಲಿ ಅದನ್ನು ವಾಪಸು ಮಾಡಿ “ಬ್ರಿಟಿಷ್ ಸರ್ಕಾರದ ಸೇವೆಯ ಗುಲಾಮಗಿರಿ ಬೇಡ. ಮಾತೃಭೂಮಿಯ ಬಂಧನ ವಿಮೋಚನೆಗೆ ಈ ಜೀವ ಮೀಸಲು” ಎಂದರು.

  1921ರಲ್ಲಿ ಭಾರತಕ್ಕೆ ಬಂದ ಸುಭಾಷರು ಗಾಂಧಿಯವರನ್ನು ಕಂಡರು. ಅದೇ ವರುಷ ನಿರಂಕುಶ ಪ್ರಭುತ್ವದ ವಿರುದ್ದ ಗಲಭೆ ನಡೆಸಿದರೆಂಬ ಆರೋಪದ ಮೇಲೆ ಸೆರೆಮನೆಯಲ್ಲಿಟ್ಟರು. ಆರು ತಿಂಗಳಿನ ನಂತರ ಅವರ ಬಿಡುಗಡೆಯಾಯಿತು. 1923ರಲ್ಲಿ “ಬಂಗಾಳ ಪ್ರಾಂತ್ಯ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದರು. ಆಗ ಅವರ ವಯಸ್ಸು 26 ವರ್ಷ. ಯುವಕರ ಉತ್ಸಾಹ, ದೇಶಾಭಿಮಾನ, ಕ್ರಿಯಾಶೀಲತೆಯ ಪ್ರತೀಕ ಎನಿಸಿದ ಸಿಡಿಲು ಮರಿ ಸುಭಾಷರು 1929ರಲ್ಲಿ ಪೂರ್ಣ ಸ್ವಾತಂತ್ಯವೇ ನಮ್ಮ ಗುರಿ’ ಎಂದು ಘೋಷಿಸಿದರು. ಬ್ರಿಟಿಷ್ ಸರ್ಕಾರ ಮತ್ತೆ ಅವರನ್ನು ಸೆರೆಯಲ್ಲಿಟ್ಟಿತು. 1931ರಲ್ಲಿ ಸುಭಾಷರು ಫ್ರಾನ್ಸ್, ಐರ್ಲೆಂಡ್ ಮೊದಲಾದ ದೇಶಗಳಲ್ಲಿ ಭಾರತದ ಸ್ವಾತಂತ್ರ್ಯ ಹೋರಾಟವನ್ನು ವಿವರಿಸಿ ಅಲ್ಲಿ ಬೆಂಬಲಗಳಿಸಿದರು. ಆಗ ಅವರು ಬರೆದ ‘ಭಾರತ ಸ್ವಾತಂತ್ರ್ಯ ಸಂಗ್ರಾಮ’ ಎಂಬ ಪುಸ್ತಕ ಭಾರತದೊಳಗೆ ಬರಬಾರದೆಂದು ಬ್ರಿಟಿಷ್ ಸರ್ಕಾರ ತಡೆಯಾಜ್ಞೆ ನೀಡಿತು.

  1938ರಲ್ಲಿ ಸುಭಾಷರು ಗಾಂಧೀಜಿಯವರೊಂದಿಗೆ ಭಿನ್ನಾಭಿಪ್ರಾಯ ಉಂಟಾಗಿ 16 ವರುಷಗಳ ಕಾಂಗ್ರೆಸಿನ ಸಂಬಂಧವನ್ನು ಕಡಿದುಕೊಂಡು ಹೊರಬಂದರು. ಕ್ರಾಂತಿಕಾರಿ ಮಾರ್ಗದಿಂದ ಭಾರತದ ಸ್ವಾತಂತ್ರ್ಯವನ್ನು ಸಾಧಿಸಬೇಕೆಂಬುದು ಅವರ ಯೋಚನೆಯಾಗಿತ್ತು. ಎರಡನೇ ಮಹಾಯುದ್ಧ ಆರಂಭವಾಯಿತು. ಭಾರತದಲ್ಲಿ ಕ್ರಾಂತಿಕಾರಿ ಚಟುವಟಿಕೆಗಳು ತೀವ್ರಗೊಂಡವು. ಸರ್ಕಾರ ಮತ್ತೆ ಅವರನ್ನು ಜೈಲಿಗೆ ಕಳಿಸಿತು. ಸುಭಾಷರು ಅಲ್ಲಿಯೇ 1940ರಲ್ಲಿ ಅಮರಣ ಉಪವಾಸ ಆರಂಭಿಸಿದರು. 1941ರಲ್ಲಿ ಸರ್ಕಾರದ ಬಂಧನದಿಂದ ಸುಭಾಷರು ತಪ್ಪಿಸಿಕೊಂಡರು. ಪರದೇಶಗಳ ಸಹಾಯಪಡದು ತಾಯ್ತಾಡನ್ನು ಬಂಧನ ಮುಕ್ತವನ್ನಾಗಿಸಲು ಯೋಚಿಸಿದರು. ಕಾಬೂಲಿನ ದಾರಿಯಾಗಿ ರಷ್ಯಾವನ್ನು ಹಾದು ಜರ್ಮನಿಗೆ ಹೋದರು. ಜರ್ಮನಿಯಲ್ಲಿ “ಆಜಾದ್‌ಹಿಂದ್” ಕೇಂದ್ರವನ್ನು ಸ್ಥಾಪಿಸಿದರು. 1943ರಲ್ಲಿ ಜಪಾನರ ಸಹಾಯ ಪಡೆದು ಸೆರೆಯಾಳುಗಳಾಗಿದ್ದ ಭಾರತೀಯ ಸೈನಿಕರ ಮನವೊಲಿಸಿ “ಆಜಾದ್ ಹಿಂದ್ ಫೌಜ್” ಕಟ್ಟಿದರು. ಅದೇ ವರ್ಷ ಚಲೋ ದೆಹಲಿ ಕರೆಯನ್ನು ಕೊಟ್ಟರು. 1943 ನವೆಂಬರ್ 17 ರಂದು ರಂಗೂನಿನಲ್ಲಿ ಆಜಾದ್ ಹಿಂದ್ ಸರ್ಕಾರದ ಸ್ಥಾಪನೆಯಾಯಿತು. ದಂಡನಾಯಕನ ಉಡುಪು ಧರಿಸಿದ ಧೀರ ನಿಲುವಿನ ಸುಭಾಷ್ ಸ್ವತಂತ್ರ ಭಾರತ ಸರಕಾರದ ಸ್ಥಾಪನೆಯನ್ನು ಘೋಷಿಸಿದರು. 1944 ಜನವರಿ 24ರಂದು ರಂಗೂನಿನಲ್ಲಿ ಭಾರತೀಯರು ಸ್ವಾತಂತ್ರ್ಯೋತ್ಸವವನ್ನು ಆಚರಿಸಿದರು.

  1945 ರಲ್ಲಿ ಸುಭಾಷರು ಟೋಕಿಯೋಗೆ ಪ್ರಯಾಣ ಮಾಡುತ್ತಿದ್ದಾಗ ಅವರ ವಿಮಾನಕ್ಕೆ ಬೆಂಕಿ ಹತ್ತಿತು. ಅವರ ದೇಹದ ಭಸ್ಮವನ್ನು ಟೋಕಿಯೋದ ‘ರಾನ್‌ಕೋಜಿ’ ದೇವಾಲಯದಲ್ಲಿಟ್ಟಿದೆ. ಜರ್ಮನಿಯಲ್ಲಿದ್ದಾಗ ಅವರು ಜರ್ಮನ್ ಮಹಿಳೆಯೊಬ್ಬರನ್ನು ವಿವಾಹವಾದರು. ಅವರ ಪುತ್ರಿ ಅನಿತಾ ಬೋಸ್.

  “ಭಾರತದ ವೀರರೇ, ನನಗೆ ನಿಮ್ಮ ರಕ್ತ ಕೊಡಿ; ನಿಮಗೆ ನಾನು ಸ್ವಾತಂತ್ರ್ಯ ಕೊಡುತ್ತೇನೆ” ಎಂದು ಕರೆನೀಡಿದ ಸುಭಾಷ್ ಚಂದ್ರಬೋಸರನ್ನು ನೇತಾಜಿ ಎಂದು ಪ್ರೀತಿ, ಗೌರವಗಳಿಂದ ಕರೆಯಲಾಗುತ್ತಿದೆ.

  Leave a Reply

  Your email address will not be published. Required fields are marked *